ಮುಳಬಾಗಿಲು: ನರೇಗಾ ಹಾಗೂ ಚೆಕ್ ಡ್ಯಾಂಗಳಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಆಗ್ರಹಿಸಿ ಜು.11ರಂದು ತಾಪಂ ಕಚೇರಿಗೆ ಮುತ್ತಿಗೆ ಹಾಕಲು ಪ್ರವಾಸಿ ಮಂದಿರದಲ್ಲಿ ನಡೆದ ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ, ತೀವ್ರ ಬರಗಾಲದಿಂದ ತತ್ತರಿಸಿರುವ ಗ್ರಾಮೀಣ ಜನರು ನಗರಗಳತ್ತ ವಲಸೆ ಹೋಗದೆ, ದುಡಿಯುವ ಕೈಗೆ ಕೆಲಸ ನೀಡಲು ನರೇಗಾ ಯೋಜನೆಯಡಿಯಲ್ಲಿ ಸಾವಿರಾರು ಕೋಟಿ ರೂ. ಅನುದಾನ ಬಿಡುಗಡೆ ಮಾಡುತ್ತಿದ್ದರೂ ಪ್ರಸ್ತುತ ಗ್ರಾಪಂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಂತ್ರಗಳಿಂದ ಕೆಲಸ ಮಾಡಿಸಿ, ಕೂಲಿ ಕಾರ್ಮಿಕರ ಮರಣ ಶಾಸನ ಬರೆಯುತ್ತಿದ್ದಾರೆ ಎಂದು ಆರೋಪಿಸಿದರು.
ಜನರಿಗೆ ಮೋಸ: ಮತ್ತೂಂದಡೆ ಅಂತರ್ಜಲ ಅಭಿವೃದ್ಧಿಗೆ ಅನುಕೂಲವಾಗಲೆಂದು 5 ಲಕ್ಷದಿಂದ 15 ಲಕ್ಷ ರೂ.ವರೆಗೆ ನಿರ್ಮಿಸುತ್ತಿರುವ ಚೆಕ್ ಡ್ಯಾಂಗಳು ಕಳಪೆಯಾಗಿದ್ದು, ವಿವಿಧ ಯೋಜನೆಗಳಿಗೆ ನಕಲಿ ದಾಖಲೆ ಸೃಷ್ಟಿ ಮಾಡಿ ಸಾರ್ವಜನಿಕರ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆಗೆ ಬಂದರೆ ಅವರ ದಿಕ್ಕು ತಪ್ಪಿಸಲು ಅನುಕೂಲಕರವಾದ ಹಳ್ಳಿಗಳಿಗೆ ಕರೆದುಕೊಂಡು ಕಾಮಗಾರಿ ತೋರಿಸಿ ಶಭಾಷ್‌ಗಿರಿ ಪಡೆದುಕೊಂಡು ಹಿಂಬದಿಯಿಂದ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಮತ್ತು ಜನ ಸಾಮಾನ್ಯರನ್ನು ಯಾಮಾರಿಸುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕುರಿಗಳ ಸಮೇತ ಮುತ್ತಿಗೆ: ತಾಲೂಕು ಅಧ್ಯಕ್ಷ ಫಾರುಕ್‌ಪಾಷ ಮಾತನಾಡಿ, ಅಧಿಕಾರ ಚುಕ್ಕಣಿ ಹಿಡಿದಿರುವ ಚುನಾಯಿತ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಜನ ಸಾಮಾನ್ಯರು ಪ್ರಶ್ನಿಸುವಂತಿಲ್ಲ. ಹೀಗೆ ಜನ ಸಾಮಾನ್ಯರೇ ವಿರೋಧಿ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಮೂಲ ಸೌಕರ್ಯ ಒದಗಿಸದೇ ಕೋಟಿ ಕೋಟಿ ಹಣ ತಿಂದು ನೀರು ಕುಡಿಯುತ್ತಿರುವ ತಾಪಂ ಮತ್ತು ಗ್ರಾಪಂ ಅಧಿಕಾರಿಗಳ ವಿರುದ್ಧ ಕುರಿಗಳ ಸಮೇತ ಮುತ್ತಿಗೆ ಹಾಕಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಹಸಿರುಸೇನೆ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ರಾಜ್ಯ ಸಂಚಾಲಕ ರಂಜಿತ್‌ಕುಮಾರ್, ಜಿಲ್ಲಾ ಉಪಾಧ್ಯಕ್ಷ ಸಾಗರ್, ಸುಪ್ರಿಂಚಲ, ಶಿವ, ನಾರಾಯಣ್, ಪುತ್ತೇರಿ ನಾರಾಯಣಸ್ವಾಮಿ, ಅಣ್ಣೆಹಳ್ಳಿ ಅಹಮದ್, ಅಣ್ಣಹಳ್ಳಿ ನಾಗರಾಜ್, ವೆಂಕಟರವಣಪ್ಪ, ನಲ್ಲಾಂಡಹಳ್ಳಿ ಕೇಶವ, ಪೊಂಬರಹಳ್ಳಿ ನವೀನ್, ಪುತ್ತೇರಿರಾಜು, ಅಂಬ್ಲಿಕಲ್ ಮಂಜು, ವಿಜಯ್‌ಪಾಲ್, ದೇವರಾಜ್, ಜುಬೇರ್‌ಪಾಷ ಇದ್ದರು.