Advertisement

ನಾರಾಯಣೀಯಮ್‌ನ ಎರಡು ಸಂಗೀತ  ಕಛೇರಿ

06:00 AM Nov 30, 2018 | Team Udayavani |

ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪರಿಸರದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲೆಯನ್ನು ಪಸರಿಸಬೇಕೆಂಬ ಉದ್ದೇಶದಿಂದ ಕಳೆದ ಹತ್ತೂಂಬತ್ತು ವರ್ಷಗಳ ಹಿಂದೆ ಬಳ್ಳಪದವಿನಲ್ಲಿ ನಾರಾಯಣ ಉಪಾಧ್ಯಾಯರ ಸ್ಮರಣಾರ್ಥ ಸ್ಥಾಪನೆಗೊಂಡ ‘ನಾರಾಯಣೀಯಮ…’ ಸಮುಚ್ಚಯದ ‘ವೀಣಾವಾದಿನೀ ಸಂಗೀತ ಶಾಲೆ’ಯಲ್ಲಿ ವಿದ್ಯಾದಶಮಿಯಂದು ಸರಸ್ವತಿ ಪೂಜೆ, ಹೊಸದಾಗಿ ತರಗತಿಗೆ ಸೇರಿದ ಸಂಗೀತಾಸಕ್ತ ವಿದ್ಯಾರ್ಥಿಗಳಿಗೆ ವಿದ್ಯಾರಂಭ ಮತ್ತು ಉದಯೋನ್ಮುಖ ಕಲಾವಿದರ ಎರಡು ಕಚೇರಿಗಳು ಜರಗಿದವು. 

Advertisement

ಮೊದಲ ಸಂಗೀತ ಕಚೇರಿ ನಡೆಸಿ ಕೊಟ್ಟವರು ಶಾಲೆಯ ಹಿರಿಯ ವಿದ್ಯಾರ್ಥಿನಿಯಾದ ಕುಮಾರಿ ರಮ್ಯಾ ಮಾಧವನ್‌. ವೀಣಾವಾದಿನಿಯ ಪೆರ್ಲ ಶಾಖೆಯಲ್ಲಿ ಕಳೆದ ಹದಿನೈದು ವರ್ಷಗಳಿಂದ ಸಂಗೀತ ಕಲಿಯುತ್ತಿದ್ದ ಈಕೆ ಪ್ರಸ್ತುತ ಕಣ್ಣೂರಿನಲ್ಲಿ ಎಂಜಿನಿಯರಿಂಗ್‌ ವಿದ್ಯಾಭ್ಯಾಸ ಮಾಡುತ್ತಿದ್ದರೂ ಸಂಗೀತ ಕಲಿಕೆಯನ್ನು ನಿಲ್ಲಿಸದೆ ಸತತಾಭ್ಯಾಸ ಮಾಡುತ್ತ ಬಂದಿದ್ದಾರೆ. ಉತ್ತಮ ಶಾರೀರ ಇರುವ ಈಕೆ ತಾನು ಕಲಿತುದನ್ನು ಒಂದೂವರೆ ಗಂಟೆಯ ಕಛೇರಿಯಲ್ಲಿ ಅಚ್ಚುಕಟ್ಟಾಗಿ ನಿರೂಪಿಸಿದರು. ದೇಹಭಾಷೆ ಮತ್ತು ಸ್ಥೈರ್ಯ ಮುಂದೆ ಈ ರಂಗದಲ್ಲಿ ಉಜ್ವಲ ಭವಿಷ್ಯ ಇದೆ ಎಂಬುದನ್ನು ಶ್ರುತಪಡಿಸಿತು. ಗುರುಗಳಾದ ಬಳ್ಳಪದವು ಯೋಗೀಶ ಶರ್ಮಾ ಅವರೇ ಮೃದಂಗದಲ್ಲಿ ಸಾಥ್‌ ನೀಡಿ ಕಲಾವಿದೆಯನ್ನು ಮುನ್ನಡೆಸಿದರು. ಪ್ರಭಾಕರ ಕುಂಜಾರು ಪಿಟೀಲಿನಲ್ಲಿ ಮತ್ತು ಸಹೋದರ ಕೃಷ್ಣನ್‌ ಉಣ್ಣಿ ಘಟಂ ಪಕ್ಕವಾದ್ಯ ಸಹಕಾರ ನೀಡಿ ಕಛೇರಿಯನ್ನು ರಂಜಿಸಿದರು. 

ಅನಂತರ ವಯಲಿನ್‌ ಕಚೇರಿ ನಡೆಸಿಕೊಟ್ಟವರು ಮಂಗಳೂರಿನ ಭರವಸೆಯ ಯುವ ಕಲಾವಿದೆ ಕುಮಾರಿ ಧನಶ್ರೀ ಶಬರಾಯ. ಮೈಸೂರಿನ ಹಿರಿಯ ಕಲಾವಿದ ಎಚ್‌. ಕೆ. ನರಸಿಂಹಮೂರ್ತಿ ಅವರ ಶಿಷ್ಯೆಯಾಗಿರುವ ಇವರು ಪಿಟಿಲಿನಲ್ಲಿ ಪಳಗಿದ್ದಾರೆ. ವಿವಿಧ ರಾಗಗಳನ್ನು ನಿರರ್ಗಳವಾಗಿ ಮತ್ತು ನಿರಾಯಾಸವಾಗಿ ನುಡಿಸಿದ ಇವರ ಜಾಣ್ಮೆ ಪ್ರಶಂಸೆಗೆ ಪಾತ್ರವಾಯಿತು. ಯೋಗೀಶ ಶರ್ಮ ಮೃದಂಗ ಸಾಥ್‌ ನೀಡಿದರು. ರಮ್ಯಾ ಮಾಧವನ್‌ ಮತ್ತು ಧನಶ್ರೀ ಶಬರಾಯ ಈ ಇಬ್ಬರು ಯುವ ಕಲಾವಿದರು ಇನ್ನಷ್ಟು ಸಾಧನೆ ಹಾಕಿ ಈ ಕ್ಷೇತ್ರದಲ್ಲಿ ಹೇಗೆ ಬೆಳೆಯುತ್ತಾರೆ ಎಂಬುದನ್ನು ಮುಂದಿನ ದಿನಮಾನಗಳು ಹೇಳಬೇಕಾಗಿದೆ.

ಕೆ. ಶೈಲಾಕುಮಾರಿ

Advertisement

Udayavani is now on Telegram. Click here to join our channel and stay updated with the latest news.

Next