Advertisement

ಬ್ರಿಟನ್‌ ಮಂತ್ರಿಮಂಡಲದಲ್ಲಿ ಭಾರತದ ಕಂಪು

01:31 AM Jul 26, 2019 | mahesh |

ಬ್ರಿಟನ್‌ನ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುವ ಬೋರಿಸ್‌ ಜಾನ್ಸನ್‌ ಅವರ ಮಂತ್ರಿಮಂಡಲದಲ್ಲಿ ಭಾರತದ ಕಂಪು ಅರಳಿದೆ. ಭಾರತ ಮೂಲದ ಪ್ರೀತಿ ಪಟೇಲ್‌ರನ್ನು ಗೃಹ ಸಚಿವರನ್ನಾಗಿ ನೇಮಿಸಲಾಗಿದ್ದು, ಅಲೋಕ್‌ ಶರ್ಮಾಗೆ ಅಂತಾರಾಷ್ಟ್ರೀಯ ಬಾಂಧವ್ಯಗಳ ಅಭಿವೃದ್ಧಿ ಸಚಿವ ಸ್ಥಾನ ನೀಡಲಾಗಿದೆ. ಇನ್ನು, ಇನ್ಫೋಸಿಸ್‌ ಸಂಸ್ಥಾಪಕರಾದ ಕನ್ನಡಿಗ ನಾರಾಯಣ ಮೂರ್ತಿಯವರ ಅಳಿಯ ರಿಷಿ ಸುನಕ್‌ ಅವರನ್ನು ವಿತ್ತ ಸಚಿವರನ್ನಾಗಿ ನೇಮಿಸಲಾಗಿದೆ.

Advertisement

ಯಾರು ಪ್ರೀತಿ ಪಟೇಲ್?
ಇವರ ತಂದೆಯ ಹೆಸರು ಸುಶೀಲ್ ಹಾಗೂ ತಾಯಿ ಅಂಜನಾ ಪಟೇಲ್. ಮೂಲತಃ ಗುಜರಾತ್‌ನವರು. 1960ರಲ್ಲಿ ಉಗಾಂಡಕ್ಕೆ ಸ್ಥಳಾಂತರಗೊಂಡಿದ್ದ ಈ ಕುಟುಂಬ, 1972ರಲ್ಲಿ ಬ್ರಿಟನ್‌ಗೆ ಬಂದು ನೆಲೆಸಿತ್ತು. ಪ್ರೀತಿ ಅವರು ಲಂಡನ್‌ನಲ್ಲೇ ಹುಟ್ಟಿ ಬೆಳೆ ದಿದ್ದು, ಕೀಲಿ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಪದವಿ ಪಡೆದಿ ದ್ದಾರೆ. 1995ರಿಂದ ಕನ್ಸರ್ವೇಟಿವ್‌ ಪಕ್ಷಕ್ಕೆ ಸೇರ್ಪಡೆಗೊಂಡ ಅವರು, 2010ರಿಂದ ಎಸ್ಸೆಕ್ಸ್‌ ಪ್ರಾಂತ್ಯದ ವಿಥಾಮ್‌ ಕ್ಷೇತ್ರದಿಂದ ಸಂಸದೆಯಾಗಿ ಸತತವಾಗಿ ಆಯ್ಕೆಯಾಗಿ ದ್ದಾರೆ. ಈಗಿನ ಸರ್ಕಾರದಲ್ಲೇ ಈ ಹಿಂದೆ ಪ್ರಧಾನಿಗಳಾಗಿದ್ದ ಜೇಮ್ಸ್‌ ಕ್ಯಾಮರೂನ್‌, ಥೆರೇಸಾ ಮೇ ಅವರ ಸಂಪುಟದಲ್ಲಿ ಅಂತಾರಾಷ್ಟ್ರೀಯ ಬಾಂಧವ್ಯ ಅಭಿವೃದ್ಧಿ, ಕಾರ್ಮಿಕ ಮುಂತಾದ ಇಲಾಖೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಇನ್ಫಿ ಮೂರ್ತಿಯ ಅಳಿಯ
ಸುನಕ್‌ರವರ ತಂದೆ-ತಾಯಿ, ಲಂಡನ್‌ನಲ್ಲೇ ಹುಟ್ಟಿ ಬೆಳೆದವರು. ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗಿಗಳಾಗಿದ್ದಲ್ಲದೆ, ಸ್ವಂತ ಫಾರ್ಮಸಿ ನಡೆಸಿದ್ದವರು. ಹ್ಯಾಂಪ್‌ಶೈರ್‌ನಲ್ಲಿ 1980ರ ಮೇ 12ರಂದು ಹುಟ್ಟಿದ ರಿಷಿ, ಆಕ್ಸ್‌ಫ‌ರ್ಡ್‌ ವಿವಿಯಿಂದ ತತ್ವಶಾಸ್ತ್ರ, ರಾಜಕೀಯ, ಅರ್ಥಶಾಸ್ತ್ರ ವಿಷಯಗಳಲ್ಲಿ ಪದವಿ ಪಡೆದಿದ್ದಾರೆ. ನಂತರ, ಅಮೆರಿಕದ ಸ್ಟಾನ್‌ಫೋರ್ಡ್‌ ವಿವಿಯಿಂದ ಎಂಬಿಎ ಪದವಿ ಪಡೆದಿದ್ದಾರೆ. ಷೇರು ಮಾರು ಕಟ್ಟೆ ಕ್ಷೇತ್ರದಲ್ಲಿ ಉದ್ಯೋಗ ಆರಂಭಿಸಿದ್ದ ಅವರು, 2015ರಿಂದ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟರು. ಅದೇ ವರ್ಷ, ರಿಚ್‌ಮಂಡ್‌ ಕ್ಷೇತ್ರದಲ್ಲಿ ಕನ್ಸರ್ವೇಟಿವ್‌ ಪಕ್ಷದಿಂದ ಸಂಸದರಾಗಿ ಆಯ್ಕೆಯಾದರು. ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿಯವರನ್ನು ಅವರು ವಿವಾಹವಾಗಿದ್ದಾರೆ.

ಆಗ್ರಾ ಮೂಲದ ಅಲೋಕ್‌
ರೀಡಿಂಗ್‌ ವೆಸ್ಟ್‌ ಕ್ಷೇತ್ರದಿಂದ ಸಂಸದರಾಗಿರುವ ಇವರು, ಭಾರತದ ಆಗ್ರಾದಲ್ಲಿ 1967ರ ಸೆ. 7ರಂದು ಜನಿಸಿದರು. ಐದು ವರ್ಷದವರಾಗಿದ್ದಾಗಲೇ ಲಂಡನ್‌ಗೆ ತಮ್ಮ ಹೆತ್ತವರೊಂದಿಗೆ ವಲಸೆ ಹೋಗಿದ್ದ ಅವರು, ಸಾಲ್ಫೋರ್ಡ್‌ ವಿವಿಯಿಂದ ಬಿಎಸ್‌ಸಿ (ಅಪ್ಲೈಡ್‌ ಫಿಸಿಕ್ಸ್‌ ಹಾಗೂ ಎಲೆಕ್ಟ್ರಾನಿಕ್ಸ್‌) ಪದವಿ ಪಡೆದಿದ್ದಾರೆ. ರೀಡಿಂಗ್‌ ವೆಸ್ಟ್‌ ಕ್ಷೇತ್ರದಲ್ಲಿ 2010ರಲ್ಲಿ ಸಂಸದರಾಗಿ ಆಯ್ಕೆಯಾದ ಅವರು, 2017ರಲ್ಲಿ ಥೆರೇಸಾ ಮೇ ಸಂಪುಟದಲ್ಲಿ ಸಚಿವರಾದರು. ಅವರ ಸಂಪುಟದಲ್ಲಿ ಏಷ್ಯಾ-ಪೆಸಿಫಿಕ್‌ ವ್ಯವಹಾರಗಳ ಸಚಿವರಾಗಿ, ಆನಂತರ ವಸತಿ ಇಲಾಖೆ, ಕಾರ್ಮಿಕ ಇಲಾಖೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಜಾನ್ಸನ್‌ಗೂ ಇದೆ ಭಾರತದ ನಂಟು
ಬ್ರಿಟನ್‌ನ ನೂತನ ಪ್ರಧಾನಿಯಾದ ಬೋರಿಸ್‌ ಜಾನ್ಸನ್‌ ಅವರನ್ನು ಈ ಹಿಂದೆ ಭಾರತದ ಅಳಿಯ ಎಂದೇ ಕರೆಯಲಾಗುತ್ತಿತ್ತು. ಜಾನ್ಸನ್‌ ಅವರ ಮಾಜಿ ಪತ್ನಿಯಾದ ಮರಿನಾ ವ್ಹೀಲರ್‌ ಅವರು ಭಾರತದ ಖ್ಯಾತ ಪತ್ರಕರ್ತ ಖುಷ್ವಂತ್‌ ಸಿಂಗ್‌ ಅವರ ಸಂಬಂಧಿ. ಅಂದರೆ, ಮರಿನಾ ಅವರ ತಾಯಿ ದೀಪ್‌ ಸಿಂಗ್‌ ಅವರು, ಖುಷ್ವಂತ್‌ ಸಿಂಗ್‌ ಅವರ ಕಿರಿಯ ಸಹೋದರ ದಲ್ಜೀತ್‌ ಸಿಂಗ್‌ ಅವರನ್ನು ಮದುವೆಯಾಗಿದ್ದರು. ಹಾಗಾಗಿ, ಮರಿನಾ ಅವರಿಗೆ ಭಾರತದ ನಂಟಿದೆ. 1993ರಲ್ಲಿ ಮರೀನಾ ಅವರನ್ನು ಮದುವೆಯಾಗಿದ್ದ ಜಾನ್ಸನ್‌ ಹಲವಾರು ಬಾರಿ ಭಾರತಕ್ಕೆ ಬಂದು ಹೋಗಿದ್ದಾರೆ. 25 ವರ್ಷಗಳ ದಾಂಪತ್ಯದ ನಂತರ ಕಳೆದ ವರ್ಷ ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. ಇವರಿಗೆ ನಾಲ್ವರು ಮಕ್ಕಳು.

Advertisement
Advertisement

Udayavani is now on Telegram. Click here to join our channel and stay updated with the latest news.

Next