“ಇವತ್ತಿನ ಯುವ ಪೀಳಿಗೆ ಎತ್ತ ಸಾಗುತ್ತಿದೆ, ಏನು ಕಳೆದುಕೊಳ್ಳುತ್ತಿದೆ ಮತ್ತು ಏನನ್ನು ಮರೆಯುತ್ತಿದೆ …’
ಇಷ್ಟು ಹೇಳಿ ಒಂದು ಕ್ಷಣ ಮೌನವಾದರು ಎಸ್. ನಾರಾಯಣ್. ಏನಾದರೂ ಬಿಟ್ಟು ಹೋಯಿತು ಎಂಬಂತಿತ್ತು ಮುಖಭಾವ. ಮರುಕ್ಷಣವೇ, ಏನು ಇಲ್ಲ ಎಂಬಂತೆ ಮಾತು ಮುಂದುವರೆಸಿದರು. “ಇದೊಂದು ಕಾಲೇಜ್ ಹಿನ್ನೆಲೆಯ ಕಥೆ. ಇವತ್ತಿನ ಯುವಕರು ಮತ್ತು ಅವರ ತಂದೆ-ತಾಯಿಯ ನಡುವೆ ಏನು ಮಿಸ್ ಆಗುತ್ತಿದೆ ಎಂದು ಹೇಳುವುದಕ್ಕೆ ಹೊರಟಿದ್ದೇವೆ’ ಎಂದರು ನಾರಾಯಣ್.
ಅವರು ಮಾತಾಡಿದ್ದು ತಮ್ಮದೇ ಹೊಸ ಚಿತ್ರದ ಮೊದಲ ಪತ್ರಿಕಾಗೋಷ್ಠಿಯಲ್ಲಿ. ಆಗಷ್ಟೇ ಚಿತ್ರದ ಮುಹೂರ್ತ ಮುಗಿಸಿ ಬಂದು ಅವರು ಕುಳಿತಿದ್ದರು. ಆ ಪಕ್ಕದಲ್ಲಿ ಮಗ, ಈ ಪಕ್ಕದಲ್ಲಿ ಅಭಿಜಿತ್ … ಹೀಗೆ ಚಿತ್ರತಂಡದವರನ್ನೆಲ್ಲಾ ತಮ್ಮ ಅಕ್ಕಪಕ್ಕದಲ್ಲಿ ಕೂಡಿಸಿಕೊಂಡು ಅವರು ಮಾತಾಡಿದರು. ಪಕ್ಕದಲ್ಲೇ ಕುಳಿತಿದ್ದ ತಮ್ಮ ಮಗನ ತಲೆಯನ್ನು ನೇವರಿಸಿ, ಹೇರ್‌ಸ್ಟೈಲ್ ತೋರಿಸುತ್ತಾ, “ಇದು ಯಂಗ್ ಜನರೇಷನ್. ನಮ್ಮದು ಯಂಗೆಂಗೋ ಜನರೇಷನ್. ಈ ಚಿತ್ರದಲ್ಲಿ ಎರಡು ತಲೆಮಾರುಗಳ ಕಥೆ ಹೇಳುವುದಕ್ಕೆ ಪ್ರಯತ್ನಿಸುತ್ತಿದ್ದೇನೆ. ಇವತ್ತಿನ ಯುವ ಪೀಳಿಗೆ ಎತ್ತ ಸಾಗುತ್ತಿದೆ ಮತ್ತು ಏನನ್ನು ಕಳೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಹೇಳುವ ಪ್ರಯತ್ನ ಇದು’ ಎಂದರು. ಅಂದಹಾಗೆ, ನಾರಾಯಣ್ ತಮ್ಮ ಚಿತ್ರಕ್ಕೆ ಹೆಸರಿಟ್ಟಿಲ್ಲ. ಅದು ಪ್ರೇಕ್ಷಕರ ಬಾಯಿಂದಲೇ ಬರಲಿ ಎಂದು ಸುಮ್ಮನಿದ್ದಾರೆ. ಚಿತ್ರಕ್ಕೆ ಅವರ ಮಗ ಪಂಕಜ್ ಹೀರೋ. ಇನ್ನು ಅಭಿಜಿತ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಧು ಕೋಕಿಲ ಇನ್ನೊಂದು ಪಾತ್ರ ಮಾಡುತ್ತಿದ್ದಾರೆ. ಸದ್ಯಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದೆ. ಚಂದನ್ ಶೆಟ್ಟಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದರೆ, ಮನೋಹರ್ ಜೋಷಿ ಶಿಷ್ಯ ಕೌಶಿಕ್‌ರಿಂದ ಛಾಯಾಗ್ರಹಣ ಮಾಡಿಸುತ್ತಿದ್ದಾರೆ. ಬೆಂಗಳೂರು, ಸಕಲೇಶಪುರ, ಶ್ರವಣೆಬೆಳಗೊಳ, ಮಂಗಳೂರು, ವಿರಾಜಪೇಟೆ, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಮಾರ್ಚ್ ಮೊದಲ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
ಒಂದು ತಲೆಮಾರನ್ನು ಪ್ರತಿನಿಧಿಸುತ್ತಿರುವ ಅಭಿಜಿತ್ ಮಾತನಾಡಿ, “ಕೆಲವು ವರ್ಷಗಳಿಂದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ನಾರಾಯಣ್ ಅವರ ನಿರ್ದೇಶನದಲ್ಲಿ ನನ್ನ ಎರಡನೆಯ ಇನ್ನಿಂಗ್ಸ್ ಪ್ರಾರಂಭಿಸಬೇಕು ಎಂಬ ಆಸೆ ಇತ್ತು. ಅವಕಾಶ ಕೂಡಿಬಂದಿದೆ. ಕಥೆ ಇಷ್ಟವಾಯ್ತು. ಪಾತ್ರ ಸಹ ಚೆನ್ನಾಗಿದೆ. ಈ ಚಿತ್ರದಿಂದ ಒಂದು ಭರ್ಜರಿ ಇನ್ನಿಂಗ್ಸ್ ಪ್ರಾರಂಭವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು ಅಭಿಜಿತ್.
ಇನ್ನೊಂದು ತಲೆಮಾರನ್ನು ಪ್ರತಿನಿಧಿಸುತ್ತಿರುವ ಪಂಕಜ್‌ಗೆ ಕಥೆ ಕೇಳುತ್ತಿದ್ದಂತೆಯೇ ಖುಷಿಯಾಗಿ ಹೋಯಿತಂತೆ. “ಈ ಚಿತ್ರಕ್ಕೆ ಹೆಚ್ಚು ತಯಾರಿಯ ಅವಶ್ಯಕತೆ ಇಲ್ಲ. ನಾನು ಈಗ ಹೇಗಿದ್ದೀನೋ? ಅದೇ ರೀತಿ ಇದ್ದರೆ ಸಾಕು. ಸೀದಾ ಚಿತ್ರೀಕರಣಕ್ಕೆ ಹೋಗಿ ಅಭಿನಯ ಮಾಡಿ ಬರಬಹುದು. ಇದೊಂದು ಕಾಲೇಜ್ ಜರ್ನಿಯ ಕಥೆ’ ಎಂದು ಹೇಳಿಕೊಂಡರು. ಈ ಹೆಸರಿಡದ ಚಿತ್ರವನ್ನು ಶ್ರೀನಿವಾಸ್, ಫಾರುಖ್ ಭಾಷ ಮತ್ತು ಅಶೋಕ್ ಸೇರಿ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರದ ಸರಿಯಾದ ಹೆಸರನ್ನು ಹೇಳಿದವರಿಗೆ ಸಿರಿ ವೈಭವ್ ಗೋಲ್ಡ್ ಪ್ಯಾಲೇಸ್‌ನಿಂದ ಒಂದು ಲಕ್ಷ ಮೊತ್ತದ ವಜ್ರದ ನೆಕ್ಲೇಸ್ ನೀಡಲಾಗುವುದಂತೆ.