Advertisement

ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ: ಶಾಸಕ ರಾಜುಗೌಡ

05:15 PM May 29, 2019 | Naveen |

ನಾರಾಯಣಪುರ: ಸಾಮೂಹಿಕ ವಿವಾಹಗಳು ದುಂದು ವೆಚ್ಚಗಳಿಗೆ ಕಡಿವಾಣ ಹಾಕುತ್ತವೆ. ಪೂರ್ವ ಜನ್ಮದ ಪುಣ್ಯದ ಫಲದಿಂದ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಸಾಧ್ಯವೆಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಹೇಳಿದರು.

Advertisement

ಸಮೀಪದ ಜೋಗುಂಡಭಾವಿ ಗ್ರಾಮದಲ್ಲಿ ಮಂಗಳವಾರ ಜರುಗಿದ ಗ್ರಾಮ ದೇವತೆ ಶ್ರೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಳ್ಳಲಾದ ಸಾಮೂಹಿಕ ವಿವಾಹ, ಧರ್ಮಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಒಂದೇ ವೇದಿಕೆಯಲ್ಲಿ ಜರಗುವ ಇಂತಹ ವಿವಾಹ ಕಾರ್ಯಕ್ರಮದಲ್ಲಿ ಜಾತಿ, ಮತ, ಪಂಥ ಭೇದವಿಲ್ಲದೆ ಸರ್ವರೂ ಸಮಾನರೆಂಬ ತತ್ವ ಪ್ರತಿಪಾದಿಸುತ್ತದೆ, ಗ್ರಾಮ ದೇವತೆ ನೆಲನಿಂತ್ತಿರುವ ಸುಕ್ಷೇತ್ರದಲ್ಲಿ ವಿವಿಧ ಮಠಾಧಿಧೀಶರ, ಗಣ್ಯರ ಸಾಮೂಹಿಕ ಆಶೀರ್ವಾದಗಳ ಮಧ್ಯೆ ವಿವಾಹವಾಗುವದೆ ಒಂದು ಸೌಭಾಗ್ಯ ಎಂದು ಹೇಳಿದ ಅವರು, ಗ್ರಾಮದೇವಿ ಸದ್ಬಕ್ತರು ಕಳೆದ ಹತ್ತು ಹಲವು ವರ್ಷಗಳಿಂದ ಸಾಮೂಹಿಕ ವಿವಾಹದಂತ ಸಾಮಾಜಿಕ ಕಾರ್ಯ ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಆದ್ದರಿಂದ ನೂತನ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ ನವದಂಪತಿಗಳು ಮಾದರಿ ಜೀವನ ನಡೆಸಬೇಕು ಎಂದು ಕಿವಿ ಮಾತು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಸುರಪಾಲಿ ಶ್ರೀಗಳಾದ ಗೀರಿಶಾನಂದ ಮಹಾರಾಜರು ಆಶೀರ್ವದಿಸಿ, ವೈವಾಹಿಕ ಜೀವನಕ್ಕೆ ಕಾಲಿಟ್ಟ ಸತಿ ಪತಿಗಳು ಭವಿಷ್ಯದ ವೈವಾಹಿಕ ಜೀವನ ಸುಖಕರವಾಗಿರಲಿ ಎಂದು ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ಸ್ನೇಹ ಚಿರಾಯು ಬಳಗದ ವತಿಯಿಂದ ವಿವಾಹವಾದ ನವಜೋಡಿಗಳಿಗೆ ಹಣ್ಣಿನ ಸಸಿಗಳನ್ನು ನೀಡುವ ಮೂಲಕ ಪರಿಸರ ಕುರಿತು ಜನಜಾಗೃತಿ ಮೂಡಿಸಲಾಯಿತು.

Advertisement

ಜಾತ್ರಾ ಮಹೋತ್ಸವ ಮುನ್ನಾ ದಿನವಾದ ಸೋಮವಾರ ಗ್ರಾಮ ದೇವತೆಯನ್ನು ಸಕಲ ಮಂಗಲವಾದ್ಯ ಮೇಳಗಳೊಟ್ಟಿಗೆ ಮೆರವಣಿಗೆ ಮೂಲಕ ಪವಿತ್ರ ಗಂಗಾಸ್ಥಳಕ್ಕೆ ಕರೆದ್ಯೋದು ಗಂಗಾ ಪೂಜೆ ನೆರವೇರಿಸಿ ಭವ್ಯ ಮೆರವಣಿಗೆಯೊಂದಿಗೆ ದೇವಿಯನ್ನು ಮರಳಿ ದೇಗುಲಕ್ಕೆ ಕರೆತರಲಾಯಿತು.

ಮಂಗಳವಾರ ಉತ್ಸವ ಸ್ಥಳದಲ್ಲಿ ಪ್ರತಿಷ್ಠಾಪಿಸಲಾದ ಗ್ರಾಮ ದೇವಿ ದ್ಯಾಮವ್ವ ಮಾತೆಗೆ ಸಕಲ ಸದ್ಬಕ್ತರ ಸಮ್ಮುಖದಲ್ಲಿ ಸಾಂಪ್ರದಾಯಕವಾಗಿ ಉಡಿ ತುಂಬುವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಜಾತ್ರೆಗೆ ಆಗಮಿಸಿದ ಭಕ್ತರು ದೇವಿ ದರ್ಶನ ಪಡೆದು ಹರಕೆ ಸಲ್ಲಿಸಿ ಅನ್ನಪ್ರಸಾದ ಸ್ವೀಕರಿಸಿದರು.

ಕೊಡೇಕಲ್ ಮಹಲಿ ಮಠದ ಶ್ರೀಗಳು, ಸುರಪಾಲಿ ಶ್ರೀಗಳಾದ ಗೀರಿಶಾನಂದ ಮಹಾರಾಜರು, ಅಂಕಲಿ ಮಠದ ಶ್ರೀಗಳು, ಪೂಜ್ಯ ಗಿರಿಯಪ್ಪ ಪೂಜಾರಿ, ಅರವಿಂದ ಮಹಾರಾಜರು, ನಿಂಗಯ್ಯ ಮುತ್ಯಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಗದ್ದೆಪ್ಪ ಪೂಜಾರಿ, ಅಮರಣ್ಣ ಹುಡೇದ, ವ್ಹಿ.ಎಂ. ಹಿರೇಮಠ, ಅಮರಣ್ಣ ಕುಂಬಾರ, ನಾಗಯ್ಯ ಹಿರೇಮಠ, ಸೋಮಣ್ಣ ಮಾಮನಿ, ನಾಗಪ್ಪ ಕುಂಬಾರ, ತಾಪಂ ಸದಸ್ಯ ಬಾಲಚಂದ್ರ, ಶೇಖರ ನಾಯಕ, ಅಚ್ಚಪ್ಪಗೌಡ, ಸಂಗಮ್ಮ ಹಾವೇರಿ, ಗುರುದೇವಿ ಹಿರೇಮಠ, ಶಿವಪ್ಪ ಬಿರಾದಾರ, ಬಾಲಚಂದ್ರ ಸೇರಿದಂತೆ ಗ್ರಾಮದ ಪ್ರಮುಖರು ವೇದಿಕೆ ಮೇಲಿದ್ದರು.

ಲಚ್ಚಪ್ಪ ಶಿವಪೂರ ಸ್ವಾಗತಿಸಿದರು. ಕ್ಷೇತ್ರ ಸಮನ್ವಾಧಿಕಾರಿ ಅಮರೇಶ ಕುಂಬಾರ ಪ್ರಾಸ್ಥಾವಿಕವಾಗಿ ಮಾತನಾಡಿದರು. ಮಲ್ಲಣ್ಣ ಗೂಳಿ ನಿರೂಪಿಸಿದರು. ಸಿಆರ್‌ಪಿ ಶರಣು ಬಿರಾದಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next