Advertisement

ನರೇಗಾ: ಚಿಕ್ಕ ಬಳ್ಳಾಪುರ ಜಿಲ್ಲೆಯಲ್ಲಿ ಮಾದರಿ ಕಾಮಗಾರಿ

02:56 PM Sep 01, 2020 | Suhan S |

ಶಿಡ್ಲಘಟ್ಟ: ಉದ್ಯೋಗ ಖಾತ್ರಿ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆ ನೀರು ಸಂರಕ್ಷಣೆ ಮತ್ತು ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳನ್ನು ಮಾದರಿಯಾಗಿ ಅಭಿವೃದ್ಧಿಗೊಳಿಸಲಾಗಿದ್ದು, ಇದೇ ಮಾದರಿಯಲ್ಲಿ ಇತರೆ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್‌ ತಿಳಿಸಿದರು.

Advertisement

ಪರಿಣಾಮಕಾರಿ ಅನುಷ್ಠಾನ: ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿರುವ ನರೇಗಾ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಬರಪೀಡಿತ ಜಿಲ್ಲೆಯಲ್ಲಿ ಮಳೆ ನೀರು ಸಂರಕ್ಷಣೆ ಮಾಡಲು ಕೆರೆ-ಕುಂಟೆ, ಕಲ್ಯಾಣಿ ಗಳು, ಬಹುಕಮಾನ್‌ ಚೆಕ್‌ಡ್ಯಾಂಗಳನ್ನು ಮಾದರಿಯಾಗಿ ಅಭಿವೃದ್ಧಿ ಗೊಳಿಸಲಾಗಿದ್ದು, ಇದರಿಂದ ಅಂರ್ತಜಲಮಟ್ಟ ವೃದ್ಧಿಯಾಗಲಿದೆ ಎಂದರು.

ಕೆರೆ-ಕುಂಟೆ, ಕಲ್ಯಾಣಿ ಮತ್ತು ಕಾಲುವೆ ಅಭಿವೃದ್ಧಿ: ಜಿಲ್ಲೆಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿರುವುದು ಸಂತಸದಾಯಕ. ಸರ್ಕಾರಿ ಶಾಲೆಗಳು, ಗ್ರಾಮ ಪಂಚಾಯಿತಿ ಕೇಂದ್ರಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಮಳೆ ನೀರು ಸಂರಕ್ಷಣೆಗೆ ಮಳೆನೀರು ಕೊಯ್ಲು ಮತ್ತು ಬಹುಕಮಾನ್‌ ಚೆಕ್‌ ಡ್ಯಾಂಗಳು, ಕೆರೆ-ಕುಂಟೆ, ಕಲ್ಯಾಣಿ ಮತ್ತು ಕಾಲುವೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದರು.

ಸಿಇಒ, ತಂಡಕ್ಕೆ ಅಭಿನಂದನೆ: ಸರ್‌ ಎಂ.ವಿಶ್ವೇಶ್ವರಯ್ಯ ಜನಿಸಿರುವ ಜಿಲ್ಲೆಯ ಮುದ್ದೇನಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯನ್ನು ರಾಜ್ಯದಲ್ಲಿ ಮಾದರಿಯಾಗಿ ಅಭಿವೃದ್ಧಿಗೊಳಿಸಿದ್ದು, ಜಿಪಂ ಸಿಇಒ ಫೌಝೀಯಾ ತರುನ್ನುಮ್‌ ಮತ್ತು ಅವರ ತಂಡಕ್ಕೆ ಅಭಿನಂದಿಸುತ್ತೇನೆ. ಬೆಟ್ಟಗುಡ್ಡ ಪ್ರದೇಶದಲ್ಲಿ ನೈಸರ್ಗಿಕ ಸಂಪದ್ಭರಿತ ಪ್ರದೇಶದಲ್ಲಿ ಶಾಲೆ ಮಾದರಿಯಾಗಿ ಅಭಿವೃದ್ಧಿಗೊಳಿಸಿರುವುದು ಸಂತಸ ತಂದಿದೆ ಎಂದರು.

ತ್ವರಿತವಾಗಿ ಸ್ಪಂದಿಸಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದ ಉಮಾ ಮಹಾದೇವನ್‌, ಗ್ರಾಪಂ ಕೇಂದ್ರದಲ್ಲಿ ತೆರೆದಿರುವ ಸಹಾಯವಾಣಿ ಕೇಂದ್ರಗಳ ಕುರಿತು ಜನರಿಗೆ ವ್ಯಾಪಕ ಅರಿವು ಮೂಡಿಸಬೇಕು. ಸಹಾಯವಾಣಿ ಕೇಂದ್ರದಲ್ಲಿ ಕರೆಗಳನ್ನು ಸ್ವೀಕರಿಸಿ ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿಶೇಷ ಕಾಳಜಿ ವಹಿಸಬೇಕೆಂದರು.

Advertisement

ಜಿಪಂ ಯೋಜನಾ ನಿರ್ದೇಶಕ ಗಿರಿಜಾ ಶಂಕರ್‌, ಶಿಡ್ಲಘಟ್ಟ ತಾಪಂ ಇಒ ಶಿವಕುಮಾರ್‌, ಚಿಂತಾಮಣಿ ಇಒ ಮಂಜುನಾಥ್‌,ಜಿಪಂ ಪ್ರಸನ್ನಕುಮಾರ್‌, ಕುಂಬಿಗಾನಹಳ್ಳಿ ಗ್ರಾಪಂ ಪಿಡಿಒ ನಯನಾ ನಿಖತ್‌ ಆರಾ, ಯಣ್ಣೂರು ವೈ.ಬಿ.ಮಂಜುನಾಥ್‌, ಚೀಮಂಗಲ ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರ್‌, ಹೇಮಾರ‌್ಲಹಳ್ಳಿ ಗುತ್ತಿಗೆದಾರ ಶಾಂತ್‌ಕುಮಾರ್‌ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ವಿವಿಧ ಕಾಮಗಾರಿ ವೀಕ್ಷಣೆ : ಮುದ್ದೇನಹಳ್ಳಿ ಸರ್ಕಾರಿ ಪ್ರೌಢಶಾಲೆ, ಹಾರೋಬಂಡೆ ಗ್ರಾಪಂ ದೇವಸ್ಥಾನದ ಹೊಸಹಳ್ಳಿ ಮಾದರಿ ಅಂಗನವಾಡಿ, ರೆಡ್ಡಿಗೊಲ್ಲವಾರಹಳ್ಳಿ ಮಾದರಿ ಅಂಗನವಾಡಿ ಕೇಂದ್ರ, ಪಟ್ರೇನಹಳ್ಳಿ ಗ್ರಾಪಂ ಕಾರ್ಯಾಲಯಕ್ಕೆ ಭೇಟಿ, ಶಿಡ್ಲಘಟ್ಟ ತಾಲೂಕಿನ ಕುಂಬಿಗಾನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮೀಣ ಉದ್ಯಾನವನ, ಹಾರಡಿಯಲ್ಲಿ ಕುಂಟೆ ಕಾಮಗಾರಿ, ಚಿಂತಾಮಣಿ ತಾಲೂಕಿನ ಸಂತೆಕಲ್ಲಹಳ್ಳಿಯಲ್ಲಿ ಮಾದರಿ ಅಂಗನವಾಡಿ ಕೇಂದ್ರ, ಕುಂಟೆ ಅಭಿವೃದ್ಧಿ ಕಾಮಗಾರಿ, ಕೈವಾರದಲ್ಲಿ ಸ್ಮಶಾನ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಚಿನ್ನಸಂದ್ರ ಗ್ರಾಪಂನಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಂದ ಸ್ಥಾಪಿಸಿರುವ ಸಂಜೀವಿನಿ ಕೆಫೆಯನ್ನು ವೀಕ್ಷಿಸಿದರು.

ಮಳೆನೀರು ಕೊಯ್ಲು ಪದ್ಧತಿ ಕಡ್ಡಾಯ :  ಜಿಪಂ ಸಿಇಒ ಫೌಝೀಯಾ ತರುನ್ನುಮ್‌ ಮಾತನಾಡಿ, ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ ಸಹಿತ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗಾಗಿ ವಿಶೇಷ ಆದ್ಯತೆ ನೀಡಲಾಗಿದೆ. ಮಳೆ ನೀರು ಸಂರಕ್ಷಣೆಗೆ ಆದ್ಯತೆ ನೀಡಿ ಕೆರೆ-ಕುಂಟೆ, ಕಲ್ಯಾಣಿ ಮತ್ತು ಚೆಕ್‌ ಡ್ಯಾಂಗಳನ್ನು ನಿರ್ಮಿಸಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆ ಮತ್ತು ಅಂಗನವಾಡಿ ಕೇಂದ್ರಗಳನ್ನು ಮಾದರಿಯಾಗಿ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡಲು ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಮಳೆನೀರು ಕೊಯ್ಲು ಪದ್ಧತಿಯನ್ನುಕಡ್ಡಾಯಗೊಳಿಸಲಾಗಿದೆ ಎಂದರು.

ಉದ್ಯಾನವನ ವೀಕ್ಷಿಸಿ ಸಂತಸ :  ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಮುದ್ದೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಮತ್ತು ಶಿಡ್ಲಘಟ್ಟ ತಾಲೂಕಿನ ಕುಂಬಿಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಹೇಮಾರ‌್ಲಹಳ್ಳಿಯಲ್ಲಿ ಅಭಿವೃದ್ಧಿಗೊಳಿಸಿರುವ ಗ್ರಾಮೀಣ ಉದ್ಯಾನವನ ಮತ್ತು ಹಾರಡಿ ಗ್ರಾಮದಲ್ಲಿ ಮಳೆ ನೀರು ಸಂರಕ್ಷಣೆ ಮಾಡಲು ನಿರ್ಮಿಸಿರುವ ಕುಂಟೆ ಕಾಮಗಾರಿಯನ್ನು ವೀಕ್ಷಿಸಿ ಉಮಾಮಹಾದೇವನ್‌ ಸಂತಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ 38 ಸರ್ಕಾರಿ ಪ್ರೌಢಶಾಲೆ ಮತ್ತು ಅಂಗನವಾಡಿ ಕೇಂದ್ರಗಳನ್ನು ಮಾದರಿಯಾಗಿ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಪಂ ಕೇಂದ್ರಗಳಲ್ಲಿರುವ ಸಾರ್ವಜನಿಕ ಗ್ರಂಥಾಲಯಗಳನ್ನು ಅಭಿವೃದ್ಧಿಗೊಳಿಸಲು ಸೂಚನೆ ನೀಡಲಾಗಿದೆ. ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮೀಣ ಸಂತೆಗಳನ್ನು ಅಭಿವೃದ್ಧಿಗೊಳಿಸಿ ಹೆಚ್ಚಿನ ಅನುಕೂಲ ಕಲ್ಪಿಸಲು ಆದ್ಯತೆ ನೀಡಬೇಕು.   ಉಮಾ ಮಹಾದೇವನ್‌, ಪ್ರಧಾನ ಕಾರ್ಯದರ್ಶಿ, ರಾಜ್ಯ ಪಂಚಾಯತ್‌ ರಾಜ್‌ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next