ನಾರಾಯಣಪುರ: ಪಟ್ಟಣದ ಛಾಯಾ ಕಾಲೋನಿ ಬಡಾವಣೆಯ ಮನೆಯೊಂದರಲ್ಲಿ ನಾಲ್ಕು ಜನರ ಮೇಲೆ ವ್ಯಕ್ತಿಯೋರ್ವ ಪಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆಯಲ್ಲಿ ಓರ್ವ ಸಾವನ್ನಪ್ಪಿದು ಮೂವರು ಗಂಭೀರ ಗಾಯಗೊಂಡಿರುವ ಅಮಾನುಷ ಘಟನೆ ಬುಧವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.
ಘಟನೆಯಲ್ಲಿ ನಾಗಪ್ಪ ಹಗರಗುಂಡ (35) ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಕೃತ್ಯ ಎಸಗಿದ ಆರೋಪಿ ಶರಣಪ್ಪ ಹಗರಗುಂಡ ಪೊಲೀಸರ ವಶದಲ್ಲಿದ್ದಾನೆ.
ಘಟನೆಯಲ್ಲಿ ಸುಟ್ಟು ಗಾಯಾಳುಗಳಾದ ಶರಣಪ್ಪ ಪತ್ನಿ ಹುಲಿಗೆಮ್ಮಳ ತಂದೆ ಸಿದ್ದರಾಮಪ್ಪ ಮುರಾಳ (62), ಮುತ್ತಪ್ಪ ಮುರಾಳ, ನಾಗಪ್ಪ ಶರಣಪ್ಪ ಸರೂರ ಎಂದು ತಿಳಿದು ಬಂದಿದೆ. ಅವರನ್ನು ಲಿಂಗಸೂಗುರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ: ಛಾಯಾ ಕಾಲೋನಿಯ ನಿವಾಸಿಯಾಗಿರುವ ಆರೋಪಿ ಶರಣಪ್ಪ ದಂಪತಿಗಳ ನಡುವೆ ಕೌಟುಂಬಿಕ ಸಮಸ್ಯೆ ಬಗ್ಗೆ ನ್ಯಾಯ ಪಂಚಾಯತಿ ನಡೆಸಲು (ಮಾತುಕತೆ) ಪತ್ನಿಯ ತಂದೆ ಸಿದ್ದರಾಮಪ್ಪ ಮುರಾಳ, ಮುತ್ತಪ್ಪ ಮುರಾಳ, ನಾಗಪ್ಪ ಹಗರಗುಂಡ, ಶರಣಪ್ಪ ಸರೂರ ಎಂಬುವವರು ಬುಧವಾರ ಬೆಳಿಗ್ಗೆ ನಾರಾಯಣಪುರಕ್ಕೆ ಆಗಮಿಸಿದ್ದರು, ಇದೇ ವೇಳೆ ಮನೆಯ ಮಹಡಿ ಕೊಠಡಿಯಲ್ಲಿ ನಾಲ್ಕು ಜನರೊಂದಿಗೆ ಮಾತುಕತೆ ನಡೆಸಿದ್ದ ಆರೋಪಿ ಶರಣಪ್ಪ ಮಧ್ಯದಲ್ಲಿ ಹಿರಿಯರನ್ನು ಕರೆದುಕೊಂಡು ಬರುವುದಾಗಿ ಹೇಳಿ ಕೊಠಡಿಯಲ್ಲಿ ನಾಲ್ವರನ್ನು ಕೂಡಿ ಹಾಕಿ ಬೀಗ ಜಡೆದು ಕಿಟಕಿ ಮೂಲಕ ಅವರ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೆಂಕಿಯಿಂದ ಸುಟ್ಟು ಗಂಭೀರ ಗಾಯಗೊಂಡ ನಾಲ್ವರನ್ನು ಸ್ಥಳೀಯರ ನೆರವಿನಿಂದ ಖಾಸಗಿ ವಾಹನದ ಮೂಲಕ ಲಿಂಗಸೂಗುರು ಆಸ್ಪತ್ರೆಗೆ ದಾಖಲಿಸಿದ್ದಾರೆ ಈ ವೇಳೆ ಓರ್ವ ಸಾವನ್ನಪಿದ್ದಾನೆ.
ಇಂತಹ ಅಮಾನವಿಯ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಸ್ಥಳಕ್ಕೆ ಸಿಪಿಐ ಭೇಟಿ: ವಿಷಯ ತಿಳಿದು ಘಟನಾ ಸ್ಥಳಕ್ಕೆ ಹುಣಸಗಿ ವೃತ್ತ ಸಿಪಿಐ ದೌಲತ್ ಎನ್. ಕೆ, ಸ್ಥಳೀಯ ಠಾಣೆಯ ಪಿಎಸೈ ಸಿದ್ದೇಶ್ವರ ಗೆರಡೆ, ಬಾಗಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಐ ಇದೊಂದು ಅಮಾನುಷ ಕೃತ್ಯವಾಗಿದೆ ಆರೋಪಿಯು ಪೊಲೀಸ್‌ರ ವಶದಲ್ಲಿದ್ದಾನೆ ಘಟನೆಯಲ್ಲಿ ಸುಟ್ಟಿರುವ ನಾಲ್ವರನ್ನು ಲಿಂಗಸೂಗುರು ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ ಅದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದರು.