ನಾರಾಯಣಪುರ: ಪಟ್ಟಣದ ಯಲ್ಲಾಲಿಂಗ ಮಠದಲ್ಲಿ ಮಂಗಳವಾರ ಗ್ರಾಪಂ ವತಿಯಿಂದ ವಿಶೇಷ ಗ್ರಾಮ ಸಭೆ ನಡೆಯಿತು.
ಸಭೆಯಲ್ಲಿ ಇತ್ತೀಚಿಗೆ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದದಡಿ ವಸತಿ ರಹಿತ ಹಾಗೂ ನಿವೇಶನ ರಹಿತ ಫಲಾನುಭವಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಹೆಸರು ನೋಂದಾಯಿಸಿಕೊಂಡ ಫಲಾನುಭವಿಗಳ ಹೆಸರು ಓದಿದ ಬಳಿಕ ಪಟ್ಟಿಗೆ ಅನುಮೋದನೆ ಪಡೆಯಲಾಯಿತು.
ಪಿಡಿಒ ಮಾತನಾಡಿದ ಶರಣಬಸವ ಬಿರಾದಾರ, ನಾರಾಯಣಪುರ ಗ್ರಾಪಂ ವ್ಯಾಪ್ತಿಯ ನಾರಾಯಣಪುರ ಗ್ರಾಮ, ಹನುಮನಗರ (ಐಬಿ ತಾಂಡಾ), ಮೇಲಿನಗಡ್ಡಿ, ದೇವರಗಡ್ಡಿ ಗ್ರಾಮಗಳಿಂದ 700ಕ್ಕೂ ಹೆಚ್ಚು ಆನ್‌ಲೈನ್ ಅರ್ಜಿ ಸಲ್ಲಿಕೆಯಾಗಿವೆ. ಅದರಲ್ಲಿ ವಸತಿ ರಹಿತ, ನಿವೇಶನ ರಹಿತ ಫಲಾನುಭವಿಗಳ ಪಟ್ಟಿ ಅನುಮೋದಿಸಿ ಸಮಗ್ರ ಮಾಹಿತಿಯನ್ನು ತಾಪಂಗೆ ಒದಗಿಸಲಾಗುವುದು ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಸರ್ಕಾರದಿಂದ ಬಿಡುಗಡೆಯಾಗುವ ವಿವಿಧ ವಸತಿ ಯೋಜನೆ ಅಡಿ ಫಲಾನುಭವಿಗಳಿಗೆ ಮನೆ ದೊರೆಯಲಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಹ ರೈತರು ಬ್ಯಾಂಕ್ ಪಾಸ್‌ಬುಕ್ ನಕಲು, ಆಧಾರ್ ಕಾರ್ಡ್ ನಕಲು ಪ್ರತಿಯೊಂದಿಗೆ ನಿಗದಿತ ಅರ್ಜಿ ಭರ್ತಿ ಮಾಡಿ ಗ್ರಾಪಂ ಕಚೇರಿ ಕಾರ್ಯದರ್ಶಿಗಳಿಗೆ ಸಲ್ಲಿಸಬೇಕು. ಈ ಮೂಲಕ ಸರ್ಕಾರದ ಮಹತ್ವದ ಯೋಜನೆ ಸದುಪಯೋಗವನ್ನು ರೈತರು ಪಡೆಯಬೇಕು ಎಂದು ಹೇಳಿದರು.
ಇನ್ನುಳಿದ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ರೈತರು ಆಯಾ ಗ್ರಾಮಲೆಕ್ಕಿಗರು ಮತ್ತು ಕೃಷಿ ಇಲಾಖೆ ಅನುವುಗಾರರಿಗೆ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಧೀರಪ್ಪ ರಾಠೊಡ ಅಧ್ಯಕ್ಷತೆಯಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷೆ ಬಸಮ್ಮ, ಗ್ರಾಪಂ ಕಾರ್ಯದರ್ಶಿ ಸಂತೋಷ, ಲೆಕ್ಕಿಗ ನಾಗರಾಜ, ವೀರೇಶ ಗಣಾಚಾರಿ, ಹುಸೇನಸಾಬ್,ವೀರೇಶ, ಗದ್ದೆಪ್ಪ, ಚಂದಪ್ಪ, ವೀರೇಶ, ಗ್ರಾಪಂ ಸದಸ್ಯರು, ಸಿಬ್ಬಂದಿ, ಸೇರಿದಂತೆ ಮೇಲಿನಗಡ್ಡಿ, ದೇವರಗಡ್ಡಿ, ಹನುಮನಗರ ಗ್ರಾಮದ ಪ್ರಮುಖರು, ಫಲಾನುಭವಿಗಳು, ಸಾರ್ವಜನಿಕರು, ಗ್ರಾಪಂ ಸಿಬ್ಬಂದಿ ಭಾಗವಹಿಸಿದ್ದರು.