ನಾರಾಯಣಪುರ: ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಎರಡನೇ ಅವಧಿ ಹಿಂಗಾರು ಹಂಗಾಮಿನ ಬೆಳೆಗಳಿಗೆ ಕಾಲುವೆ ಜಾಲಗಳ ಮೂಲಕ ಡಿ. 1ರಿಂದ ನೀರು ಹರಿಸಲು ಆರಂಭಿಸಲಾಗಿದೆ. ರಾಜ್ಯದ ಬೃಹತ್ ನೀರಾವರಿ ಯೋಜನೆಗಳಲ್ಲಿ ಇದು ಕೂಡ ಒಂದಾಗಿದ್ದು, ನೀರಾವರಿ ಯೋಜನೆ ಫಲಾನುಭವಿ ಜಿಲ್ಲೆಗಳ 5.5 ಲಕ್ಷ ಹೆಕ್ಟೇರ್ ಜಮೀನು ನೀರಾವರಿಗೆ ಒಳಪಡುತ್ತದೆ. ಈ ನೀರಾವರಿ ಯೋಜನೆಗಾಗಿ ಬಸವಸಾಗರ ಜಲಾಶಯದ ಎಡದಂಡೆ, ಬಲದಂಡೆ ಮುಖ್ಯ ಕಾಲುವೆಗಳು ಸೇರಿದಂತೆ ರಾಂಪುರ ಏತ ನೀರಾವರಿ ಕಾಲುವೆ ಜಾಲಗಳ ಮೂಲಕ ಕೃಷ್ಣಾ ಅಚ್ಚುಕಟ್ಟು ಭಾಗದ ಜಮೀನುಗಳಿಗೆ ನೀರು ಹರಿಸಲಾಗುತ್ತಿದೆ.
Advertisement
2019-20ನೇ ಸಾಲಿನ ಎರಡನೇ ಹಂಗಾಮಿಗೆ ನೀರು ಒದಗಿಸುವ ಉದ್ದೇಶದಿಂದ ನ.17ರಂದು ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಲಹಾ ಸಮಿತಿ ಸಭೆ ನಿರ್ಣಯದಂತೆ ಹಾಗೂ ಉಭಯ (ನಾರಾಯಣಪುರ, ಆಲಮಟ್ಟಿ) ಜಲಾಶಯಗಳಲ್ಲಿ ನೀರಿನ ಲಭ್ಯತೆ ಆಧಾರದ ಮೇಲೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನಾರಾಯಣಪುರ ಎಡದಂಡೆ ಹಾಗೂ ಬಲದಂಡೆ ಸೇರಿದಂತೆ ರಾಂಪುರ ಏತ ನೀರಾವರಿ ಕಾಲುವೆ ಜಾಲಗಳಿಗೆ ಚಾಲು ಬಂದ (ವಾರಾಬಂದಿ) ಪದ್ಧತಿ ನೀರು ಹರಿಸಲು ನಿರ್ಣಯ ಕೈಗೊಳ್ಳಲಾಗಿದೆ.