ಕೋಲಾರ: ಲಾಕ್‌ಡೌನ್ ಅವಧಿಯಲ್ಲಿಯೂ ಉದ್ಯೋಗ ಖಾತ್ರಿ ಯೋಜನೆಯು ಜಿಲ್ಲೆಯ ಗ್ರಾಮೀಣ ಜನತೆಯ ಪ್ರಮುಖ ಆದಾಯ ಮೂಲವಾಗಿದೆ.
ದೈಹಿಕ ಅಂತರ ಕಾಪಾಡಿಕೊಂಡು ಎಂತದ್ದೇ ಮಾನವಶಕ್ತಿ ಸೃಜನೆಯ ಕೆಲಸವನ್ನು ಮಾಡ ಬಹುದು ಎಂಬುದಷ್ಟೇ ನರೇಗಾಗೆ ವಿಧಿಸಿರುವ ಹೊಸ ಷರತ್ತಾಗಿದೆ. ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಸಾವಿರಾರು ಮಂದಿ ಕೆಲಸ ಮಾಡುತ್ತಿದ್ದು, ಶುಕ್ರವಾರ ಸಂಜೆ ವೇಳೆಗೆ 33,180 ಮಾನವ ದಿನಗಳನ್ನು ಸೃಜಿಸಲಾಗಿತ್ತು. ಶನಿವಾರಕ್ಕೆ ಇದಕ್ಕೆ ಮತ್ತೂಂದು ಸಾವಿರದಷ್ಟು ಮಾನವ ಸೃಜನೆಯ ಕಾರ್ಯ ಸೇರ್ಪಡೆ ಯಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಅಂದಾಜು ಮಾಡುತ್ತಿದ್ದಾರೆ.
ಲಾಕ್‌ಡೌನ್ ಆರಂಭಿಕ ದಿನಗಳಲ್ಲಿ ಯಾವುದೇ ಕೆಲಸ ಕಾರ್ಯ ಮಾಡಬಾರ ದೆಂಬ ಭೀತಿ ಎದುರಾಗಿತ್ತು. ಆದರೆ, ಆನಂತರದ ದಿನಗಳಲ್ಲಿ ನರೇಗಾಗೆ ಹಸಿರು ನಿಶಾನೆ ಸಿಕ್ಕಿರುವುದ ರಿಂದ ಸಾವಿರಾರು ಮಂದಿ ಮನೆಗಳಿಂದ ಹೊರ ಬಂದು ವಿವಿಧ ಖಾತ್ರಿ ಕಾಮಗಾರಿಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುತ್ತಿದ್ದಾರೆ. ವಿದ್ಯಾವಂತರು ಸೇರ್ಪಡೆ: ಕೋಲಾರ ತಾಲೂಕಿನ ಕೋಟಿ ಗಾನಹಳ್ಳಿ ಹೊಸಕೆರೆಯಲ್ಲಿ ಲಾಕ್‌ಡೌನ್ ಆರಂಭಕ್ಕೂ ಮುನ್ನವೇ ಉದ್ಯೋಗ ಖಾತ್ರಿಯಲ್ಲಿ ಕೆರೆ ಹೂಳೆತ್ತುವ ಕಾಮ ಗಾರಿ ಆರಂಭವಾಗಿತ್ತು. ಆದರೆ, ಹತ್ತಿಪ್ಪತ್ತು ಮಂದಿ ಮಾತ್ರವೇ ಕೆಲಸಕ್ಕೆ ಬರುತ್ತಿ ದ್ದರು. ಆದರೆ, ಲಾಕ್‌ಡೌನ್‌ನಿಂದ ಉಳಿದ ಆದಾಯ ಮೂಲ ಕೆಲಸಗಳು ಸ್ಥಗಿತಗೊಂಡಿ ರುವುದರಿಂದ ಶನಿವಾರ 60ಕ್ಕೂ ಹೆಚ್ಚು ಮಂದಿ ಅದರಲ್ಲೂ ವಿದ್ಯಾವಂತ ಯುವಕ ಯುವತಿಯರು ಕೆಲಸದಲ್ಲಿ ಸೇರ್ಪಡೆಯಾಗಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿಯೇ ದೈಹಿಕ ಮಿತಿ ಕಾಪಾಡಿಕೊಂಡು ಗ್ರಾಮೀಣ ಜನತೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳು ತೆಗೆಯುವುದು, ಕೆರೆಯಲ್ಲಿ ನಾಟಿ ಮಾಡುವುದು, ಬದುಗಳ ನಿರ್ಮಾಣ, ನೀರು ಒಳ ಹರಿವು ಹೊರ ಹರಿವು ಕಾಲುವೆಗಳ ನಿರ್ಮಾಣ, ಮಣ್ಣಿನ ರಸ್ತೆ, ವೈಯಕ್ತಿಕವಾಗಿ 2 ಎಕರೆ ಜಮೀನುಗಳ ಬದು ನಿರ್ಮಾಣ, ಮನೆ ನಿರ್ಮಾಣದಂತ ಕೆಲಸಗಳನ್ನು ಮಾಡಬಹುದಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಮಿಕ್ಕೆಲ್ಲಾ ಕೆಲಸ ಕಾರ್ಯಗಳು ಸ್ಥಗಿತಗೊಂಡಿರುವುದರಿಂದ ಉದ್ಯೋಗ ಖಾತ್ರಿ ಕೋಲಾರ ಜಿಲ್ಲೆಯ ಜನತೆಗೆ ವರದಾನವಾಗಿ ಪರಿಣಮಿಸಿದೆ.
ದೈಹಿಕ ಅಂತರದ ಹೊಸ ಷರತ್ತಿಗೊಳಪಟ್ಟು ಉದ್ಯೋಗ ಖಾತ್ರಿ ಯೋಜನೆಯನ್ನು ಹಿಂದಿನ ನಿಯಮಾವಳಿಗಳನ್ವಯ ಮಾನವ ಸೃಜನೆಯ ಎಲ್ಲಾ ಕಾಮಗಾರಿಗಳನ್ನು ಮಾಡಲು ಅವಕಾಶವಿದ್ದು, ಗ್ರಾಮೀಣ ಜನತೆ ನರೇಗಾವನ್ನು ಮತ್ತಷ್ಟು ಸದ್ಬಳಕೆಮಾಡಿಕೊಳ್ಳಬೇಕು.
–ಸಿ.ಎಸ್.ವೆಂಕಟೇಶ್, ಅಧ್ಯಕ್ಷರು, ಜಿಪಂ
-ಕೆ.ಎಸ್.ಗಣೇಶ್