Advertisement

ಕೊನೆ ಭಾಗದ ರೈತರಿಗೆ ನೀರು ತಲುಪಿಸಿ

06:27 PM May 06, 2020 | Naveen |

ನಾರಾಯಣಪುರ: ಬಸವಸಾಗರ ಜಲಾಶಯ ಅಚ್ಚುಕಟ್ಟು ಭಾಗದ ಕಾಲುವೆಗಳ ಕೊನೆ ಭಾಗದ ರೈತರಿಗೆ ನೀರು ತಲುಪಿಸಲು ಅಧಿಕಾರಿಗಳು ಪ್ರಯತ್ನ ಮಾಡಬೇಕು. ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಮಹತ್ವ ನೀಡಬೇಕು ಎಂದು ಜಲಸಂಪನ್ಮೂಲ ಖಾತೆ ಸಚಿವ ರಮೇಶ ಜಾರಕಿಹೊಳಿ ಸೂಚಿಸಿದರು.

Advertisement

ಇಲ್ಲಿನ ಸ್ಕಾಡ್‌ ಸೆಂಟರ್‌ನಲ್ಲಿ ಮಂಗಳವಾರ ನಡೆದ ಕೃಷ್ಣಾ ಭಾಗ್ಯ ಜಲ ನಿಗಮದ ಬಸವಸಾಗರ ಅಣೆಕಟ್ಟು ವಲಯದ ವಿವಿಧ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ನೀರಾವರಿ ಯೋಜನೆಗಳಿಂದ ಕಾಲುವೆ ಕೊನೆ ಭಾಗಕ್ಕೆ ನೀರು ತಲುಪಿದಾಗ ಮಾತ್ರ ರೈತರು ತೃಪ್ತಿಯಾಗಲು ಸಾಧ್ಯ. ನೀರು ಸದ್ಬಳಕೆಗಾಗಿ ಯಶಸ್ವಿ ಯೋಜನೆ ರೂಪಿಸಬೇಕು. ನೀರು ಪೋಲು ಆಗದಂತೆ ನೋಡಿಕೊಂಡು ಅಚ್ಚುಕಟ್ಟು ಭಾಗದ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬುವ ಬಗ್ಗೆ ಗಮನಹರಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿದ್ದ ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ರಾಜುಗೌಡ, ಡಾ| ಶಿವರಾಜ ಪಾಟೀಲ, ಬಸವರಾಜ ದದ್ದಲ್‌, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ, ಮಾನಪ್ಪ ವಜ್ಜಲ ತಮ್ಮ ಮತಕ್ಷೇತ್ರ ವ್ಯಾಪ್ತಿಯಲ್ಲಿ ನೀರಾವರಿ ಕಾಲುವೆಗಳ ನವೀಕರಣ, ಏತ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವಂತೆ ಜಲಸಂಪನ್ಮೂಲ ಖಾತೆ ಸಚಿವ ರಮೇಶ ಜಾರಕಿಹೊಳಿ ಅವರ ಗಮನಕ್ಕೆ ತಂದರು.

ಜಲಾಶಯಕ್ಕೆ ಭೇಟಿ: ಸಭೆಗೂ ಮುನ್ನ ಬಸವಸಾಗರ ಜಲಾಶಯಕ್ಕೆ ಭೇಟಿ ನೀಡಿದ ಸಚಿವರು, ಅಧಿಕಾರಿಗಳಿಂದ ಜಲಾಶಯದಲ್ಲಿ ಸಂಗ್ರಹವಿರುವ ನೀರಿನ ಮಾಹಿತಿ ಜತೆಗೆ ಎಡದಂಡೆ ಮುಖ್ಯ ಕಾಲುವೆಗೆ ಸ್ಕಾಡ್‌ ತಂತ್ರಜ್ಞಾನ ಗೇಟ್‌ ಅಳವಡಿಸಿರುವ ಬಗ್ಗೆ ಸಮಗ್ರ ಮಾಹಿತಿ ಪಡೆದರು. ಪ್ರಭಾರಿ ಮುಖ್ಯ ಅಭಿಯಂತರ ಎಸ್‌. ರಂಗಾರಾಮ್‌ ಯೋಜನೆಗಳ ಕುರಿತು ಸಚಿವರಿಗೆ ಮಾಹಿತಿ ನೀಡಿದರು. ಭೀಮರಾಯನಗುಡಿ ಮುಖ್ಯ ಇಂಜಿನಿಯರ್‌ ಪ್ರದೀಪ ಮಿತ್ರಾ ಮಂಜುನಾಥ, ಅಣೆಕಟ್ಟು ವಿಭಾಗಾಧಿಕಾರಿ ಶಂಕರ ನಾಯ್ಕೋಡಿ, ಎಇಇಗಳಾದ ಆರ್‌. ಎಲ್‌. ಹಳ್ಳೂರು, ರಾಮಚಂದ್ರ, ವಿದ್ಯಾಧರ, ಜಿಪಂ ಸದಸ್ಯ ಮರಲಿಂಗಪ್ಪನಾಯಕ ಕರ್ನಾಳ, ಎಚ್‌.ಸಿ. ಪಾಟೀಲ, ಬಿ.ಎಂ. ಹಳ್ಳಿಕೋಟೆ ಸೇರಿದಂತೆ ಅಣೆಕಟ್ಟು ವಲಯ ಅಭಿಯಂತರರು, ಜನಪ್ರತಿನಿಧಿಗಳು ಹಾಗೂ ರೈತರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next