ನಾರಾಯಣಪುರ: ಬಸವಸಾಗರ ಜಲಾಶಯದಿಂದ ರವಿವಾರ ಮಧ್ಯಾಹ್ನ 4:00 ಗಂಟೆಗೆ ಅಣೆಕಟ್ಟಿನ 18 ಕ್ರಸ್ಟ್‌ಗೇಟ್ ತೆರೆದು 2 ಲಕ್ಷ 18 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿ ಪಾತ್ರಕ್ಕೆ ಹರಿಬಿಡಲಾಗುತ್ತಿದೆ.
ರವಿವಾರ ಬೆಳಗ್ಗೆ 7:00 ಗಂಟೆಗೆ ಒಳಹರಿವು 1ಲಕ್ಷ 90 ಸಾವಿರ ಕ್ಯೂಸೆಕ್ ಏರಿಕೆಯಾದ ಹಿನ್ನೆಲೆಯಲ್ಲಿ 18 ಕ್ರಸ್ಟ್‌ಗೇಟ್ ತೆರೆದು 1ಲಕ್ಷ 94 ಸಾವಿರ ಕ್ಯೂಸೆಕ್ ನೀರನ್ನು ನದಿ ಪಾತ್ರಕ್ಕೆ ಬಿಡಲಾಗಿತ್ತು. ಮಧ್ಯಾಹ್ನ 4:00 ಗಂಟೆಗೆ ಪುನಃ ಒಳ ಹರಿವು 2.10 ಲಕ್ಷಕ್ಕೆ ತಲುಪಿದ್ದರಿಂದ ಹೊರ ಹರಿವು ಹೆಚ್ಚಿಗೆ ಮಾಡಲಾಗಿದೆ.
ಜಲಾಶಯದ ಅಧಿಕಾರಿಗಳ ಮಾಹಿತಿಯಂತೆ ರವಿವಾರ ರಾತ್ರಿ ಬಸವಸಾಗರ ಜಲಾಶಯಕ್ಕೆ ಆಲಮಟ್ಟಿ ಜಲಾಶಯದಿಂದ ಮತ್ತು ಮಲಪ್ರಭಾ ನದಿಯಿಂದ ಒಳ ಹರಿವು 2 ಲಕ್ಷ 50 ಸಾವಿರದಿಂದ 3 ಲಕ್ಷ ತಲುಪುವ ಸಾಧ್ಯತೆಗಳಿದ್ದು, ಒಳಹರಿವಿನ ಪ್ರಮಾಣದಷ್ಟೇ ನೀರನ್ನು ನದಿಗೆ ನೀರು ಹರಿಸಲಾಗುವುದು ಎಂದು ತಿಳಿದು ಬಂದಿದೆ.
ದಿನದಿಂದ ದಿನಕ್ಕೆ ಒಳಹರಿವಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಕೃಷ್ಣಾ ನದಿ ತೀರದ ಯಾದಗಿರಿ, ರಾಯಚೂರು ಎರಡು ಜಿಲ್ಲೆಗಳ ವ್ಯಾಪ್ತಿಯಲ್ಲಿ ಗ್ರಾಮಗಳಿಗೆ ಮತ್ತೆ ಪ್ರವಾಹದ ಭೀತಿ ಶುರುವಾಗಿದೆ. ಅದೇ ರೀತಿ ನದಿಗೆ ಲಕ್ಷಾಂತರ ಕ್ಯೂಸೆಕ್ ನೀರನ್ನು ಹರಬಿಟ್ಟಿದ್ದರಿಂದ ನದಿ ಮಾರ್ಗವಾಗಿ ಬರುವ ಕೆಳ ಹಂತದ ಸೇತುವೆ ಮುಳಗಡೆಯಾಗುವ ಹಂತ ತಲುಪಿವೆ.
ಪ್ರಸ್ತುತ ಜಲಾಶಯಕ್ಕೆ ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ 2 ಲಕ್ಷ 10 ಸಾವಿರ ಕ್ಯೂಸೆಕ್ ಹಿನ್ನೀರು ಹರಿದು ಬರುತ್ತಿದ್ದು, 2 ಲಕ್ಷ 18 ಸಾವಿರ ಕ್ಯೂಸೆಕ್ ನೀರು ಹೊರ ಹರಿವಿದೆ. 491.47 ಮೀಟರ್‌ಗೆ ನೀರು ಬಂದು ತಲುಪಿದ್ದು, 29.78 ಟಿಎಂಸಿ ಅಡಿ ನೀರು ಸಂಗ್ರಹವಿದೆ ಎಂದು ತಿಳಿದು ಬಂದಿದೆ.