ರೋಣ: ಕಳೆದ 14 ತಿಂಗಳಿಂದ ಕೊರೊನಾ ಕರಿ ನೆರಳಲ್ಲಿ ಉದ್ಯೋಗವಿಲ್ಲದೇ ಕಂಗಾಲಾಗಿರುವ ಗ್ರಾಮೀಣ ಬಡ ಕುಟುಂಬಗಳಿಗೆ ಮತ್ತು ರಾಜ್ಯದ ವಿವಿಧ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಸದ್ಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯೇ ಜೀವಾಳವಾಗಿದೆ. ಖಾತ್ರಿ ಯೋಜನೆಯಡಿ ಸದ್ಯ ತಾಲೂಕಿನಾದ್ಯಂತ ಕಳೆದ 7 ದಿನಗಳಿಂದ ರೈತರ ಹೊಲಗಳಲ್ಲಿ ಬದು ನಿಮಾರ್ಣ ಕಾಮಗಾರಿ ಭರದಿಂದ ಸಾಗಿದೆ.
ದಿನಕ್ಕೆ 289ರೂ. ಪಗಾರ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳಡಿ ನಡೆಯುವ ನರೇಗಾ ಯೋಜನೆಯಲ್ಲಿ ಗಂಡು-ಹೆಣ್ಣು ಎಂಬ ಭೇದವಿಲ್ಲದೇ ತಲಾ ಒಬ್ಬರಿಗೆ 289 ರೂ. ಸಮಾನ ವೇತನ ನೀಡಲಾಗುತ್ತಿದ್ದಾರೆ. ದೊಡ್ಡ ದೊಡ್ಡ ರೈತರ ಜಮೀನಿನಲ್ಲಿ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಕೆಲಸ ಮಾಡಿದರೆ 200ರೂ. ಸಂಬಳ ನೀಡುತ್ತಾರೆ. ಆದರೆ ನರೇಗಾ ಯೋಜನೆಯಲ್ಲಿ ಫಲಾನುಭವಿಗಳಿಗೆ ನೀಡಿದ ಅಳತೆಯಷ್ಟು ತೆಗ್ಗು ತೆಗೆದರೆ ಸಾಕು ಒಂದು ದಿನದ ವೇತನ 289 ರೂ.ಜಮಾ ಮಾಡಲಾಗುತ್ತಿದೆ.
ರೈತರಿಗೂ ಲಾಭ: ಹೌದು, ನರೇಗಾ ಯೋಜನೆ ಕೇವಲ ದುಡಿಯುವ ಕಾರ್ಮಿಕರಿಗಷ್ಟೇ ಲಾಭಲಾದಯಕವಾಗಿಲ್ಲ. ಬದಲಾಗಿ ಗ್ರಾಮೀಣ ಭಾಗದ ರೈತರಿಗೂ ಲಾಭದಾಯಕವಾಗಿದೆ. ಒಂದು ಎಕರೆ ಪ್ರದೇಶಕ್ಕೆ ಸುಮಾರು 10 ಸಾವಿರ ರೂ. ವೆಚ್ಚದಲ್ಲಿ ಬದು ನಿಮಾರ್ಣ ಮಾಡಲಾಗುತ್ತಿದೆ. ಇದರಿಂದ ರೈತರ ಜಮೀನಿನಲ್ಲಿ 10/10 ಅಳತೆಯ ತೆಗ್ಗು ತೆಗೆಯುವುದರಿಂದ ಅಲ್ಲಿ ಬರುವ ಮಣ್ಣನ್ನು ಬದುವಿಗೆ ಹಾಕುತ್ತಾರೆ. ರೈತರ ಜಮೀನುಗಳಿಂದ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ರೈತರ ಹೊಲಗಳಲ್ಲಿ ಉಳಿಯುವಂತೆ ಮಾಡುವ ಮಹತ್ವದ ಯೋಜನೆ ಇದಾಗಿದೆ.
1050 ಕಾರ್ಮಿಕರಿಗೆ ಉದ್ಯೋಗ: ಪ್ರತಿ ಗ್ರಾಪಂ ಮಟ್ಟದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳು ಭರದಿಂದ ಸಾಗಿವೆ. ತಾಲೂಕಿನ ಮಾಡಲಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ಏಳು ದಿನಗಳಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಆರಂಭವಾಗಿದೆ. ಪ್ರತಿನಿತ್ಯ ಗಂಡು-ಹೆಣ್ಣು ಸೇರಿ ಸುಮಾರು 1050 ಜನರಿಗೆ ಉದ್ಯೋಗ ನೀಡುತ್ತಿದ್ದಾರೆ. ಗ್ರಾಮದಲ್ಲಿ ಇರುವ ಜನಸಂಖ್ಯೆಯಲ್ಲಿ ಶೇ.90ರಷ್ಟು ಜನರಿಗೆ ಉದ್ಯೋಗ ನೀಡಲಾಗಿದೆ.