ಕುಂದಾಪುರ: ವಿಕಲಚೇತನರ ವಿಶೇಷ ತರಬೇತಿ ಕೇಂದ್ರ ನಡೆಸಲು ತಾಳ್ಮೆ, ಸಹನೆ ಮತ್ತು ಭಾವನಾತ್ಮಕ ಸಂಬಂಧ ಇರುವವರಿಂದ ಮಾತ್ರ ಇಂತಹ ಶಿಕ್ಷಣ ಸಂಸ್ಥೆ ನಡೆಸಿಕೊಂಡು ಹೋಗಲು ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಕೆ.ಪ್ರತಾಪ್ ಚಂದ್ರ ಶೆಟ್ಟಿ ಹೇಳಿದರು. ಅವರು ಭಾನುವಾರ ತಲ್ಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ (ರಿ)ನ ನಾರಾಯಣ ವಿಶೇಷ ಶಾಲೆಯ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಆಡಳಿತ ಟ್ರಸ್ಟಿ ಸುರೇಶ್ ತಲ್ಲೂರು ಮಾತನಾಡುತ್ತ, ದೇವರ ಶಾಪದಿಂದ, ಮಾಡಿದ ಪಾಪಕರ್ಮದ ಫಲದಿಂದಾಗಿ ವಿಕಲಚೇತನ ಮಕ್ಕಳು ಹುಟ್ಟಿದ್ದಾರೆ ಎಂಬ ಮೌಢ್ಯವನ್ನು ಫೋಷಕರು ಬಿಡಬೇಕು. ನಿಮ್ಮ ಮಕ್ಕಳನ್ನು ಪ್ರೀತಿ, ವಿಶ್ವಾಸದಿಂದ ಬೆಳೆಸಬೇಕು ಎಂದು ಹೇಳಿದರು.
ಬೈಂದೂರು ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ ಅವರು ಸೆಲ್ಕೊ ಕೊಡುಗೆಗಳ ಅನಾವರಣಗೊಳಿಸಿದರು. ಉಡುಪಿ ಜಿ.ಪಂ ಸದಸ್ಯೆ ಜ್ಯೋತಿ ಅಚ್ಯುತ ಎಂ, ತಾಪಂ ಸದಸ್ಯ ಕರಣ್ ಕುಮಾರ್ ಪೂಜಾರಿ, ತಲ್ಲೂರು ಗ್ರಾಪಂ ಅಧ್ಯಕ್ಷ ಆನಂದ್ ಬಿಲ್ಲವ, ವಿಕಲಚೇತನರ,ನಾಗರಿಕರ ಸಬಲೀಕರಣ ಇಲಾಖೆ ಕಲ್ಯಾಣಾಧಿಕಾರಿ ನಿರಂಜನ್ ಭಟ್, ಮುಖ್ಯೋಪಾಧ್ಯಾಯ ಶಂಕರ್, ನ್ಯಾಯವಾದಿ ಟಿ.ಬಾಲಚಂದ್ರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿಚೈತನ್ಯ ವಿಶೇಷ ಶಾಲೆ ಕುಂದಾಪುರ, ದೀನಾ ವಿಶೇಷ ಶಾಲೆ ಶಿರೂರು, ವಾಗ್ಜೋತಿ ವಿಶೇಷ ಶಾಲೆ ಮೂಡುಬಗೆ, ನಾರಾಯಣ ವಿಶೇಷ ಶಾಲೆ ತಲ್ಲೂರು ಶಾಲಾ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ವಿಶೇಷ ಮಕ್ಕಳ ತಾಲೂಕು ಮಟ್ಟದ ಸ್ಪರ್ಧಾಕೂಟ ನಡೆಯಿತು. ಗ್ರೇಸಿ ಗೊನ್ಸಾಲ್ವೆಸ್ ಹೊರಾಂಗಣ ಸಭಾಂಗಣ ಪೆವಿಲಿಯನ್ ಶಂಕುಸ್ಥಾಪನೆ ನೆರವೇರಿಸಿದರು. ನಾರಾಯಣ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರೇಮಾ ಲೂಯಿಸ್ ಸ್ವಾಗತಿಸಿದರು. ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ರಾಜಾರಾಂ ತಲ್ಲೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು.