ನವದೆಹಲಿ: ಇತ್ತೀಚಿಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು, “ಭಾರತದ ಒಟ್ಟಾರೆ ಉತ್ಪಾದಕತೆಯನ್ನು ಹೆಚ್ಚಿಸಲು ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಿರಬೇಕು’ ಎಂದು ಹೇಳಿದ್ದರು.
ಈ ಕುರಿತು ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಆರಂಭವಾದ ಬೆನ್ನಲ್ಲೇ ಅವರ ಹೇಳಿಕೆಯನ್ನು ಅವರ ಪತ್ನಿ, ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಸಮರ್ಥಿಸಿಕೊಂಡಿದ್ದಾರೆ.
“ಸ್ವತಃ ನಾರಾಯಣಮೂರ್ತಿ ಅವರೇ ವಾರಕ್ಕೆ 80ರಿಂದ 90 ಗಂಟೆಗಳು ದುಡಿಯುತ್ತಾರೆ. ಇದನ್ನೇ ಅವರು ಸಂದರ್ಶನದಲ್ಲಿ ಹೇಳಿದ್ದಾರೆ. ಕಠಿಣ ಪರಿಶ್ರಮದ ಬಗ್ಗೆ ಅವರಿಗೆ ಬಹಳ ನಂಬಿಕೆಯಿದೆ. ಅವರು ಏನು ನಂಬಿದ್ದಾರೋ ಅದನ್ನೇ ಪ್ರತಿಪಾದಿಸಿದ್ದಾರೆ’ ಎಂದು ಸುಧಾಮೂರ್ತಿ ಹೇಳಿದ್ದಾರೆ.
ಇದೇ ವೇಳೆ, “ನಾರಾಯಣಮೂರ್ತಿ ಅವರ 70 ಗಂಟೆಗಳ ಕೆಲಸದ ಹೇಳಿಕೆಯನ್ನು ಗಮನಿಸಿದೆ. ಕೇವಲ ಕಂಪನಿಯ ಕೆಲಸದ ಸಮಯದ ಬಗ್ಗೆ ಅವರು ಮಾತನಾಡುತ್ತಿಲ್ಲ ಎಂದು ನಾನು ನಂಬುತ್ತೇನೆ. ಇದು ನಿಮ್ಮ ಸ್ವಂತಕ್ಕೆ ಹಾಗೂ ದೇಶಕ್ಕೆ ಮೀಸಲಿರಿಸಬೇಕಾದ ಸಮಯ. 70 ಗಂಟೆಗಳಲ್ಲಿ-ಕಂಪನಿಗಾಗಿ 40 ಗಂಟೆಗಳು ಹಾಗೂ ಸ್ವಂತ ಏಳಿಗೆಗಾಗಿ 30 ಗಂಟೆಗಳು’ ಎಂದು ಟೆಕ್ ಮಹೀಂದ್ರಾ ಸಿಇಒ ಸಿ.ಪಿ.ಗುರ್ನಾನಿ ಅಭಿಪ್ರಾಯಪಟ್ಟಿದ್ದಾರೆ.
“ಒಂದು ವಿಷಯದ ಮೇಲೆ ನೀವು 10,000 ಗಂಟೆಗಳನ್ನು ಹೂಡಿದರೆ, ನೀವು ಅದರ ಮೇಲೆ ಪ್ರಾಬಲ್ಯ ಹೊಂದುತ್ತೀರಿ. ಕಠಿಣ ಶ್ರಮ ವಹಿಸಿದರೆ, ನಿಮ್ಮ ಕ್ಷೇತ್ರದಲ್ಲಿ ತಜ್ಞರಾಗುತ್ತೀರಿ. 70 ಗಂಟೆಗಳ ಕೆಲಸವು ನಿಮ್ಮಲ್ಲಿ ಬದಲಾವಣೆ ತರುವ ಜತೆಗೆ ದೇಶದ ಏಳ್ಗೆಗೂ ಸಹಕಾರಿಯಾಗಲಿದೆ’ ಎಂದು ಗುರ್ನಾನಿ ಪ್ರತಿಪಾದಿಸಿದ್ದಾರೆ.
ಇನ್ನೊಂದೆಡೆ, “ಕಚೇರಿಗಳು ಮತ್ತು ಮನೆಗಳ ನಡುವೆ, ಅನೇಕ ಭಾರತೀಯ ಮಹಿಳೆಯರು ಭಾರತವನ್ನು (ತಮ್ಮ ಕೆಲಸದ ಮೂಲಕ) ಮತ್ತು ಮುಂದಿನ ಪೀಳಿಗೆಯ ಭಾರತೀಯರನ್ನು (ತಮ್ಮ ಮಕ್ಕಳು) ನಿರ್ಮಿಸಲು ವಾರಕ್ಕೆ 70 ಗಂಟೆಗಳಿಗಿಂತಲೂ ಹೆಚ್ಚು ಅವಧಿ ಕೆಲಸ ಮಾಡುತ್ತಿದ್ದಾರೆ. ಇದನ್ನು ಖುಷಿಯಿಂದ ಮಾಡುತ್ತಿದ್ದಾರೆ. ಅಲ್ಲದೇ ಯಾವುದೇ ಬೇಡಿಕೆಯಿಲ್ಲದೆ ಹೆಚ್ಚುವರಿ ಅವಧಿಗೆ ದುಡಿಯುತ್ತಿದ್ದಾರೆ. ಆದರೆ ತಮಾಷೆಯೆಂದರೆ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇದುವರೆಗೂ ಯಾರೂ ಚರ್ಚೆ ಮಾಡಿಲ್ಲ’ ಎಂದು ಎಡೆಲ್ವಿಸ್ ಮ್ಯೂಚುಯಲ್ ಫಂಡ್ ಸಿಇಒ, ಎಂಡಿ ರಾಧಿಕಾ ಗುಪ್ತ ಟ್ವೀಟ್(ಎಕ್ಸ್) ಮಾಡಿದ್ದಾರೆ.