ಶಿಡ್ಲಘಟ್ಟ : ರಾಜ್ಯದಲ್ಲಿ ಉತ್ಪಾದನೆಯಾಗುವ ರೇಷ್ಮೆಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲು ಸರ್ಕಾರ ಬದ್ದವಾಗಿದ್ದು ನೂಲು ಬಿಚ್ಚಾಣಿಕೆದಾರರು ತಯಾರಿಸುವ ಮೂರು ಸಾವಿರ ಮೆಟ್ರಿಕ್‍ಟನ್ ರೇಷ್ಮೆ ನೂಲು ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಜೊತೆಗೆ ಕಂಚಿ ಮತ್ತು ಬನಾರಸ್‍ನಲ್ಲಿ ರೇಷ್ಮೆ ಮಾರಾಟ ಮಳೆಗೆಯನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ರೇಷ್ಮೆ ಸಚಿವ ಡಾ.ಕೆ.ನಾರಾಯಣಗೌಡ ತಿಳಿಸಿದರು.
ನಗರದ 1ನೇ ಟಿಎಂಸಿ ಬಡಾವಣೆಯಲ್ಲಿ ಪ್ರಗತಿಪರ ರೇಷ್ಮೆ ನೂಲು ಬಿಚ್ಚುವವರ ಕೈಗಾರಿಕಾ ಸಹಕಾರ ಸಂಘದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ರೇಷ್ಮೆ ನೂಲು ಬಿಚ್ಚಾಣಿಕೆದಾರರು ಕಷ್ಟದಿಂದ ಜೀವನ ನಡೆಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ನೂಲು ಬಿಚ್ಚಾಣಿಕೆದಾರರಿಗೆ ಅನುಕೂಲ ಕಲ್ಪಿಸಲು ಯೋಜನೆಯನ್ನು ಸಿದ್ದಪಡಿಸಲಾಗಿದೆ ಪ್ರಸ್ತುತ ಮೂರು ಸಾವಿರ ಮೆಟ್ರಿಕ್‍ಟನ್ ರೇಷ್ಮೆ ನೂಲನ್ನು ಮಾರಾಟ ಮಾಡಲು ಈಗಾಗಲೇ ವ್ಯವಸ್ಥೆ ಮಾಡಲಾಗಿದೆ ಯಾರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದರು.
ಶಿಡ್ಲಘಟ್ಟ ನಗರದಲ್ಲಿ ಸುಮಾರು ವರ್ಷಗಳ ನಂತರ ಪುನಃ ಕಾರ್ಯಾರಂಭವಾಗಿರುವ ನೂಲು ಬಿಚ್ಚಾಣಿಕೆದಾರರ ಸಹಕಾರ ಸಂಘದ ಅಭಿವೃದ್ದಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿ ಮುಂದಿನ ದಿನಗಳಲ್ಲಿ ಸಹಕಾರ ಸಂಘಕ್ಕೆ ಸಾಲ ಅಥವಾ ಇನ್ನಿತರೆ ರೂಪದಲ್ಲಿ 2 ಕೋಟಿ ರೂ.ಗಳ ನೆರವು ಒದಗಿಸಿ ರೇಷ್ಮೆ ನೂಲು ಉತ್ಪಾದನೆಯಲ್ಲಿ ಹೊಸತಂತ್ರಜ್ಞಾನವನ್ನು ಅಳವಡಿಸಲು ಅಗತ್ಯ ಪ್ರೋತ್ಸಾಹ ನೀಡಲಾಗುವುದು ಎಂದರು.
ಇದನ್ನೂ ಓದಿ : ಬೆಳೆ ರಕ್ಷಣೆಗೆ ಹಾಕಿದ್ದ ತಂತಿಗೆ ಸಿಲುಕಿ ಒದ್ದಾಡಿದ ಚಿರತೆ : ಅರಣ್ಯ ಅಧಿಕಾರಿಗಳಿಂದ ರಕ್ಷಣೆ
ಈ ಸಂದರ್ಭದಲ್ಲಿ ಶಾಸಕ ವಿ.ಮುನಿಯಪ್ಪ, ಮಾಜಿ ಶಾಸಕ ಎಂ.ರಾಜಣ್ಣ, ರೇಷ್ಮೆ ಅಭಿವೃದ್ದಿ ಇಲಾಖೆಯ ಆಯುಕ್ತ ಪೆದ್ದಪ್ಪಯ್ಯ,ಜಂಟಿ ನಿರ್ದೇಶಕ ನಾಗಭೂಷಣ್,ಪ್ರಭಾಕರ್,ಮಾರುಕಟ್ಟೆ ಉಪನಿರ್ದೇಶಕ ಶ್ರೀನಿವಾಸ್,ಮಳ್ಳೂರು ಶಿವಣ್ಣ,ರಾಮನಗರ ರವಿ, ತಾಲೂಕು ರೀಲರ್ಸ್ ಸೊಸೈಟಿಯ ನೂತನ ಅಧ್ಯಕ್ಷ ಜಿ.ರೆಹಮಾನ್, ಉಪಾಧ್ಯಕ್ಷ ಸೈಯದ್ ಯೂಸೂಫ್, , ಸಹಕಾರ ಇಲಾಖೆಯ ಸಹಾಯಕ ನಿಬಂಧಕ ವೆಂಕಟೇಶ್‍ಮೂರ್ತಿ,ಮೌಲಾ, ಕಾರ್ಯದರ್ಶಿ ರಾಮಕುಮಾರ್, ಸನಾವುಲ್ಲಾ, ಎ.ಆರ್.ಅಬ್ದುಲ್ ಅಝೀಜ್, ಸಿ.ಎಂ.ಬಾಬು,ಕೃಷ್ಣಪ್ಪ,ಬಾಷಾ, ನಗರಸಭೆಯ ಉಪಾಧ್ಯಕ್ಷ ಬಿ.ಅಪ್ಸರ್‍ಪಾಷ, ನಗರಸಭಾ ಸದಸ್ಯ ಕೃಷ್ಣಮೂರ್ತಿ, ರಾಜ್ಯ ರೀಲರ್ಸ್ ಸಂಘದ ಉಪಾಧ್ಯಕ್ಷ ರಾಮಕೃಷ್ಣಪ್ಪ, ತಾಲೂಕು ಅಧ್ಯಕ್ಷ ಅನ್ಸರ್‍ಖಾನ್, ಉಪಾಧ್ಯಕ್ಷ ಆನಂದ್, ಮಾಜಿ ಸದಸ್ಯ ಆದಿಲ್, ಹಸೇನ್‍ಖಾನ್, ಅಬ್ದುಲ್ ಗಫೂರ್, ಬಾಂಬೆ ನವಾಝ್, ಅಬ್ದುಲ್ ವಹಾಬ್, ಮುರ್ತಝ್, ಜೆಡಿಎಸ್ ಮುಖಂಡ ಹೈದರ್ ಅಲೀ, ಅಮೀರ್‍ಜಾನ್ ಹಾಗೂ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಉಪಸ್ಥಿತರಿದ್ದರು.