ಗಂಗಾವತಿ: ಕೋವಿಡ್ ಮಹಾಮಾರಿಗೆ ಇಡೀ ಜಗತ್ತು ತತ್ತರಿಸಿದ್ದು ಜನರ ಬದುಕು ಬೀದಿಗೆ ಬಂದಿದೆ. ಪ್ರತಿ ದಿನವೂ ದುಡಿದು ತಿನ್ನುವ ಜನರಿಗೆ ಕೂಲಿ ಕೆಲಸ ಸಿಗದೇ ಕುಟುಂಬ ನಿರ್ವಹಣೆ ಕಷ್ಟವಾದ ಸಂದರ್ಭದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆ ಗ್ರಾಮೀಣ ಜನರ ಬದುಕಿಗೆ ಕೂಲಿ ಕೆಲಸ ಕಲ್ಪಿಸುವ ಮೂಲಕ ತಾತ್ಕಲಿಕ ನೆಮ್ಮದಿ ನೀಡಿದೆ.
ರಾಜ್ಯ ಸರಕಾರದ ಕೋರಿಕೆ ಮೇರೆಗೆ ಕೇಂದ್ರ ಸರಕಾರ ಎರಡು ಕಂತುಗಳಲ್ಲಿ ನರೇಗಾ ಯೋಜನೆಗೆ ಒಂದು ಲಕ್ಷ ಕೋಟಿ ರೂ. ಅನುದಾನ ಮಂಜೂರು ಮಾಡಿ ಕೋವಿಡ್ ಸಂದರ್ಭದಲ್ಲಿ ಮರಳಿ ಗ್ರಾಮಗಳಿಗೆ ಬಂದಿರುವ ವಲಸೆ ಕೂಲಿಕಾರ್ಮಿಕರಿಗೆ ಮತ್ತು ಕೃಷಿ ಕೂಲಿಕಾರರ ನೆರವಿಗೆ ಧಾವಿಸಿದೆ. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಗುಳೆ ಹೋಗದಂತೆ ತಡೆಯಲು ದಶಕಗಳ ಹಿಂದೆ ಕೇಂದ್ರ ಸರಕಾರ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಆರಂಭಿಸಿದ್ದು, ಸದ್ಯದ ಸಂದರ್ಭದಲ್ಲಿ ಕೂಲಿಕಾರರಿಗೆ ಅನುಕೂಲವಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಇಡೀ ದೇಶವೇ ಸ್ತಬ್ಧವಾಗಿರುವಾಗ ರಾಜ್ಯ ಸರಕಾರ ಗ್ರಾಮೀಣ ಭಾಗದ ಜನರಿಗೆ ಖಾತ್ರಿ ಯೋಜನೆಯಡಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕೂಲಿಕೆಲಸ ಕೊಡುವ ಮೂಲಕ ಕೂಲಿಕಾರರಿಗೆ ನೆರವಾಗಿದೆ.
ಕೊಪ್ಪಳ ಜಿಲ್ಲಾಡಳಿತ ನರೇಗಾ ಯೋಜನೆಯನ್ನು ಲಾಕ್‌ಡೌನ್ ಸಂದರ್ಭದಲ್ಲಿ ಗ್ರಾಪಂಗಳ ಮೂಲಕ ಅತ್ಯುತ್ತಮವಾಗಿ ಅನುಷ್ಠಾನ ಮಾಡಿ ರಾಜ್ಯಕ್ಕೆ ಮಾದರಿಯಾಗಿದೆ. ಖಾತ್ರಿ ಯೋಜನೆಯಡಿ ಕೆರೆ ಹೂಳು ತೆಗೆಸುವುದು, ನೀರಾವರಿ ಪ್ರದೇಶದಲ್ಲಿ ಕಾಲುವೆಗಳ ಜಂಗಲ್ ಕಟಿಂಗ್, ಅರಣ್ಯ ಪ್ರದೇಶದಲ್ಲಿ ಮಳೆ ನೀರು ಭೂಮಿಯಲ್ಲಿ ಇಂಗಲು ಗುಂಡಿಗಳನ್ನು ತೋಡಿಸುವುದು, ರೈತರ ಹೊಲದಲ್ಲಿ ವೈಯಕ್ತಿಕ ಬದುವು ನಿರ್ಮಾಣ ಮತ್ತು ರಸ್ತೆ ನಿರ್ಮಾಣ ಕಾರ್ಯ ಮಾಡಲಾಗಿದೆ. ಇದರಿಂದ ಶಾಶ್ವತ ಕಾಮಗಾರಿ ನಿರ್ಮಾಣ ಸಾಧ್ಯವಾಗಿದೆ. ಪ್ರತಿಯೊಬ್ಬ ಕೂಲಿಕಾರ್ಮಿಕರಿಗೆ ದಿನಕ್ಕೆ 285 ರೂ.ಗಳನ್ನು ಪಾವತಿಸಲಾಗುತ್ತಿದ್ದು ಕೂಲಿಕಾರರಿಗೆ ಶುದ್ಧ ಕುಡಿಯುವ ನೀರು, ಆರೋಗ್ಯ ತಪಾಸಣೆ, ಕೂಲಿಕಾರರ ಮಕ್ಕಳನ್ನು ಕರೆದುಕೊಳ್ಳಲು ವೃದ್ಧ ಕೂಲಿಕಾರರಿಗೆ ಕೂಲಿ ನೀಡುವುದು ಸೇರಿ ಕೋವಿಡ್ ರೋಗ ಕುರಿತು ಜನಜಾಗೃತಿ ಮೂಡಿಸಲಾಗಿದೆ. ಕೂಲಿ ಕೆಲಸದ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಸ್ಯಾನಿಟೈಜರ್ ಬಳಕೆ ಮಾಡಿ ಕೋವಿಡ್ ಭಯವನ್ನು ದೂರ ಮಾಡಲಾಗಿದೆ.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಲಾಕ್‌ಡೌನ್ ಇದ್ದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನರೇಗಾ ಯೋಜನೆಯಡಿ ಸುಮಾರು 8 ಲಕ್ಷ ಮಾನವ ದಿನಗಳನ್ನು ಸೃಷ್ಟಿ ಮಾಡಿ ಒಟ್ಟು 21.05 ಕೋಟಿ ಕೂಲಿ ಹಣವನ್ನು ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಸೇರಿ ಸ್ಥಳೀಯ ಕೂಲಿಕಾರರಿಗೆ ಕೂಲಿಕೆಲಸ ಕಲ್ಪಿಸುವ ಮೂಲಕ ಜಿಲ್ಲಾಡಳಿತ ರಾಜ್ಯದಲ್ಲಿ ನರೇಗಾ ಅನುಷ್ಠಾನ ಮಾಡುವಲ್ಲಿ ಪ್ರಥಮ ಸ್ಥಾನಕ್ಕೇರಿದೆ.
ಜಿಲ್ಲಾಡಳಿತದ ಅಧಿಕಾರಿಗಳು ನರೇಗಾ ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಸಾಕಷ್ಟು ಶ್ರಮವಹಿಸಿದ್ದು ಎನ್‌ಎಂಆರ್ ತೆಗೆದು ಪ್ರತಿ ದಿನವೂ ಕೂಲಿಕಾರರ ಹಾಜರಿ ಹಾಗೂ ಕಾಮಗಾರಿ ಪರಿಶೀಲನೆ ಜತೆಗೆ ಕೋವಿಡ್ ಜಾಗೃತಿ ಮೂಡಿಸಿದ್ದು, ಲಾಕ್‌ಡೌನ್‌ನಲ್ಲಿಯೂ ಕೂಲಿ ಕಾರ್ಮಿಕರಿಗೆ ಕೂಲಿ ನೀಡಿ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ.
ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಹೊಗಿದ್ದ ಕೂಲಿಕಾರರು ಮರಳಿ ಗ್ರಾಮಗಳಿಗೆ ಬಂದು ಕೆಲಸವಿಲ್ಲದೇ ಮನೆಯಲ್ಲಿರುವ ಸಂದರ್ಭದಲ್ಲಿ ಜಿಲ್ಲಾಡಳಿತ ನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ಕೂಲಿ ಕೆಲಸ ನೀಡಿದೆ. ಇದರಿಂದ ಕೂಲಿಕಾರ್ಮಿಕರು ಕೆಲಸ ಮಾಡಿ ಕೂಲಿ ಹಣ ಪಡೆದಿದ್ದಾರೆ. ಕೆರೆ ಹೂಳು, ಕಾಲುವೆ ಜಂಗಲ್ ಕಟಿಂಗ್ ಸೇರಿ ವೈಯಕ್ತಿಕ ಹೊಲದ ಬದುವು ಹಾಕುವ ಮಹತ್ವದ ಕಾರ್ಯವಾಗಿದೆ. ಯೋಜನೆಯಿಂದ ಜನರಿಗೆ ಅನುಕೂಲವಾಗಿದೆ.
-ಟೀಕಯ್ಯ ವಾಲೇಕಾರ, ನರೇಗಾ ಕೂಲಿಕಾರ್ಮಿಕ, ಢಣಾಪೂರ
ಸರಕಾರದ ಸೂಚನೆಯಂತೆ ನರೇಗಾ ಯೋಜನೆಯಡಿ ಪ್ರತಿ ಗ್ರಾಮದಲ್ಲಿ ಕೂಲಿಕೆಲಸ ನೀಡಲಾಗಿದೆ. ಸರಕಾರಿ ಕೆರೆ, ಕಾಲುವೆ ಅರಣ್ಯ ಪ್ರದೇಶದಲ್ಲಿ ಹೂಳು ತೆಗೆಯಲಾಗಿದೆ. ಮಳೆಗಾಲ ಇರುವುದರಿಂದ ಮಳೆ ನೀರು ಹರಿದು ಹೋಗದಂತೆ ತಡೆಯಲು ಇಂಗುಗುಂಡಿ ತೋಡಲಾಗಿದೆ. 8 ಲಕ್ಷಕ್ಕೂ ಅಧಿಕ ಮಾನವ ದಿನಗಳನ್ನು ಸೃಷ್ಠಿ ಮಾಡಲಾಗಿದೆ. ಕೂಲಿಕಾರರ ಬ್ಯಾಂಕ್ ಖಾತೆಗೆ ಸುಮಾರು 21 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ. ಕೆಲವು ಗ್ರಾಪಂಗಳಲ್ಲಿ ತಾಂತ್ರಿಕ ತೊಂದರೆಯಿಂದ ಕೂಲಿ ಹಣ ಜಮಾ ಆಗಿಲ್ಲ ಎಂಬ ದೂರಿದೆ. ಶೀಘ್ರವೇ ದೋಷ ಸರಿಪಡಿಸಿ ಕೂಲಿ ಹಣ ಪಾವತಿಸಲಾಗುತ್ತದೆ.
-ರಘುನಂದಮೂರ್ತಿ, ಸಿಇಒ ಕೊಪ್ಪ
-ಕೆ.ನಿಂಗಜ್ಜ