Advertisement

ಛಾಯಾ ಭಗವತಿ ಯಾತ್ರಾ ಮಹೋತ್ಸವ

12:26 PM May 04, 2019 | Naveen |

ನಾರಾಯಣಪುರ: ಸುಕ್ಷೇತ್ರ ದಕ್ಷಿಣ ಕಾಶಿ ಶ್ರೀ ಛಾಯಾ ಭಗವತಿ ದೇವಿ ಯಾತ್ರಾ ಮಹೋತ್ಸವ ಹಾಗೂ ಲಕ್ಷ ದೀಪೋತ್ಸವ ಮೇ 4ರಿಂದ 8ರ ವರೆಗೆ ಜರುಗಲಿದ್ದು. ಪ್ರಥಮ ಭಾರಿಗೆ ಪಂಚ ಯತಿಗಳ ಸಾನ್ನಿಧ್ಯದಲ್ಲಿ ನಡೆಯುವ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಕ್ಕೆ ಮೇ 4ರಿಂದ ವಿದ್ಯುಕ್ತವಾಗಿ ಚಾಲನೆ ದೊರೆಯಲಿದ್ದು, ಸಕಲ ಸಿದ್ಧತೆ ಮಾಡಲಾಗಿದೆ.

Advertisement

ಶ್ರೀ ಛಾಯಾ ಭಗವತಿ ಲಕ್ಷ ದೀಪೋತ್ಸವ ಸೇವಾ ಸಮಿತಿ ಸದಸ್ಯರು ಹಾಗೂ ಶ್ರೀ ದೇವಿಯ ಭಕ್ತರು ಕಾರ್ಯಕ್ರಮದ ಯಶಸ್ವಿಗೆ ಸರಣಿ ಸಭೆ ನಡೆಸಿ, ಕಾರ್ಯಕ್ರಮದ ರೂಪುರೇಶೆ ಸಿದ್ಧಪಡಿಸಿದ್ದಾರೆ. ಅಲ್ಲದೇ ವಿಶೇಷ ತಂಡಗಳನ್ನು ರಚಿಸಿದ್ದಾರೆ. ವೇದಿಕೆ ನಿರ್ಮಾಣ, ಆಗಮಿಸುವ ಪೂಜ್ಯರ ಕ್ಷೇತ್ರ ಪೂಜೆ, ಅನುಗ್ರಹ ಸಂದೇಶ ಹಾಗೂ ಧರ್ಮಸಭೆ, ರಾಜಕೀಯ ನಾಯಕರ ಆಗಮನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಅಕ್ಷಯ ತೃತೀಯ ದಿನ ನಡೆಯುವ 18 ತೀರ್ಥಗಳ ಯಾತ್ರೆಗೆ ಭಕ್ತಗಣಕ್ಕೆ ಪ್ರಸಾದ, ವಸತಿ ಸೇರಿದಂತೆ ಮೂಲ ಸೌಕರ್ಯ ವ್ಯವಸ್ಥೆ ಕಲ್ಪಿಸುವ ಕಾರ್ಯದಲ್ಲಿ ಸೇವಾ ಸಮಿತಿ ಸದಸ್ಯರು ಶ್ರಮಿಸುತ್ತಿದ್ದಾರೆ.

18 ತೀರ್ಥ ಸ್ನಾನ ಮಹಾತ್ಮೆ: ಶ್ರೀ ವೇದವ್ಯಾಸರ ಸ್ಕಂದ ಪುರಾಣದಲ್ಲಿ ಉಲ್ಲೇಖೀಸಿದಂತೆ ಅಕ್ಷಯ ತೃತೀಯ ದಿನದಂದು ಶ್ರೀ ಛಾಯಾ ಭಗವತಿ ಮಡಿಲಲ್ಲಿರುವ 18 ತೀರ್ಥಸ್ನಾನ ಯಾತ್ರೆ ಮಾಡಿದರೆ ವಿಶಿಷ್ಟ ಫಲ ಲಭಿಸಲಿದೆ ಎನ್ನುವ ನಂಬಿಕೆಯಿದೆ. ಹೀಗಾಗಿ ಬೆಳಗಿನ ಜಾವ 5ಗಂಟೆಯಿಂದ 18 ತೀರ್ಥಯಾತ್ರೆ ಸ್ನಾನವು ಕ್ಷೇತ್ರ ಪುರೋಹಿತರ ಮಾರ್ಗದರ್ಶನದಲ್ಲಿ ನಡೆಯಲಿದೆ.

ಮೊದಲನೆಯದಾಗಿ ಪುಣ್ಯೋತ್ತಮವಾದ ಉತ್ತರವಾಹಿನಿ, ನಂತರ ಸೂರ್ಯ, ಚಂದ್ರತೀರ್ಥಗಳು, ಪಾಪ ವಿಮೋಚನೆಗೆ ಬ್ರಹ್ಮಯೋನಿ ತೀರ್ಥ, ವಿಷ್ಣು, ರುದ್ರಯೋನಿ ತೀರ್ಥ, ಗೋಮುಖ ತೀರ್ಥ, ಬ್ರಹ್ಮಜ್ಞಾನ ತೀರ್ಥ, ನಂತರ ವಶಿಷ್ಠ ತೀರ್ಥ, ನರಕದಿಂದ ಸ್ವರ್ಗಕ್ಕೆ ಕರೆದೊಯ್ಯುವ ನರಕ ಮತ್ತು ಸ್ವರ್ಗ ತೀರ್ಥ, ಗದಾ ಮತ್ತು ಪದ್ಮತೀರ್ಥಗಳನ್ನು ಮುಗಿಸಿ ಮುಂದೆ ಸಾಗಿದರೆ ಸಿಗುವುದೇ ರಾಮ ಗಯಾ ತೀರ್ಥ, ಕಪೀಲ ತೀರ್ಥ, ಪಶ್ಚಿಮಾಭೀಮುಖವಾಗಿ ಹರಿಯುವ ಸಂತಾನ ಕರುಣಿಸುವ ಧನುಷ್ಕೋಟಿ ತೀರ್ಥ, ಶ್ರೀ ಛಾಯಾದೇವಿ ಕನ್ಯಾಮಣಿಯಾಗಿದ್ದಾಗ ಪ್ರತಿನಿತ್ಯ ಕನ್ಯಾಹೃದಯದಲ್ಲಿ ಸ್ನಾನ ಮಾಡುವ ಪ್ರಮುಖ ತೀರ್ಥ ಸ್ನಾನ ಅತ್ಯಂತ ಪವಿತ್ರವಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೂ ಈ ಎಲ್ಲ ತೀರ್ಥಗಳಲ್ಲಿಯೂ ಸ್ನಾನ ಮುಗಿಸಿಕೊಂಡು ನಂತರ ದೇವಿ ದರ್ಶನ ಮಾಡಿದರೆ ಅದು ಶ್ರೀ ಛಾಯಾ ದೇವಿಯ ಅಂತರ್ಗತ ಸೂರ್ಯ ನಾರಾಯಣ ದೇವನಿಗೆ ಸಲ್ಲಿಸುವ ಒಂದು ಪ್ರದಕ್ಷಿಣೆ. ನಂತರ ದೇವಿ ಸನ್ನಿಧಾನದಲ್ಲಿ ಸತ್ಯನಾರಾಯಣ ಪೂಜೆ ನಡೆಯುವುದು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಗುವುದು.

ಐದು ದಿನಗಳ ಕಾರ್ಯಕ್ರಮ: ಶ್ರೀ ಛಾಯಾದೇವಿ ಸನ್ನಿಧಾನದಲ್ಲಿ ಪಂಚಯತಿಗಳ ಸಾನ್ನಿಧ್ಯದಲ್ಲಿ, ವಿವಿಧ ಮಠಗಳ ಮಠಾಧಿಧೀಶರುಗಳ ನೇತೃತ್ವದಲ್ಲಿ, ರಾಜಕೀಯ ಗಣ್ಯರು, ಸಾಹಿತಿಗಳು ಉಪಸ್ಥಿತಿಯಲ್ಲಿ 5 ದಿನಗಳವರೆಗೆ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಶ್ರೀ ಛಾಯಾ ಭಗವತಿ ಮಹಾತ್ಮೆ ಗ್ರಂಥ ಲೋಕಾರ್ಪಣೆ, ಶೋಭಾಯಾತ್ರೆ, ದೇವಿ ಕ್ಷೇತ್ರದಲ್ಲಿ ದಂಡೋದಕ ಸ್ನಾನ, ಘಟ ಸ್ಥಾಪನೆ, ಪಾದ ಪೂಜೆ ಗಣಹೋಮ ಪೂರ್ಣಾಹುತಿ ನಡೆಯುವುದು. ಬಳಿಕ ಶ್ರೀಗಳಿಂದ ಅನುಗ್ರಹ ಸಂದೇಶ ಹಾಗೂ ಸಂಸ್ಥಾನ ಪೂಜೆ ತೀರ್ಥ ಪ್ರಸಾದ ಸೇರಿದಂತೆ ಲಕ್ಷದೀಪೋತ್ಸವ ಕಾರ್ಯಕ್ರಮ ಜರುಗಲಿದೆ. ವಿವಿಧ ಕಲಾವಿದರಿಂದ ಸಂಗೀತ ಸೇವೆ, ತೊಟ್ಟಿಲು ಸೇವೆಯಂತಹ ಧಾರ್ಮಿಕ ಕ್ರಾರ್ಯಕ್ರಮಗಳು ಜರುಗಲಿವೆ.

Advertisement

ಪ್ರಪ್ರಥಮ ಬಾರಿಗೆ ಶ್ರೀ ಛಾಯಾ ಭಗವತಿ ಕ್ಷೇತ್ರದಲ್ಲಿ ದೇವಿಯ ಯಾತ್ರಾ ಮಹೋತ್ಸವ, ಲಕ್ಷದೀಪೋತ್ಸವ ಹಮ್ಮಿಕೊಳ್ಳಲಾಗಿದೆ. ಇದೊಂದು ಅವಸ್ಮರಣೀಯ ಐತಿಹಾಸಿಕ ಕಾರ್ಯಕ್ರಮವಾಗಿದೆ. ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ದೇವಿ ಭಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು.
•ಶಾಮಾಚಾರಿ ಜೋಶಿ,
ಸೇವಾ ಸಮಿತಿ ಅಧ್ಯಕ್ಷ

ಬಸವರಾಜ ಎಂ. ಶಾರದಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next