ನಾರಾಯಣಪುರ: ಬಸವಸಾಗರಕ್ಕೆ ಸೋಮವಾರ ಬೆಳಗ್ಗೆ 15 ಸಾವಿರ ಕ್ಯೂಸೆಕ್‌ನಷ್ಟಿದ್ದ ಒಳ ಹರಿವಿನ ಪ್ರಮಾಣ ಮಂಗಳವಾರ ಬೆಳಗ್ಗೆ ಅಷ್ಟೋತ್ತಿಗೆ 70 ಸಾವಿರ ಕ್ಯೂಸೆಕ್‌ಗೆ ತಲುಪಿದ್ದರಿಂದ ಜಲಾಶಯ ಗರಿಷ್ಠ ಮಟ್ಟಕ್ಕೂ ಮೀರಿ ಬರುತ್ತಿರುವ ಹೆಚ್ಚುವರಿ ನೀರನ್ನು ಜಲಾಶಯದ 7 ಮುಖ್ಯ ಕ್ರಸ್ಟ್‌ಗೇಟ್ ತೆರೆದು 66 ಸಾವಿರ ಕ್ಯೂಸೆಕ್‌ನಷ್ಟು ಭಾರೀ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ.
ಪುನಃ ಮಹಾರಾಷ್ಟದ ಕೊಯ್ನಾ, ಕೃಷ್ಣಾ, ಘಟಪ್ರಭಾ ಜಲಾನಯನದಲ್ಲಿ ಅಪಾರ ಪ್ರಮಾಣದ ಮಳೆ ಸುರಿಯುತ್ತಿರುವುದರಿಂದ ಮತ್ತೆ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹರಿದು ಬರುತ್ತಿರುವುದರಿಂದಲೇ ಉಭಯ ಜಲಾಶಯದಿಂದ ಕೃಷ್ಣಾ ನದಿ ಪಾತ್ರಕ್ಕೆ ನೀರು ಹರಿಬಿಡಲಾಗುತ್ತಿದೆ ಎಂದು ಅಣೆಕಟ್ಟು ಅಧಿಕಾರಿಗಳು ತಿಳಿಸಿದ್ದಾರೆ.
ಸೆ. 10ರಂದು 6.30 ಲಕ್ಷ ಕ್ಯೂಸೆಕ್ ದಾಖಲೆ ಪ್ರಮಾಣದಲ್ಲಿ ನೀರನ್ನು ಹರಿಬಿಟ್ಟಿದ್ದರಿಂದ ಭೀಕರ ಪ್ರವಾಹದ ನೀರು ಉತ್ತರದ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ, ರಾಯಚೂರು ಜಿಲ್ಲೆಗಳ ಹಲವಾರು ಗ್ರಾಮಗಳಿಗೆ ನೆರೆಹಾವಳಿ ಉಂಟಾಗಿ ಜನತೆಯನ್ನು ಕಂಗಾಲು ಮಾಡುವುದರ ಜೊತೆಗೆ ನೆರೆ ಸಂತ್ರಸ್ತರಾಗಿ ಅಪಾರ ಪ್ರಮಾಣದ ಹಾನಿ ಅನುಭವಿಸಿದ್ದ ಕಹಿಗಳಿಗೆ ಇನ್ನೂ ಮಾಸುವ ಮುನ್ನವೆ ಪುನಃ ಆಲಮಟ್ಟಿ, ನಾರಾಯಣಪುರ ಉಭಯ ಜಲಾಶಯಗಳಿಗೆ ಒಳಹರಿವು ಬರುತ್ತಿರುವುದು ನದಿ ತೀರದ ಜನತೆಗೆ ಮತ್ತೂಮ್ಮೆ ಆತಂಕ ಉಂಟು ಮಾಡಿದೆ.
ಮಂಗಳವಾರ ಬಸವಸಾಗರ ಜಲಾಶಯ ಒಳ ಹರಿವು 70 ಸಾವಿರ ಕ್ಯೂಸೆಕ್ ಇದ್ದು, 7 ಕ್ರಸ್ಟಗೇಟ್ ತೆರದು 66 ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ನೀರು ನದಿ ಪಾತ್ರಕ್ಕೆ ಹರಿಬಿಡಲಾಗಿದೆ. ಇದು ಮತ್ತೂಮ್ಮೆ ನದಿ ತೀರದ ಗ್ರಾಮಗಳ ಜನತೆಗೆ, ನಡುಗಡ್ಡೆ ಜನತೆ ಸೇರಿದಂತೆ ನದಿ ಪಾತ್ರದಲ್ಲಿ ಕೆಳ ಹಂತದ ಸೇತುವೆಗಳಿಗೆ ಪ್ರವಾಹದ ನೀರು ತೊಂದರೆ ಉಂಟು ಮಾಡುವ ಸಾಧ್ಯತೆಗಳು ಮರುಕಳಿಸುವಂತಾಗಿದೆ.