Advertisement
ಮೊದಲು ನೆರೆ ಹಾವಳಿಯಿಂದ ಅಪಾರ ನಷ್ಟ ಅನುಭವಿಸಿದ್ದ ಜನರಿಗೆ ಈಗ ಕೋವಿಡ್ 19 ವೈರಸ್ ಶಾಪವಾಗಿ ಬಂದಿದೆ. ಎಲ್ಲ ಇದ್ದರೂ ಅನುಭವಿಸುವಂತಿಲ್ಲ. ಇದಕ್ಕೆ ಬೆಳಗಾವಿ ಜಿಲ್ಲೆ ಹೊರತಾಗಿಲ್ಲ. ಕೋವಿಡ್ 19 ವೈರಸ್ ಹಾವಳಿ ತಡೆಗಟ್ಟಲು ಸರ್ಕಾರ ಜಾರಿಗೆ ತಂದಿರುವ ಲಾಕ್ ಡೌನ್ ಆದೇಶ ಸಾಕಷ್ಟು ಸಮಸ್ಯೆ ಉಂಟು ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಕೈಯಲ್ಲಿ ಕೆಲಸವಿಲ್ಲದೆ ಕಂಗೆಟ್ಟ ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಬಹು ದೊಡ್ಡ ಆಸರೆಯಾಗಿದೆ. ಅನೇಕರ ಜೀವನದಲ್ಲಿ ಆಶಾಕಿರಣವಾಗಿ ಗೋಚರಿಸಿದೆ.
Related Articles
Advertisement
ಈ ಮೊದಲು ನಗರ ಪ್ರದೇಶಗಳಿಗೆ ಹೋಗಿದ್ದ ಗ್ರಾಮಗಳ ಬಹಳಷ್ಟು ಜನರು ಮರಳಿ ಊರಿಗೆ ಬಂದಿದ್ದಾರೆ. ಅವರಿಗೂ ಕೆಲಸದ ಅಗತ್ಯವಿದೆ. ಗ್ರಾಮಕ್ಕೆ ಬಂದವರಿಗೆ ಒಂದು ವೇಳೆ ಜಾಬ್ ಕಾರ್ಡ್ ಇಲ್ಲದಿದ್ದರೆ ಅವರು ಅದೇ ಊರಿನವರಾಗಿದ್ದರೆ ಹೊಸದಾಗಿ ಕಾರ್ಡ್ ವಿತರಿಸಲು ಕ್ರಮವಹಿಸಲಾಗಿದೆ. ಇದುವರೆಗೆ 548 ಜನರಿಗೆ ಹೊಸ ಜಾಬ್ ಕಾರ್ಡ್ ಕೊಡಲಾಗಿದೆ ಎಂಬುದು ಅಧಿಕಾರಿಗಳ ಹೇಳಿಕೆ.
ಖಾತ್ರಿ ಯೋಜನೆಯಡಿ ಈಗ ಜಿಲ್ಲೆಯಲ್ಲಿ ವೈಯಕ್ತಿಕ ಕಾಮಗಾರಿಗಳ ಜೊತೆಗೆ ಕೆರೆಗಳ ಹೂಳೆತ್ತುವುದು, ನಾಲಾಗಳ ಹೂಳೆತ್ತುವಿಕೆ. ಬದುವು-ಕೃಷಿ ಹೊಂಡಗಳ ನಿರ್ಮಾಣ, ಅರಣ್ಯ ಇಲಾಖೆಯಿಂದ ಸಸಿ ನೆಡಲು ಗುಂಡಿಗಳ ನಿರ್ಮಾಣ, ಕುರಿದೊಡ್ಡಿ, ದನದ ಕೊಟ್ಟಿಗೆಗಳನಿರ್ಮಾಣ, ತೋಟಗಾರಿಕೆ ಸಂಬಂಧಿಸಿದಂತೆ ರೈತರು ತಮ್ಮ ಹೊಲಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಕೆಲಸ ನಡೆದಿರುವ ಎಲ್ಲ ಕಡೆ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇದುವರೆಗೆ 24980 ಜನರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು.
ಅವರೆಲ್ಲರಿಗೆ ಕೆಲಸದ ಆದೇಶ ನೀಡಲಾಗಿದೆ. ಇದುವರೆಗೆ 10194 ಕುಟುಂಬಗಳ 15283 ಜನರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ್ದು ಈ ಎಲ್ಲ ಕುಟುಂಬಗಳಿಗೆ ಪ್ರತಿ ದಿನ 275 ರೂ. ಕೂಲಿ ಮೊತ್ತದಂತೆ ಒಟ್ಟು 3.52 ಕೋಟಿ ರೂ. ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಇದುವರೆಗೆ 1,13,123 ಮಾನವ ದಿನ ಸೃಜಿಸಲಾಗಿದೆ ಎಂದು ಜಿಪಂ ಉಪ ಕಾರ್ಯದರ್ಶಿ (ಅಭಿವೃದ್ಧಿ) ಎಸ್.ಬಿ. ಮುಳ್ಳಳ್ಳಿ ಹೇಳಿದರು.
ಕೆರೆಗಳ ಹೂಳೆತ್ತುವ ಸಂದರ್ಭದಲ್ಲಿ 4-5 ಜನರು ಮಾತ್ರ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ. ವೈಯಕ್ತಿಕ ಕಾಮಗಾರಿ, ಕೃಷಿ ಹೊಂಡ, ಬದುವು ನಿರ್ಮಾಣ, ನಾಲಾ ಹೂಳೆತ್ತುವ ಕಾಮಗಾರಿಗಳು ಆದ್ಯತೆ ಮೇಲೆ ನಡೆದಿವೆ. ಸದ್ಯ ಕೋವಿಡ್ 19 ವೈರಸ್ ಖಚಿತ ಪಟ್ಟಿರುವ ಪ್ರದೇಶಗಳ ಗ್ರಾಪಂ ವ್ಯಾಪ್ತಿಯಲ್ಲಿ ಮಾತ್ರ ಉದ್ಯೋಗ ಖಾತ್ರಿ ಕೆಲಸಗಳು ನಡೆದಿಲ್ಲ. –ರಾಜೇಂದ್ರ ಕೆ.ವಿ ಜಿಪಂ ಸಿಇಒ
-ಕೇಶವ ಆದಿ