ವಾಡಿ: ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮ ಪಂಚಾಯಿತಿ ಆಡಳಿತ, ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಪಡಿಸುವಲ್ಲಿ ವಿಫಲವಾಗಿದೆ. ಪರಿಣಾಮ ಶ್ರಮಿಕರ ಗೋಳಾಟ ಮುಂದುವರೆದಿದೆ.
ದುಡಿಯುವ ಕೈಗಳಿಗೆ ಕೆಲಸ ಕೊಡಿ ಎಂದು ಗ್ರಾಮಸ್ಥರು ಗೋಗರೆಯುತ್ತಿದ್ದರೂ ಗ್ರಾಪಂ ಅಧಿಕಾರಿಗಳು ಎನ್ ಎಂ ಆರ್ ತೆಗೆಯದೆ ತೊಂದರೆ ನೀಡುತ್ತಿದ್ದಾರೆ. ಎನ್ ಎಂ ಆರ್ ತೆಗೆದ ಕಾರ್ಮಿಕರಿಗೂ ಕೆಲಸದಿಂದ ವಂಚಿಸಲಾಗುತ್ತಿದೆ.
ಉದ್ಯೋಗ ಖಾತ್ರಿ ಕೆಲಸದಲ್ಲೂ ರಾಜಕಾರಣ ಕೆಲಸ ಮಾಡುತ್ತಿದ್ದು, ಗ್ರಾಮದ ಮುಖಂಡರ ನಡುವಿನ ವೈಯಕ್ತಿಕ ತಿಕ್ಕಾಟ, ಕಾರ್ಮಿಕರು ಕೆಲಸದಿಂದ ವಂಚಿತರಾಗುವಂತೆ ಮಾಡಿದೆ.
ಒಬ್ಬರು ಕೆಲಸಕ್ಕೆ ಹೋಗಿ ಎಂದು ಆದೇಶ ನೀಡುತ್ತಿದ್ದರೆ, ಇನ್ನೂ ಕೆಲವರು ಅವರಿಗೆ ಕೆಲಸ ಹೇಗೆ ಕೊಟ್ಟೀರಿ ಎಂದು ತಗಾದೆ ತೆಗೆಯುತ್ತಿದ್ದಾರೆ. ಕೆಲವರಿಗೆ ಕೆಲಸ ಕೊಟ್ಟು ಇನ್ನೂ ಹಲವರಿಗೆ ಕೆಲಸದಿಂದ ಹೊರಗಿಡುವ ಅಧಿಕಾರಿಗಳ ಕ್ರಮವೂ ಕೂಡ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಶನಿವಾರ ಬೆಳಗ್ಗೆ ಲಾಡ್ಲಾಪುರ ಹೊರ ವಲಯದ ಸಮಾರು 3 ಕಿ.ಮೀ. ದೂರದ ಹಳ್ಳದ ಪ್ರದೇಶಕ್ಕೆ ಕೆಲಸಕ್ಕೆಂದು ಹೋದ 400 ಕಾರ್ಮಿಕರ ವಿರುದ್ಧ ಕೆಲ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ 400 ಜನ ಕಾರ್ಮಿಕರು ಅರ್ಧ ಕೆಲಸ ಮಾಡಿ ಮನೆಗೆ ವಾಪಸ್ ಬರುವ ಮೂಲಕ ಅಧಿಕಾರಿಗಳಿಗೆ ಶಾಪ ಹಾಕಿದ ಘಟನೆ ನಡೆದಿದೆ. ರಣ ಬಿಸಿಲು ತಾಳದೆ ಕಾರ್ಮಿಕ ಮಹಿಳೆಯೊಬ್ಬರು ಕುಸಿದು ಬಿದ್ದು ನರಳಾಡಿದ ಪ್ರಸಂಗ ನಡೆದಿದೆ.
ಒಟ್ಟಾರೆ ಲಾಡ್ಲಾಪುರ ಗ್ರಾಮ ಪಂಚಾಯಿತಿಯ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಶಾಪವಾಗಿ ಪರಿಣಮಿಸಿದೆ. ಗ್ರಾಮದ ಕೆಲ ಮುಖಂಡರು ಕಾರ್ಮಿಕರ ಗುಂಪು ಕಟ್ಟಿಕೊಂಡು ಯೋಜನೆ ಸಾಕಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಕೂಡಲೇ ಎಲ್ಲಾ ಕಾರ್ಮಿಕರ ಎನ್ ಎಂ ಆರ್ ತೆಗೆದು ಕೆಲಸ ನೀಡಬೇಕು ಎಂದು ನೂರಾರು ಜನ ಕಾರ್ಮಿಕರು ಒತ್ತಾಯಿಸಿದ ಘಟನೆ ನಡೆಯಿತು. ಇದೇ ವೇಳೆ ಕಾರ್ಮಿಕರು ಗ್ರಾಮದ ಕೆಲ ಮುಖಂಡರ ಜತೆ ಮಾತಿನ ಚಕಮಕಿ ನಡೆಸಿ ವಾಗ್ದಾಳಿ ನಡೆಸಿದರು.
-ವರದಿ: ಮಡಿವಾಳಪ್ಪ ಹೇರೂರ