Advertisement

ನೀರಿಲ್ಲದೆ ಕುಂಠಿತವಾಗುತ್ತಿದೆ ಹಣ್ಣಿನ ಇಳುವರಿ

05:42 PM May 01, 2019 | Naveen |

ನಾರಾಯಣಪುರ: ಸುಮಾರು 93 ಎಕರೆಯಷ್ಟು ವಿಸ್ತಾರ ಪ್ರದೇಶದಲ್ಲಿ ಹರಡಿಕೊಂಡಿರುವ ರಾಜ್ಯ ವಲಯದ ತೋಟಗಾರಿಕೆ ಕ್ಷೇತ್ರಕ್ಕೆ ನೀರಿನ ಕೊರತೆ ಉಂಟಾಗಿದೆ.

Advertisement

ನಿರೀಕ್ಷಿತ ಮಳೆ ಮತ್ತು ಅಂತರ್ಜಲದ ಕೊರತೆಯಿಂದ ಕ್ಷೇತ್ರದಲ್ಲಿರುವ ಬಾವಿಗಳು ಬತ್ತುವ ಹಂತ ತಲುಪಿದ್ದು, ವಿಸ್ತಾರ ಪ್ರದೇಶದಲ್ಲಿ ಬೆಳೆಯಲಾದ ವಿವಿಧ ಹಣ್ಣಿನ ಗಿಡಗಳಿಗೆ ನೀರಿನ ಕೊರತೆ ಎದುರಾಗಿದೆ. ಸಮಸ್ಯೆ ನೀಗಿಸುವತ್ತ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಆದಾಯದ ಮೂಲ: ಹಲವು ದಶಕಗಳಿಂದ ಇಲ್ಲಿಯ ತೋಟಗಾರಿಕ್ಕೆ ಕ್ಷೇತ್ರ 20ಕ್ಕೂ ಹೆಚ್ಚು ರಸವತ್ತಾದ ಮಾವು, ಚಿಕ್ಕು ಹಣ್ಣಿಗೆ ಪ್ರಸಿದ್ಧಿ ಪಡೆದಿದೆ. ಪ್ರತಿ ವರ್ಷ ಲಕ್ಷಾಂತರ ರೂ. ಲಾಭ ತಂದು ಕೊಡುವ ಆದಾಯದ ಮೂಲವಾಗಿದೆ.

ಕ್ಷೇತ್ರದಲ್ಲಿ ಬೆಳೆದ ವಿವಿಧ ಹಣ್ಣುಗಳ ಫಸಲು ಮಾರಾಟಕ್ಕೆ ಆನ್‌ಲೈನ್‌ ಮೂಲಕ ಹರಾಜು ಮಾಡಲಾಗುತ್ತದೆ. 2018-19ನೇ ಸಾಲಿನ ಆನ್‌ಲೈನ್‌ ಹರಾಜು ಪ್ರಕ್ರಿಯೆಯಲ್ಲಿ 52 ಸಾವಿರ ರೂ, ಮೊತ್ತಕ್ಕೆ ನರಸಪ್ಪ ಎಂಬುವವರು ಸುಮಾರು 350ಕ್ಕೂ ಹೆಚ್ಚು ಚಿಕ್ಕು (ಸಫೋಟಾ) ಗಿಡಗಳಲ್ಲಿ ಬೆಳೆದ ಚಿಕ್ಕು ಫಸಲು ಪಡೆದಿದ್ದಾರೆ. ಕಳೆದ ವರ್ಷದ ಚಿಕ್ಕು ಹರಾಜು 73 ಸಾವಿರ ರೂ. ಮೊತ್ತಕ್ಕೆ ಹರಾಜಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ 21 ಸಾವಿರ ರೂ. ಕೊರತೆಯಾಗಿದೆ. ಅದೇ ರೀತಿ ಮಾವಿನ ಫಸಲಿನ ಆನ್‌ಲೈನ್‌ ಹರಾಜು ಏ.17ರಂದು ನಡೆದಿದೆ. 3.10 ಲಕ್ಷ ರೂ. ಮೊತ್ತಕ್ಕೆ ಮಾವು ಫಸಲಿನ ಹರಾಜು ನಡೆದಿದೆ. ಬಸವರಾಜ ಭಜಂತ್ರಿ ಎಂಬುವವರು ಹರಾಜು ಪಡೆದಿದ್ದಾರೆ. ಕಳೆದ ವರ್ಷ 2.81 ಲಕ್ಷ ರೂ. ಮೊತ್ತಕ್ಕೆ ಹರಾಜು ಆಗಿತ್ತು. ಕಳೆದ ಬಾರಿ ಹರಾಜು ಗಮನಿಸಿದರೆ 29 ಸಾವಿರ ರೂ. ಹೆಚ್ಚುವರಿ ಮೊತ್ತ ಲಭಿಸದಂತಾಗಿದೆ ಎಂದು ತೋಟಗಾರಿಕೆ ಸಹಾಯಕ ಅಧಿಕಾರಿ ಶಿವರಾಮ ರಾಠೊಡ ತಿಳಿಸಿದ್ದಾರೆ.

ಇಳುವರಿ ಕುಂಠಿತ: ನೀರಿನ ಕೊರತೆಯಿಂದ ಗಿಡದ ಬುಡದಲ್ಲಿ ತೇವಾಂಶ ಕೊರೆತೆಯಿಂದ ಹಣ್ಣಿನ ಇಳುವರಿ ಕಡಿಮೆಯಾಗಿದೆ. ಗಿಡಗಳಲ್ಲಿ ನಿರೀಕ್ಷಿತ ಕಾಯಿಗಳ ಕೊರೆತೆ ಹಾಗೂ ಹಣ್ಣುಗಳ ಗಾತ್ರ ಸಹ ಸಣ್ಣದಾಗಿವೆ ಎಂಬುದು ಅಲ್ಲಿನ ಕೆಲಸಗಾರರ ಅಭಿಪ್ರಾಯವಾಗಿದೆ.

Advertisement

ಗಿಡಗಳ ಸಮರ್ಪಕ ನಿರ್ವಹಣೆ: ತೋಟಗಾರಿಕೆ ಕ್ಷೇತ್ರದಲ್ಲಿ 350ಕ್ಕೂ ಹೆಚ್ಚು ಚಿಕ್ಕು, 344 ಮಾವಿನ ಗಿಡಗಳು, 400 ತೆಂಗು, 193 ಹುಣಸೆ ಗಿಡಗಳಿವೆ, 100 ದಾಳಿಂಬೆ, 120 ಅಂಜುರ, 60ಕ್ಕೂ ಹೆಚ್ಚು ತಾಳೆ ಮರಗಳಿವೆ. ಎಲ್ಲ ಹಣ್ಣಿನ ಗಿಡಗಳಿಗೆ ನಿತ್ಯವೂ ನಿಯಮಿತವಾಗಿ ನೀರು ಹಾಯಿಸಲಾಗುತ್ತಿದೆ. ಅವುಗಳ ಸಮರ್ಪಕ ನಿರ್ವಹಣೆ, ಪೋಷಣೆ ಮಾಡಿದಾಗ ಮಾತ್ರ ಸವೃದ್ಧ ಫಸಲು ಪಡೆಯಬಹುದು. ಅಂತಹ ತೋಟಗಾರಿಕೆ ಕ್ಷೇತ್ರದಲ್ಲಿ ಈ ಹಿಂದೆ ಅಂತರ್ಜಲದಿಂದ ನೀರು ಜಿನುಗುವ ಬಾವಿಯೊಂದನ್ನು ತೋಡಲಾಗಿತ್ತು. ಮಳೆಗಾಲ ಸೇರಿದಂತೆ ಬೇಸಿಗೆಯಲ್ಲಿ ಹಳ್ಳ ಮತ್ತು ಕಾಲುವೆ ಮತ್ತಿತರ ನೀರಿನ ಮೂಲದಿಂದ ಬಸಿ ನೀರಿಗೆ ಬಾವಿ ತುಂಬುತ್ತಿತ್ತು. ಬಾವಿಯಲ್ಲಿ ಸಂಗ್ರಹವಾದ ನೀರನ್ನು ಪೈಪ್‌ಲೈನ್‌ ಮೂಲಕ ಸಾವಿರಕ್ಕೂ ಹೆಚ್ಚು ಗಿಡಗಳಿಗೆ ಒದಗಿಸಲಾಗುತ್ತಿತ್ತು. ಕಳೆ ಕೀಳುವುದು, ಅಗತ್ಯ ಗೊಬ್ಬರ, ಪಾತೀ ಮಾಡುವ ಮೂಲಕ ನಿಯಮಿತವಾಗಿ ಗಿಡಗಳ ನಿರ್ವಹಣೆ ಮಾಡಲಾಗುತ್ತಿದೆ. ನೀರಿನ ಕೊರೆತೆ ನೀಗಿಸುವ ನಿಟ್ಟಿನಲ್ಲಿ ಕಳೆದ ವರ್ಷ ಪ್ರತಿ ಗಿಡಗಳಿಗೆ ಟ್ಯಾಂಕರ್‌ ನೀರು ಹಾಯಿಸಲಾಗಿತ್ತು. ಈ ಬಾರಿ ಪಕ್ಕದ ಖಾಸಗಿ ಕೊಳೆವೆ ಬಾವಿ ಮೂಲಕ ಹಣ್ಣಿನ ಗಿಡಗಳಿಗೆ ಮತ್ತು ಗ್ರೌಂಡ್‌ ನರ್ಸರಿಯಲ್ಲಿ ಸಿದ್ಧಪಡಿಸಲಾಗುತ್ತಿರುವ ಸಸಿಗಳಿಗೆ ನೀರುಣಿಸಲಾಗುತ್ತಿದೆ. ನಿತ್ಯ ತೋಟದ ಕೆಲಸಕ್ಕೆ 35ಕ್ಕೂ ಹೆಚ್ಚು ಜನ ಆಗಮಿಸುತ್ತಿದ್ದಾರೆ ಎಂದು ತೋಟಗಾರಿಕೆ ಸಹಾಯಕರು ತಿಳಿಸಿದ್ದಾರೆ.

ಶಾಶ್ವತ ಪರಿಹಾರ ಕಲ್ಪಿಸಿ
ಹಣ್ಣಿನ ಗಿಡಗಳಿಗೆ ನೀರಿನ ಕೊರೆತೆ ನೀಗಿಸಲು ನದಿಯಿಂದ ನೇರವಾಗಿ ನೀರು ಸರಬರಾಜು ಮಾಡುವ ಯೋಜನೆ ರೂಪಿಸಿ ಶಾಶ್ವತ ಪರಿಹಾರಕ್ಕೆ ಇಲಾಖೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next