Advertisement
ಆರ್ಥಿಕ ಚೈತನ್ಯ ನೀಡುವ ಉದ್ದೇಶದಿಂದ ಸ್ವೋದ್ಯೋಗ ಮಾದರಿಯಲ್ಲಿ ನರ್ಸರಿ ತೋಟ ರಚನೆ ಮಾಡಲು ನರೇಗಾ ಯೋಜನೆ, ತೋಟಗಾರಿಕೆ ಇಲಾಖೆ ಒಗ್ಗೂಡಿಸುವಿಕೆ ಹಾಗೂ ಎನ್‌ಎಲ್ ಆರ್‌ಎಂ ಸಹಕಾರದೊಂದಿಗೆ ನೆರವು ನೀಡಲಾಗುತ್ತಿದೆ. ಬೈಂದೂರು ತಾಲೂಕಿನ ಮರವಂತೆ ಹಾಗೂ ನಾವುಂದ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಜೀವಿನಿ ಸಂಘದ ಮಹಿಳೆಯರು ನರ್ಸರಿ ನಿರ್ಮಾಣ ಮಾಡಿ ಯಶ ಕಂಡಿದ್ದಾರೆ.
Related Articles
Advertisement
ನರ್ಸರಿ ತೋಟ ನಿರ್ಮಿಸಲು ನರೇಗಾ ಯೋಜನೆ ಹಾಗೂ ತೋಟಗಾರಿಕೆ ಇಲಾಖೆ ಒಗ್ಗೂಡಿಸುವಿಕೆಯಿಂದ 2.09 ಲಕ್ಷ ರೂ. ಅನುದಾನ ದೊರೆಯುತ್ತದೆ. ಸಂಘಗಳಿಗೆ ಸಿಗುವ ಅನುದಾನದಲ್ಲಿ 103 ಮಾನವ ದಿನಗಳಿಗೆ ಕೂಲಿ 31,827 ರೂ. ದೊರೆತರೆ ಉಳಿದ ಮೊತ್ತವನ್ನು ಸಾಮಗ್ರಿ ವೆಚ್ಚಗಳಿಗೆ ನೀಡಲಾಗುತ್ತದೆ.
ಪೌಷ್ಟಿಕ ಕೈ ತೋಟ
ಸಮುದಾಯ ಕಾಮಗಾರಿಯಲ್ಲಿ ನರ್ಸರಿ ನಿರ್ಮಿಸುವ ಜತೆಗೆ ವೈಯಕ್ತಿಕವಾಗಿ ಮನೆಯಲ್ಲಿ ಪೌಷ್ಟಿಕ ಕೈತೋಟ ನಿರ್ಮಾಣಕ್ಕೆ ಅವಕಾಶವಿದೆ. ವೈಯಕ್ತಿಕ ಕಾಮಗಾರಿಗೆ ಉದ್ಯೋಗ ಖಾತರಿ ಯೋಜನೆಯ ಜಾಬ್ ಕಾರ್ಡ್ ಹೊಂದಿರುವುದು ಆವಶ್ಯಕ. ನೆಲ್ಲಿ, ನುಗ್ಗೆ, ಕರಿಬೇವು, ಕಾಳುಮೆಣಸು, ತೆಂಗು, ಸೀತಾಫಲ ಪೇರಳೆ, ಪಪ್ಪಾಯಿ ನಿಂಬೆ ಗಿಡ ಹೀಗೆ ಒಟ್ಟು 14 ಗಿಡಗಳನ್ನು ನೆಟ್ಟು ಪೋಷಿಸಲು 4,500 ರೂ. ಅನುದಾನ ನೀಡಲಾಗುತ್ತಿದೆ. ಈಗಾಗಲೇ ಉಡುಪಿ ಜಿಲ್ಲೆಯ ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ತಲಾ 101 ಪೌಷ್ಟಿಕ ಕೈತೋಟ ನಿರ್ಮಿಸಲಾಗುತ್ತಿದ್ದು, ಇವುಗಳಿಗೆ ಗಿಡಗಳನ್ನು ಸಂಜೀವಿನಿ ಸಂಘಗಳ ನರ್ಸರಿಯಿಂದ ಪೂರೈಸಲು ಯೋಜನೆ ರೂಪಿಸಲಾಗಿದೆ.
14 ನರ್ಸರಿ ತೋಟ ರಚನೆ
ಸಂಜೀವಿನಿ ಮಹಿಳೆಯರಿಗೆ ನರ್ಸರಿ ತೋಟ ನಿರ್ಮಿಸುವ ಯೋಜನೆಯ ಕುರಿತು ಉಡುಪಿ ಜಿ.ಪಂ. ವಿಶೇಷ ಮುತುವರ್ಜಿ ವಹಿಸಿದ್ದು, ತಾಲೂಕಿಗೆ 2 ರಂತೆ ನರ್ಸರಿ ಯೋಜನೆ ರೂಪಿಸಿದೆ. ಈಗಾಗಲೇ ಎಲ್ಲ ತಾಲೂಕುಗಳು ಉತ್ತಮ ಪ್ರಗತಿ ಸಾಧಿಸಿದೆ. ಕುಂದಾಪುರ ತಾಲೂಕಿನ ಕಟ್‌ಬೆಲ್ತೂರು ಹಾಗೂ ಕೆದೂರು ಗ್ರಾ.ಪಂ.ಗಳಲ್ಲಿ ನರ್ಸರಿ ನಿರ್ಮಿಸಲಾಗುತ್ತಿದೆ. ಒಂದು ನರ್ಸರಿ ತೋಟದಲ್ಲಿ 3,000 ರಿಂದ 3,500 ಗಿಡ ಬೆಳೆಸಲಾಗುತ್ತಿದೆ. ನೆಲ್ಲಿ, ನುಗ್ಗೆ, ಕರಿಬೇವು, ಕಾಳುಮೆಣಸು, ತೆಂಗು, ಸೀತಾಫಲ ಪೇರಳೆ, ಪಪ್ಪಾಯಿ, ನಿಂಬೆ ಗಿಡ ಬೆಳೆಯಲಾಗಿದೆ.
ಮಹಿಳೆಯರಿಗೆ ವರದಾನ: ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕವಾಗಿ ಸದೃಢವಾಗಬೇಕು ಎಂಬ ಉದ್ದೇಶದಿಂದ ಸಂಜೀವಿನಿ ಸಂಘದ ಮಹಿಳೆಯರ ಮೂಲಕ ನರ್ಸರಿ ನಿರ್ಮಾಣ ಮಾಡಲಾಗುತ್ತಿದೆ. ಗ್ರಾ.ಪಂ., ತೋಟಗಾರಿಕೆ ಇಲಾಖೆ, ಎನ್‌ಆರ್‌ಎಲ್ ಎಂ, ನರೇಗಾ ಯೋಜನೆಯಡಿ ನರ್ಸರಿ ಮಾಡುತ್ತಿದ್ದೇವೆ. ಒಂದು ನರ್ಸರಿಯಲ್ಲಿ 2,500 ರಿಂದ 3,500 ವಿವಿಧ ತಳಿಯ ಗಿಡ ಬೆಳೆಸಲಿದ್ದು, ಮುಂದಿನ ದಿನಗಳಲ್ಲಿ ವೈಯಕ್ತಿಕ ಪೌಷ್ಟಿಕ ತೋಟ ನಿರ್ಮಾಣಕ್ಕೆ ಈ ನರ್ಸರಿಯಿಂದಲೇ ಗಿಡಗಳ ಪೂರೈಕೆ ಆಗುವ ಯೋಜನೆ ರೂಪಿಸಲಾಗಿದೆ. –ಮಹೇಶ್ ಕುಮಾರ್ ಹೊಳ್ಳ, ಬೈಂದೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ (ಪ್ರಭಾರ)
ತೆಂಗು, ಅಡಿಕೆ ಗಿಡ ವ್ಯವಸ್ಥೆ: ಮರವಂತೆ, ನಾವುಂದ ಗ್ರಾ. ಪಂ. ವ್ಯಾಪ್ತಿಯಲ್ಲಿ ನರ್ಸರಿ ನಿರ್ಮಾಣ ಉತ್ತಮವಾಗಿದೆ. ಸಂಜೀವಿನಿ ಸಂಘದ ಮಹಿಳೆಯರ ಭಾಗವಹಿಸುವಿಕೆಯಿಂದ ಇದು ಸಾಧ್ಯ ವಾಗಿದೆ. ಈಗಾಗಲೇ ನೆಲ್ಲಿ, ಕರಿಬೇವು, ಪೇರಳೆ, ಸೀತಾಫಲ ಗಿಡ ನೆಡಲಾಗಿದ್ದು, ಸದ್ಯದಲ್ಲೇ ತೆಂಗು, ಅಡಿಕೆ ಗಿಡ ಪೂರೈಸುವ ವ್ಯವಸ್ಥೆ ಮಾಡಲಾಗು ವುದು. -ನಿಧೀಶ್ ಕೆ.ಜೆ., ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ತೋಟಗಾರಿಕಾ ಇಲಾಖೆ ಕುಂದಾಪುರ