Advertisement

ನರೇಗಾ ಪ್ರಗತಿ: ಶೇ. 100 ಸಾಧನೆ ಮಾಡಿದ ಸುಳ್ಯ

10:42 AM Apr 06, 2018 | Team Udayavani |

ಸುಳ್ಯ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2017-18ನೇ ಸಾಲಿನಲ್ಲಿ ಅತಿ ಹೆಚ್ಚು ಮಾನವ ದಿನಗಳ ಬಳಕೆ ಮತ್ತು ಅನುದಾನ ವಿನಿಯೋಗದಲ್ಲಿ ಶೇ. 100 ಪ್ರಗತಿ ಸಾಧಿಸಿದ ದ.ಕ. ಜಿಲ್ಲೆಯ ಸಾಧಕ ಎರಡು ತಾಲೂಕುಗಳಲ್ಲಿ ಸುಳ್ಯ ತಾಲೂಕು ಕೂಡ ಸ್ಥಾನ ಪಡೆದಿದೆ.

Advertisement

2016-17ನೇ ಸಾಲಿನಲ್ಲಿ ಶೇ. 71 ಪ್ರಗತಿ ಸಾಧಿಸಿದ್ದ ದ.ಕ. ಜಿಲ್ಲೆಯಲ್ಲಿ 2017-18ನೇ ಸಾಲಿನಲ್ಲಿ ಪ್ರಗತಿ ಶೇ. 85ರಷ್ಟು ಏರಿಕೆ ಕಂಡಿದೆ. ಜಿಲ್ಲೆಯ ಐದು ತಾ.ಪಂ.ಗಳ ಪೈಕಿ ಸುಳ್ಯ ಮತ್ತು ಬೆಳ್ತಂಗಡಿ ಶೇ. 100 ಪ್ರಗತಿ ಸಾಧಿಸಿವೆ. ಹೀಗಾಗಿ ಜಿ.ಪಂ. ವತಿಯಿಂದ ಎರಡೂ ತಾ.ಪಂ.ಗಳನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಅರಂತೋಡು, ಉಬರಡ್ಕ ಗ್ರಾ.ಪಂ. ಅಗ್ರ
ತಾಲೂಕಿನ 28 ಗ್ರಾ.ಪಂ. ಪಂಚಾಯತ್‌ ಗಳ ಪೈಕಿ ನರೇಗಾ ಯೋಜನೆಯಲ್ಲಿ ಶೇ. 100ಕ್ಕಿಂತ ಹೆಚ್ಚಿನ ಸಾಧನೆ ತೋರಿದ ಪಟ್ಟಿಯಲ್ಲಿ 14 ಗ್ರಾ.ಪಂ.ಗಳು ಸ್ಥಾನ ಪಡೆದಿವೆ. ಇವು ಗುರಿ ಮೀರಿದ ಸಾಧನೆ ಮಾಡಿವೆ ಅನ್ನುವುದನ್ನು ಅಂಕಿ-ಅಂಶ ತಿಳಿಸಿದೆ. ಅರಂತೋಡು ಗ್ರಾ.ಪಂ.ಗೆ 4,834 ಮಾನವ ದಿನ ನಿಗದಿ ಆಗದ್ದು, ಅಲ್ಲಿ 9,912 ಮಾನವ ದಿನ ಬಳಸಿ ಶೇ. 190ರಷ್ಟು ಪ್ರಗತಿ ಸಾಧಿಸಿದೆ. ಉಬರಡ್ಕ ಮಿತ್ತೂರು ಗ್ರಾ.ಪಂ.ಗೆ 7,680 ಮಾನವ ದಿನ ನೀಡಿದ್ದು, ಅಲ್ಲಿ 12,290 ಮಾನವ ದಿನಗಳು ವಿನಿಯೋಗಿಸಲಾಗಿದೆ. ಎಡ ಮಂಗಲ ಗ್ರಾ.ಪಂ.ಗೆ 5,279 ಮಾನವ ದಿನ ಬಳಕೆಯ ಗುರಿ ನೀಡಿದ್ದು, ಅದರಲ್ಲಿ 7,249 ದಿನಗಳನ್ನು ವಿನಿಯೋಗಿಸಲಾಗಿದೆ.

ತಾಲೂಕಿನ ಗುತ್ತಿಗಾರು, ಅಮರ ಮುಟ್ನೂರು, ಜಾಲ್ಸೂರು, ಅಜ್ಜಾವರ, ಪಂಜ, ಪೆರುವಾಜೆ, ಮಂಡೆಕೋಲು, ಸಂಪಾಜೆ, ಕಲ್ಮಡ್ಕ, ಬೆಳ್ಳಾರೆ ಹಾಗೂ ನೆಲ್ಲೂರು ಕೆಮ್ರಾಜೆ ಶೇ. 100ಕ್ಕಿಂತ ಅಧಿಕ ಪ್ರಗತಿ ಸಾಧಿಸಿದ ಗ್ರಾ.ಪಂ.ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಉಳಿದ 14 ಪಂಚಾಯತ್‌ ಗಳು ಶೇ. 60 ರಿಂದ 95ರಷ್ಟು ಪ್ರಗತಿ ದಾಖಲಿಸಿವೆ.

ಯಾವ ಕಾಮಗಾರಿಗೆ ವಿನಿಯೋಗ?
ಸುಮಾರು 42 ಕಾಮಗಾರಿಗಳಿಗೆ ನರೇಗಾ ಅನುದಾನ ಬಳಸಲು ಅನುಮೋದನೆ ನೀಡಲಾಗಿತ್ತು. ನಿಗದಿಯಂತೆ 72 ಕಿಂಡಿ ಅಣೆಕಟ್ಟುಗಳನ್ನು ಪೂರ್ಣಗೊಳಿಸಲಾಗಿದೆ. ಬಸವ ವಸತಿ ಯೋಜನೆಯಲ್ಲಿ ಪ್ರತಿ ಫಲಾನುಭವಿಗೆ ನರೇಗಾದಲ್ಲಿ 21,240 ರೂ. ಬಳಸಲು ಅವಕಾಶ ನೀಡಿದ್ದು, ತಾ.ಪಂ. ವ್ಯಾಪ್ತಿಯ 1,425 ಮನೆಗಳಿಗೆ ಅನುದಾನ ನೀಡಿ, ಶೇ. 147ರಷ್ಟು ಪ್ರಗತಿ ಸಾಧಿಸಿದೆ.

Advertisement

ಬಾವಿ ರಚನೆಯಲ್ಲಿ ಶೇ. 88.35, ತೋಟಗಾರಿಕಾ ಅಭಿವೃದ್ಧಿಯಲ್ಲಿ ಶೇ. 49.45, ದನದ ಹಟ್ಟಿ ನಿರ್ಮಾಣದಲ್ಲಿ ಶೇ. 23.44, ವಸತಿ ನಿರ್ಮಾಣದಲ್ಲಿ ಶೇ. 147.15, ಕಿಂಡಿ ಅಣೆಕಟ್ಟು ನಿರ್ಮಾಣದಲ್ಲಿ ಶೇ. 262ರಷ್ಟು ಪ್ರಗತಿ ಸಾಧಿಸಲಾಗಿದೆ. ಐದು ಅಂಗನವಾಡಿ ಕೇಂದ್ರಗಳಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ 5 ಲಕ್ಷ ರೂ. ಒದಗಿಸಲಾಗಿದೆ. ಉಳಿದಂತೆ ಕಾಲುಸಂಕ ನಿರ್ಮಾಣ, ಕೊಳವೆಬಾವಿ ಮರುಪೂರಣ ಘಟಕ, ತಡೆಗೋಡೆ ರಚನೆ, ಕಚ್ಛಾ ರಸ್ತೆ ದುರಸ್ತಿ, ಕಾಂಕ್ರೀಟ್‌ ರಸ್ತೆ, ಶಶ್ಮಾನ ಅಭಿವೃದ್ಧಿ, ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಗುರಿ ಮೀರಿದ ಪ್ರಗತಿ
2017-18ನೇ ಸಾಲಿನಲ್ಲಿ ಸುಳ್ಯ ತಾ.ಪಂ.ಗೆ 1,92,568 ಮಾನವ ದಿನಗಳು ಮತ್ತು 8 ಕೋಟಿ ರೂ. ಆರ್ಥಿಕ ಗುರಿ ನಿಗದಿ ಪಡಿಸಲಾಗಿತ್ತು. ಇದರಲ್ಲಿ 1,93,629 ಮಾನವ ದಿನ ವಿನಿಯೋಗಿಸಲಾಗಿದೆ. ಅಂದರೆ ನಿಗದಿಪಡಿಸಿದ ಗುರಿಗಿಂತ ಹೆಚ್ಚಿನ ದಿನ ಬಳಕೆ ಆಗಿ, ಶೇ. 101ರಷ್ಟು ಪ್ರಗತಿ ದಾಖಲಾಗಿದೆ. 8 ಕೋಟಿ ರೂ. ಆರ್ಥಿಕ ಗುರಿಯಲ್ಲಿ 4.57 ಕೋಟಿ ರೂ. ಕೂಲಿ ಹಾಗೂ 3.41 ಕೋಟಿ ರೂ.ಗಳನ್ನು ಸಾಮಗ್ರಿಗೆ ಬಳಸಿದ್ದು, 7.99 ಕೋಟಿ ರೂ. ಹಣ ಬಳಕೆಯಾಗುವ ಮೂಲಕ ಶೇ. 99.58 ಪ್ರಗತಿ ದಾಖಲಿಸಲಾಗಿದೆ. ಎರಡು ವಿಭಾಗ ಸೇರಿ ಒಟ್ಟು ಶೇ. 100ರಷ್ಟು ಪ್ರಗತಿ ಕಂಡಿದೆ.

ಪ್ರಗತಿ ದಾಖಲು
ತಾಲೂಕಿನ 28 ಗ್ರಾಮ ಪಂಚಾಯತ್‌ಗಳಲ್ಲಿ ನರೇಗಾ ಅನುದಾನ ಬಳಕೆಗೆ ಹೆಚ್ಚು ಒತ್ತು ನೀಡಲಾಗಿತ್ತು. ಈ ಪೈಕಿ 14 ಗ್ರಾ.ಪಂ.ಗಳು ಗುರಿ ಮೀರಿದ ಸಾಧನೆ ತೋರಿವೆ. ಮಾನವ ದಿನಗಳ ಬಳಕೆ, ಆರ್ಥಿಕ ಖರ್ಚು ವಿನಿಯೋಗದಲ್ಲಿಯೂ ಶೇ. 100ರಷ್ಟು ಪ್ರಗತಿ ಸಾಧಿಸಿದೆ.
ಭವಾನಿಶಂಕರ ಎನ್‌., ಸಹಾಯಕ
ನಿರ್ದೇಶಕರು, ತಾ.ಪಂ., ಸುಳ್ಯ

ಕಿರಣ್‌ ಪ್ರಸಾದ್‌ ಕುಂಡಡ್ಕ 

Advertisement

Udayavani is now on Telegram. Click here to join our channel and stay updated with the latest news.

Next