ನಾರಾಯಣಪುರ: ಮಕ್ಕಳ ಹಕ್ಕುಗಳ ರಕ್ಷಣೆ ದೃಷ್ಟಿಕೋನದಿಂದ ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ಗ್ರಾಪಂ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಮಕ್ಕಳ ಹಕ್ಕುಗಳ ನೋಡಲ್ ಅಧಿಕಾರಿ ದಶರಥ ನಾಯಕ ಹೇಳಿದರು.
ಕೊಡೇಕಲ್ ಪ್ಯಾಟಿ ಗುಡಿ ಆವರಣದ ಸರ್ಕಾರಿ ಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.
ಮಕ್ಕಳ ಆರೋಗ್ಯಕರ ಬೆಳವಣಿಗಗೆ ಪೌಷ್ಟಿಕ ಆಹಾರ ಒದಗಿಸುವುದು, ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸಲು ಕ್ರೀಡೆಗಳ ವ್ಯವಸ್ಥೆ, ಪ್ರತಿ 3ರಿಂದ 6 ವರ್ಷದ ಎಲ್ಲ ಮಕ್ಕಳು ಅಂಗನವಾಡಿ ಮತ್ತು ಶಾಲೆಗಳಲ್ಲಿ ದಾಖಲಾಗಿ ಶಿಕ್ಷಣ ಪಡೆಯುವುದು, ಅಲ್ಲದೆ ಮಕ್ಕಳ ಸಾಗಾಣಿಕೆ, ಬಾಲ್ಯ ವಿವಾಹ ಸೇರಿದಂತೆ ಮಕ್ಕಳ ಹಕ್ಕುಗಳ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಇದಾಗಿದೆ. ಮಕ್ಕಳು ತಮಗಿರುವ ಹಕ್ಕುಗಳ ಬಗ್ಗೆ ಅರಿತುಕೊಂಡರೆ ಎಲ್ಲ ಸೌಕರ್ಯ ಪಡೆಯಬಹುದಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಡೆದ ಮಕ್ಕಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಶಾಲೆ ಮಕ್ಕಳು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಪ್ರಶ್ನೆಕೇಳುವ ಮೂಲಕ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು ಹುಬ್ಬೆರಿಸುವಂತೆ ಮಾಡಿದರು. ಶಾಲೆ ಮಕ್ಕಳು ಅನುಭವಿಸುವ ಸಮಸ್ಯೆ ಆಲಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಂಗಣ್ಣ ನಾಗಬೇನಾಳ ಮಾತನಾಡಿ, ಶಾಲೆ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲಾಗುವುದು. ಮಕ್ಕಳ ರಕ್ಷಣೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆ ಅನುಷ್ಠಾನಗೊಳಿಸುವುದರ ಜತೆಗೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಹೇಳಿದರು.
ಶ್ರೀ ದಾವಲಮಲಿಕ್ ಮುತ್ಯಾ ಸಾನ್ನಿಧ್ಯ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಹಣಮಂತ ರಾಮಣ್ಣೋರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ನಿಂಬೆಮ್ಮ ಹಾವೇರಿ, ಸೋಮನಿಂಗಪ್ಪ ದೊರಿ, ಬಸವಂತಭಟ್ಟ ಜೋಶಿ, ಚಂದ್ರಶೇಖರ ಹೊಕ್ರಾಣಿ, ಬಸನಗೌಡ ಪಾಟೀಲ, ಅಂಗನವಾಡಿ ಮೇಲ್ವಿಚಾರಕಿ ಪಾರ್ವತಿ, ಹೊಳೆಪ್ಪ ಮ್ಯಾಗೇರಿ, ದೇವಿಂದ್ರಪ್ಪ ಮಡಿವಾಳರ, ರಾಜು ಭಜಂತ್ರಿ, ಭೀಮರಾಯ ಐಕೂರ, ಭೀಮಣ್ಣ ನಾಯ್ಕೋಡಿ, ವಿಶ್ವನಾಥ ಮಕ್ಕಳ ಪ್ರತಿನಿಧಿಯಾಗಿ ವಿಜಯ ಮತ್ತು ಮಲ್ಲಿಕಾ ಇದ್ದರು.
ಸಿಆರ್‌ಪಿ ಕೋರಿಸಂಗಯ್ಯ ಗಡ್ಡದ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಕಲಾ ಸ್ವಾಗತಿಸಿದರು. ಬಸಮ್ಮ ಬಸರಕೋಡ ನಿರೂಪಿಸಿದರು. ಸಿದ್ದನಗೌಡ ವಂದಿಸಿದರು. ವಿಶೇಷ ಗ್ರಾಮಸಭೆಯಲ್ಲಿ ಕೊಡೇಕಲ್ ಗ್ರಾಪಂ ವ್ಯಾಪ್ತಿಯ ವಿವಿಧ ಶಾಲೆಗಳ ಸುಮಾರು 200 ಮಕ್ಕಳು ಹಾಗೂ ಶಾಲೆಗಳ ಮುಖ್ಯಶಿಕ್ಷಕರು ಭಾಗವಹಿಸಿದ್ದರು.