Advertisement

ನರೇಗಾ ಕಾರ್ಮಿಕರಿಗೆ ಸಿಕ್ಕಿಲ್ಲ ಕೂಲಿ ಹಣ

03:39 PM Oct 25, 2020 | Suhan S |

ಬೆಳಗಾವಿ: ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡು ಉದ್ಯೋಗ ಖಾತ್ರಿಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಳೆದ ಆರು ತಿಂಗಳಿಂದ ವೇತನ ನೀಡದೇ ಅನ್ಯಾಯ ಮಾಡಿರುವ ಸುಳೇಭಾವಿ ಗ್ರಾಪಂ ವಿರುದ್ಧ ಕಾರ್ಮಿಕರು ಕೆಲಸ ನಿಲ್ಲಿಸಿ ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.

Advertisement

ಸುಳೇಭಾವಿ ಗ್ರಾಪಂನಲ್ಲಿ ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಪಿಡಿಒ ಶ್ರೀದೇವಿ ಹಿರೇಮಠ ಹಾಗೂ ನರೇಗಾ ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ಕೂಲಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ನೇಕಾರಿಕೆ ಉದ್ಯೋಗ ಮಾಡುತ್ತಿದ್ದ ಅನೇಕ ನೇಕಾರರು ಲಾಕ್‌ಡೌನ್‌ದಿಂದಾಗಿ ಕೆಲಸ ಕಳೆದುಕೊಂಡು ನರೇಗಾ ಕೂಲಿ ಕೆಲಸಕ್ಕೆ ಅರ್ಜಿ ಹಾಕಿ ದುಡಿಯುತ್ತಿದ್ದಾರೆ. ಕಳೆದ ಆರೇಳು ತಿಂಗಳಿಂದ ದಿನಾಲೂ ಪಂಚಾಯಿತಿ ನಿಗದಿ ಪಡಿಸಿದ ಕೆಲಸ ಮಾಡುತ್ತಿದ್ದಾರೆ. ಆದರೆ ಪಿಡಿಒ ಹಿರೇಮಠ ಅವರ ಬೇಜವಾಬ್ದಾರಿ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಕೂಲಿ ವೇತನ ಸಿಕ್ಕಿಲ್ಲ. ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಆರೋಪಿಸಿದರು.

ನೇಕಾರಿಕೆ ಉದ್ಯೋಗ ಸಂಪೂರ್ಣ ಕುಸಿದು ಬಿದ್ದಿದ್ದರಿಂದ ಕೂಲಿ ಕೆಲಸ ಮಾಡಿಯಾದರೂ ಬದುಕು ಸಾಗಿಸಬೇಕೆಂಬ ಕಾರ್ಮಿಕರ ಆಸೆಗೆ ಸುಳೇಭಾವಿ ಪಂಚಾಯಿತಿಯ ಅಧಿಕಾರಿಗಳು ತಣ್ಣೀರು ಎರಚಿದ್ದಾರೆ. ದುಡಿದ ಆರು ತಿಂಗಳ ವೇತನ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಉದ್ಯೋಗ ಖಾತ್ರಿ ಕೆಲಸ ಬಂದ್‌ ಮಾಡುವುದಾಗಿ ಎಚ್ಚರಿಕೆ ನೀಡಿದರು.

ನರೇಗಾ ಕೂಲಿ ಕಾರ್ಮಿಕರಾದ ನಾಗಪ್ಪ ಹುಡೇದ, ಬಾಳಕೃಷ್ಣ ನಿಂಗನಗೌಡ, ಲಕ್ಷ್ಮಣ ಅಮಾತಿ, ಭೀಮಶಿ ಕೌತಗಾರ, ಟೋಪಣ್ಣ ಪಂಕು, ಗೀತಾ ಮೂಕನವರ, ಸೇವಂತಾ ಭೈರಪ್ಪನವರ, ಸಕ್ಕುಬಾಯಿ ಧರ್ಮೋಜಿ ಇನ್ನಿತರರಿದ್ದರು.

Advertisement

 ಇಸ್ಲಾಂಪುರ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ :

ಯಮಕನಮರಡಿ: ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಪಂನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕಾರ್ಮಿಕರಿಗೆ ಮೋಸ ಮಾಡಿ ಹಣ ಲಪಟಾಯಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಪಂಗೆ ಶನಿವಾರ ಕೂಲಿ ಕಾರ್ಮಿಕ ಮಹಿಳೆಯರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕಟಾಬಳಿ, ಬೀರನಹೊಳಿ, ಜಾರಕಿಹೊಳಿ, ಹಳೆವಂಟಮೂರಿ, ಕಾಮಕಟ್ಟಿ, ಕಲ್ಲಟ್ಟಿ ಗ್ರಾಮದ ನೂರಾರು ಕೂಲಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕೆಂದು ಗ್ರಾಪಂ ವಿರುದ್ಧ ಘೋಷಣೆ ಕೂಗಲಾಯಿತು. ಲಕ್ಷ್ಮೀ ಬಸರಗಿ, ಯಲ್ಲವ್ವಾ ಕಾಟೆ, ಮಹಾದೇವಿ ಕೋಪ್ರಿ, ಸತ್ಯಪ್ಪಾ ಬಾಲದಿಂಡಿ ಮಾತನಾಡಿ, ಇಸ್ಲಾಂಪುರ ಗ್ರಾಪಂ ವ್ಯಾಪ್ತಿಯ ಸುತ್ತಮುತ್ತಲಿನ ಹಳ್ಳಿಯ ಜನರು ಪ್ರತಿದಿನ

ಒಟ್ಟಾಗಿ ಕೂಲಿ ಕೆಲಸ ಮಾಡುತ್ತೇವೆ. ಆದರೆ ಕೂಲಿ ವೇತನ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಪ್ರಶ್ನಿಸಿದರೆ ಬಾಯಿಗೆ ಬಂದಂತೆ ಬಯ್ಯುತ್ತಾರೆ. ಕೆಲ ಜನರು ಕೂಲಿ ಮಾಡದೆ ಹಣ ಪಡೆಯುತ್ತಿದ್ದಾರೆ. ನಿಜವಾಗಿ ದುಡಿಯುವರಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದರು.

ಪಿಡಿಒ ಹಾಗೂ ಗಣಕಯಂತ್ರ ಸಿಬ್ಬಂದಿ ಮಧ್ಯಾಹ್ನ ಆದರೂ ಪಂಚಾಯತಿ ಕಡೆ ಸುಳಿಯಲಿಲ್ಲ. ಮಹಿಳೆಯರು ಬಿಸಿಲಿನಲ್ಲೇ ಪಂಚಾಯತಿ ಆವರಣದಲ್ಲಿ ಧರಣಿ ಕುಳಿತರು. ಪಿಡಿಒ ಮತ್ತು ಗಣಕಯಂತ್ರ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು. ಯಾವ ಒಬ್ಬ ಅಧಿಕಾರಿಯು ಸ್ಥಳಕ್ಕೆ ಸುಳಿಯದ್ದರಿಂದ ಬಡಕೂಲಿ ಕಾರ್ಮಿಕರು ಮನೆಯತ್ತ ಮುಖ ಮಾಡಿದರು. ಗ್ರಾಮದ ಮುಖಂಡ ಮಲ್ಲಪ್ಪಾ ಖೋತಗಿ ಮೊದಲಾದವರು ಪ್ರತಿಭಟನೆಯಲ್ಲಿದ್ದರು.

 

ಇಸ್ಲಾಂಪುರ ಗ್ರಾಪಂ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಕುರಿತು ಈಗಾಗಲೇ ಹುಕ್ಕೇರಿ ತಾಪಂ ಇಒ ಹಾಗೂ ಬೆಳಗಾವಿ ಜಿಪಂ ಸಿಇಒಗೆ ಮನವಿ ನೀಡಿದ್ದೇವೆ. ಯಾವುದೇ ಪ್ರಯೋಜನ ಆಗಿಲ್ಲ. ಇಲ್ಲಿ ಇದ್ದ ಪಿಡಿಒ ಹಾಗೂ ಗಣಕಯಂತ್ರ ಸಿಬ್ಬಂದಿ ಕಾಣೆಯಾಗಿದ್ದಾರೆ. ಬಡಕೂಲಿ ಕಾರ್ಮಿಕರಿಗೆ ಅನ್ಯಾಯವಾಗಿದೆ. ಕೂಡಲೇ ಅಧಿಕಾರಿಗಳು ಬಡವರ ಗೊಳು ಕೇಳಬೇಕು. ಕವಿತಾ ಮುರುಕಟ್ಟೆ, ನರೇಗಾ ಕೂಲಿ ಕಾರ್ಮಿಕರ ಮುಖ್ಯಸ್ಥೆ

 

Advertisement

Udayavani is now on Telegram. Click here to join our channel and stay updated with the latest news.

Next