ಹಿರೇಕೆರೂರ: ಪ್ರತಿ ಗ್ರಾಮ ಪಂಚಾಯಿತಿ ಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವಿಶೇಷ ಅಭಿಯಾನದಲ್ಲಿ ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಕೈಗೆತ್ತಿಕೊಂಡು, ಸ್ವತ್ಛತೆ, ಆರೋಗ್ಯ ಮತ್ತು ಆದಾಯವೃದ್ಧಿ ಮಾಡಬೇಕೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ ಎಸ್.ಜಿ. ಹೇಳಿದರು.
ತಾಲೂಕಿನ ಅಬಲೂರು ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ವಿಶೇಷ ಅಭಿಯಾನ ಮತ್ತು ಕಾಮಗಾರಿಗಳ ಅನುಷ್ಠಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಚ್ಛತೆಗಾಗಿ ಸೋಕ್ ಪಿಟ್(ಬಚ್ಚಲು ಗುಂಡಿ), ಆರೋಗ್ಯಕ್ಕಾಗಿ ಪೌಷ್ಟಿಕ ಕೈ ತೋಟ, ಆದಾಯಕ್ಕಾಗಿ ಅಣಬೆ ಬೇಸಾಯ ಎಂಬ ಘೋಷವಾಕ್ಯದೊಂದಿಗೆ ಗ್ರಾಮಗಳನ್ನು ಕೊಳಚೆ ಮುಕ್ತ, ಸೊಳ್ಳೆ ಮುಕ್ತ ಬೀದಿಗಳನ್ನಾಗಿ ಮಾಡಲು ಸೋಕ್ ಪಿಟ್ ನಿರ್ಮಾಣ, ಜನರನ್ನು ರೋಗ ಮುಕ್ತ, ರಾಸಾಯನಿಕ ಮುಕ್ತರನ್ನಾಗಿ ಮಾಡಲು ಪೌಷ್ಟಿಕ ಕೈತೋಟ ಮತ್ತು ಮಹಿಳೆಯರ ಆದಾಯವನ್ನು ಹೆಚ್ಚಿಸಿ ಜೀವನೋಪಾಯ ಮಾರ್ಗ ಸುಧಾರಿಸಿಕೊಳ್ಳಲು ಪ್ರತಿ ಗ್ರಾಮದಲ್ಲಿ ಅಣಬೆ ಬೇಸಾಯದ ಗೋಡೌನ್ ಕಾಮಗಾರಿಗಳನ್ನು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ತೆಗೆದುಕೊಂಡು ಎಲ್ಲಾ ಗ್ರಾಮ ಪಂಚಾಯಿತಿಗಳು ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.
ವಿಶೇಷ ಅಭಿಯಾನದಡಿ 17 ಸಾವಿರ ರೂ. ವೆಚ್ಚದಲ್ಲಿ ಆರೋಗ್ಯಕ್ಕಾಗಿ ಮತ್ತು ಸ್ವಾಭಿಮಾನಕ್ಕಾಗಿ ಸೋಕ್ ಪಿಟ್ (ಬಚ್ಚಲುಗುಂಡಿ) ನಿರ್ಮಾಣ. ಗ್ರಾಮೀಣ ಭಾಗದ ಮನೆಗಳಲ್ಲಿ 2,400 ರೂ. ವೆಚ್ಚದಲ್ಲಿ 1 ಗುಂಟೆ ಜಾಗದಲ್ಲಿ ಪೌಷ್ಟಿಕ ತೋಟ ನಿರ್ಮಾಣ. ಗ್ರಾಮೀಣ ಭಾಗದ ಸ್ತ್ರೀ ಶಕ್ತಿ ಗುಂಪುಗಳಿಗೆ ನಿರಂತರ ಆದಾಯಕ್ಕೆ ದಾರಿಯಾಗಲು ಅಣಬೆ ಬೇಸಾಯ ಶೆಡ್ ನಿರ್ಮಾಣ ಮಾಡಿಕೊಳ್ಳಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ನೀಲಪ್ಪ ಕಜ್ಜರಿ, ಪಿಡಿಒ ಈರಣ್ಣ ಕರ್ಕಿಕಟ್ಟಿ, ಐಇಸಿ ಸಂಯೋಜಕ
ಜಿ.ಗೋವಿಂದರಾಜ, ತಾಂತ್ರಿಕ ಸಹಾಯಕ ಅಭಿಯಂತರ ಎ.ಎನ್.ಕಿಲ್ಲೇದಾರ, ಶೋಭಾ ಕೋರಿ, ರಾಮು ತ್ಯಾವಣಗಿ, ಶಶಿಕಲಾ ಕಣವೇರ, ನವೀನ್ ಹುಲ್ಲತ್ತಿ, ನಾಗರಾಜ ಮಳೂರ, ಕಾಮಾಕ್ಷಿ ರೇವಣಕರ ಸೇರಿದಂತೆ ಗ್ರಾಪಂ ಸಿಬ್ಬಂದಿ ಇದ್ದರು.