ಕಾರವಾರ: ಕೋವಿಡ್-19 ಲಾಕ್‌ಡೌನ್ ಕಾಲದಲ್ಲಿಯೂ ಗ್ರಾಮೀಣ ಜನರ ಬದುಕನ್ನು ನರೇಗಾ ಯೋಜನೆ ಕೈ ಹಿಡಿದಿದೆ. 16 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದ್ದು, 77 ಕೋಟಿಗೂ ಹೆಚ್ಚಿನ ಅನುದಾನ ಜಿಲ್ಲೆಗೆ ಬಂದಿದೆ. ಕೋವಿಡ್ ಸಮಯದಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಜಿಲ್ಲೆಯ 11 ತಾಲೂಕುಗಳಲ್ಲಿ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಕಳೆದ 29 ದಿನಗಳಿಂದ ನರೇಗಾ ಯೋಜನೆಯ ಪ್ರಯೋಜನ ಗ್ರಾಮೀಣ ಕಾರ್ಮಿಕರಿಗೆ ಲಭಿಸುತ್ತಿದೆ. ಆದರೆ, ವಾಹನ ಸೌಕರ್ಯ ಇಲ್ಲದ ಕಾರಣ ಹೆಚ್ಚಿನ ಕಾರ್ಮಿಕರು ಕಾಮಗಾರಿ ನಡೆಯುವ ಸ್ಥಳಕ್ಕೆ ತಲುಪಲಾಗುತ್ತಿಲ್ಲ. ಮೇ 4ರ ನಂತರ ಕಾರ್ಮಿಕರಿಗೆ ನರೇಗಾ ಕಾಮಗಾರಿ ನಡೆಯುವ ಸ್ಥಳಕ್ಕೆ ವಾಹನ ಸೌಕರ್ಯ ಸಿಗಲಿದ್ದು, ಯೋಜನೆಯ ಪೂರ್ಣ ಲಾಭ ಶ್ರಮಿಕ ವರ್ಗಕ್ಕೆ ತಲುಪಲಿದೆ ಎಂಬ ವಿಶ್ವಾಸವನ್ನು ಜಿಪಂ ಸಿಇಒ ಎಂ.ರೋಶನ್ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ 15,018 ಮಾನವ ದಿನಗಳು ಸೃಷ್ಟಿಯಾಗಿ ವಿವಿಧ ಕಾಮಗಾರಿ ನಡೆದಿವೆ. 11 ತಾಲೂಕುಗಳಲ್ಲಿ ವಿವಿಧ ಕಾಮಗಾರಿಗೆ 40.96 ಲಕ್ಷ ರೂ. ಖರ್ಚಾಗಿದೆ. ಈವರೆಗಿನ ಸಾಧನೆ ಸಣ್ಣ ಪ್ರಮಾಣದಲ್ಲಿ ಕಂಡರೂ ಮೇ ತಿಂಗಳಲ್ಲಿ ಗುರಿ ಮುಟ್ಟುವ ವಿಶ್ವಾಸ ಜಿಪಂಗೆ ಇದೆ. ಮೇ ತಿಂಗಳಲ್ಲಿ ವಾಹನ ಸಂಚಾರ ಆರಂಭವಾದರೆ ನರೇಗಾ ಕೆಲಸಗಳಲ್ಲಿ ಶ್ರಮಿಕರ ಭಾಗವಹಿಸುವಿಕೆ ಹೆಚ್ಚಾಗಲಿದೆ. ಆಗ 16 ಲಕ್ಷ ಮಾನವ ದಿನಗಳು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಲಿವೆ ಎಂಬುದು ಜಿಪಂ ವಿಶ್ವಾಸ.
ನರೇಗಾದಲ್ಲಿ ಈ ಸಲವೂ ಉತ್ತರ ಕನ್ನಡ ಜಿಲ್ಲೆ ಗುರಿ ಮುಟ್ಟಲಿದೆ. ಕಾಮಗಾರಿ ನಡೆವ ಸ್ಥಳ ತಲುಪಲು ಕಾರ್ಮಿಕರಿಗೆ ವಾಹನ ಸೌಕರ್ಯವಿಲ್ಲ. ಮೇ 4ರ ನಂತರ ಕಾರ್ಮಿಕರಿಗೆ ವಾಹನ ಸೌಕರ್ಯ ಸಿಗಲಿದೆ. ಆಗ ನರೇಗಾ ಕೆಲಸಗಳಿಗೆ ವೇಗ ಸಿಗಲಿದೆ.
-ಎಂ. ರೋಶನ್, ಜಿಪಂ ಸಿಇಒ
–ನಾಗರಾಜ ಹರಪನಹಳ್ಳಿ