Advertisement

ನಾರಾಯಣ ಗುರು ಮಹಾನ್‌ ಪುರುಷ

10:22 AM Sep 07, 2017 | |

ಕಲಬುರಗಿ: ಒಂದೇ ಮತ ಅದುವೇ ಮನುಜ ಮತ ಎಂದು ಸಾರಿ ಹೇಳಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಎಲ್ಲರನ್ನು ಒಗ್ಗೂಡಿಸಿ ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ ಹೋಗಲಾಡಿಸಲು ಶ್ರಮಿಸಿದ ಮಹಾನ್‌ ಪುರುಷರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ
ಪಾಟೀಲ ಹೇಳಿದರು.

Advertisement

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಾಲಿಕೆ ಹಾಗೂ ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ನಗರದ ಡಾ|ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆಯ ಸಮಾರಂಭವನ್ನು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಒಂದೇ ಮತ, ಒಬ್ಬನೇ ದೇವರೆಂದು ಪ್ರತಿಪಾದಿಸಿದ ನಾರಾಯಣ ಗುರುಗಳು ಧಾರ್ಮಿಕ, ಶೈಕ್ಷಣಿಕ ಹಾಗೂ ಶೋಷಿತ ವರ್ಗದ ಸಮುದಾಯದಲ್ಲಿ ಪರಿವರ್ತನೆ ಪ್ರಜ್ಞೆಗೆ ದುಡಿದ ಶ್ರೇಷ್ಠ ಸಮಾಜ ಸುಧಾರಕರು. ಶೋಷಿತ ಸಮುದಾಯಕ್ಕೆ ದೇವಾಲಯ ಪ್ರವೇಶಿಸಲು ಅವಕಾಶ ಕಲ್ಪಿಸಿದ ಇವರು ಸಾಮಾಜಿಕ ಕ್ರಾಂತಿಗೆ ತನ್ನದೆಯಾದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಸಾಹಿತಿ ಕಾಶೀನಾಥ ಗುತ್ತೇದಾರ ಮಾತನಾಡಿ, ಶರಣರ ಮತ್ತು ಸಾಮಾಜಿಕ ಸುಧಾರಕರ ದಿನಾಚರಣೆ ಆಯಾ ಸಮುದಾಯಕ್ಕೆ ಸೀಮಿತವಾಗಿದ್ದು ಕಳವಳಕಾರಿ ಸಂಗತಿ ಎಂದರು.

ಜಿ. ಪಂ.ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಪಾಲಿಕೆ ಮಹಾಪೌರ ಶರಣಕುಮಾರ ಮೋದಿ ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾ ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ಆರ್‌. ಗುತ್ತೇದಾರ, ಜಿ.ಪಂ. ಸದಸ್ಯ ಹರ್ಷಾನಂದ ಆರ್‌. ಗುತ್ತೇದಾರ, ಸಮಾಜದ ಮುಖಂಡರುಗಳಾದ ವೆಂಕಟೇಶ ಕಡೇಚೂರ ವಿಶೇಷ ಆಹ್ವಾನಿತರಾಗಿದ್ದರು. 

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ಮುಖಂಡರನ್ನು, ಎಸ್‌.ಎಸ್‌.ಎಲ್‌.ಸಿ., ಪಿ.ಯು.ಸಿ, ಪದವಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಜಿಲ್ಲಾ ಆರ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ ನಗರದ ಸರ್ದಾರ ವಲ್ಲಭಬಾಯಿ ಪಟೇಲ್‌ ವೃತ್ತದಿಂದ ಪ್ರಾರಂಭವಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದ ಭವ್ಯ ಮೆರವಣಿಗೆ ಡಾ| ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಕೊನೆಗೊಂಡಿತು. ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಕಲೆಗಳನ್ನು ಪ್ರದರ್ಶಿಸಿದವು. 

ಜೇವರ್ಗಿ: ಶ್ರೇಷ್ಠ ಸಮಾಜ ಸುಧಾರಕ, ಸಂತ ಬ್ರಹ್ಮಶ್ರೀ ನಾರಾಯಣಗುರು ಮಾನವೀಯತೆಯ ಮಹಾನ್‌ ಚೇತನ ಎಂದು ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕ್ಕೆಮ್ಮ ಚನ್ನಮಲ್ಲಯ್ಯ ಹಿರೇಮಠ ಹೇಳಿದರು.

ತಾಲೂಕಾಡಳಿತ ವತಿಯಿಂದ ಬುಧವಾರ ತಹಶೀಲ್‌ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಉತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೂ ಧರ್ಮದಲ್ಲಿನ ಉದಾತ್ತ ಚಿಂತನೆ ಪ್ರಭಾವಕ್ಕೆ ಒಳಗಾಗಿದ್ದ ನಾರಯಣಗುರುಗಳಿಗೆ ಸಮಾಜದಲ್ಲಿನ ಅಸಮಾನತೆ, ಜಾತಿ ತಾರತಮ್ಯ, ಮೌಡ್ಯಾಚರಣೆಗಳ ಬಗ್ಗೆ ತೀವ್ರ ಅಸಮಾಧಾನ ಇತ್ತು. ಬಡವರು, ಶೋಷಿತರು, ದೀನ ದಲಿತರನ್ನು ಮಾನವೀಯ ಅಂತಃ ಕರಣದಿಂದ ಕಾಣುತ್ತಿದ್ದ ನಾರಾಯಣ ಗುರೂಜಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸಲು ಪ್ರಯತ್ನಿಸಿದ್ದಾರೆ. ಜಾತಿ, ಮತ, ಪಂಥ, ಪಂಗಡ, ಲಿಂಗ ಆಧರಿಸಿ ತಾರತಮ್ಯ ಮಾಡದೆ ಎಲ್ಲರಿಗೂ ಮುಕ್ತ ಅವಕಾಶ ನೀಡುತ್ತಿದ್ದರು. ಪ್ರತಿಯೊಬ್ಬರೂ ಗುರೂಜಿ ಅವರ ಜೀವನ ಮತ್ತು ಸಾಧನೆ ಆದರ್ಶ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕರವೇ ಮುಖಂಡ ಭಗವಂತ್ರಾಯ ಬೆಣ್ಣೂರ ಮಾತನಾಡಿ, ನಾರಾಯಣ ಗುರುಗಳು ಸಂಸ್ಕೃತ ಭಾಷೆಯಲ್ಲಿ ದರ್ಶನಮಾಲಾ ಮತ್ತು ಮಲಯಾಳಂನಲ್ಲಿ ಆತ್ಮೋಪದೇಶ ಶತಕ ಸೇರಿದಂತೆ 70 ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಸರ್ವರಿಗೂ ಸರಿ ಸಮಾನ ಶಿಕ್ಷಣ ದೊರಕಿಸುವ ಕಾಳಜಿ ಅವರದ್ದಾಗಿತ್ತು. ಮಕ್ಕಳಿಗೆ ಮಾತೃ ಭಾಷೆ, ಸಂಸ್ಕೃತ ಹಾಗೂ ಇಂಗ್ಲಿಷ ಭಾಷಾ ಕಲಿಕೆಗೆ ಮಹತ್ವ ನೀಡುವಂತೆ ಅವರು
ಸೂಚಿಸುತ್ತಿದ್ದರು. ಜಾತಿ ರಹಿತ, ವರ್ಗ ರಹಿತ ಸಮಾಜ ಕಟ್ಟಬೇಕೆಂಬ ಕನಸು ಹೊಂದಿದ್ದರು ಎಂದರು.

ತಹಶೀಲ್ದಾರ ಯಲ್ಲಪ್ಪ ಸುಬೇದಾರ, ತಾಲೂಕು ಆರ್ಯ ಈಡಿಗ ಸಮಾಜದ ಅಧ್ಯಕ್ಷ ದೇವಿಂದ್ರಪ್ಪ ಗುತ್ತೇದಾರ, ಚನ್ನಮಲ್ಲಯ್ಯ ಹಿರೇಮಠ, ಚಂದ್ರಶೆಖರ ಸೀರಿ, ವೆಂಕಯ್ಯ ಗುತ್ತೇದಾರ, ಸಲಿಂ ಕಣ್ಣಿ, ಶ್ರೀಮಂತ ಗುತ್ತೇದಾರ, ಚಂದ್ರಶೇಖರ ನೇರಡಗಿ, ಸುದೀಂದ್ರ ಇಜೇರಿ, ಮರೆಪ್ಪ ಸರಡಗಿ, ಸುರೇಶ ಗುಡೂರ, ಆಹಾರ ನಿರೀಕ್ಷಕ ಡಿ.ಬಿ.ಪಾಟೀಲ, ಶಿವಕುಮಾರ ಗುತ್ತೇದಾರ, ನಾಗರಾಜ ಹಾಲಗೂರ, ಸುಭಾಷ ಕಾಂಬಳೆ, ಸಂತೋಷ ಗುಡೂರ, ತಿಪ್ಪಣ್ಣ ಕನಕ, ಶಿವು ಗುತ್ತೇದಾರ, ಸಾಯಬಣ್ಣ ಹಾಗೂ ಸಮಾಜದ ಮುಖಂಡರು, ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next