Advertisement

ಗೋ ಕಳ್ಳತನವನ್ನು ಗಂಭೀರವಾಗಿ ಪರಿಗಣಿಸಲು ಆಗ್ರಹ

09:37 PM Jul 18, 2019 | mahesh |

ವೇಣೂರು: ಗೋ ಕಳ್ಳತನ ಪ್ರಕರಣಗಳು ಜಾಸ್ತಿಯಾಗಿದ್ದು, ಪೊಲೀಸರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ನಾರಾವಿ ಗ್ರಾಮ ಪಂಚಾಯತ್‌ನ ಗ್ರಾಮ ಸಭೆಯಲ್ಲಿ ಕೇಳಿಬಂತು.

Advertisement

ನಾರಾವಿ ಗ್ರಾ.ಪಂ.ನ 2019-20ನೇ ಸಾಲಿನ ಪ್ರಥಮಸುತ್ತಿನ ಗ್ರಾಮಸಭೆಯು ನಾರಾವಿ ಗ್ರಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೊಟ್ಟು ಅಧ್ಯಕ್ಷತೆಯಲ್ಲಿ ಜರಗಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸತೀಶ್‌ ಗ್ರಾಮಸಭೆಯನ್ನು ನಡೆಸಿಕೊಟ್ಟರು. ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್‌, ಗ್ರಾ.ಪಂ. ಉಪಾಧ್ಯಕ್ಷೆ ಯಶೋದಾ, ಗ್ರಾ.ಪಂ. ಸದಸ್ಯರು, ವಿವಿಧ ಇಲಾಖಾಧಿಕಾರಿಗಳು, ಪಂ. ಸಿಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.

ಸಭೆಯಲ್ಲಿ ವೇಣೂರು ಪೊಲೀಸ್‌ ಠಾಣೆಯ ಸಿಬಂದಿ ಮಾಹಿತಿ ನೀಡುತ್ತಿದ್ದ ವೇಳೆ, ಗ್ರಾಮಸ್ಥರು ಗೋ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸ ಬೇಕೆಂದು ಆಗ್ರಹಿಸಿದರು. ಸಾವಿರಾರು ಮೌಲ್ಯದ ಗೋವುಗಳನ್ನು ರೈತರ ಹಟ್ಟಿಯಿಂದಲೇ ನಿರ್ಭಯವಾಗಿ ರಾತ್ರೋರಾತ್ರಿ ಕದ್ದೊಯ್ಯಲಾಗುತ್ತಿದೆ. ಇದರಿಂದ ರೈತರು ಭಯಭೀತರಾಗಿದ್ದು, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ತಿಂಗಳಿಗೊಮ್ಮೆಯಾದರೂ ಪಂ. ವ್ಯಾಪ್ತಿಯಲ್ಲಿ ಗ್ರಾಮಸ್ಥರ ಸಭೆ ಕರೆಯಬೇಕೆಂದು ಆಗ್ರಹಿಸಿದರು.

ಪೊಲೀಸ್‌ ಸಿಬಂದಿ ಪ್ರತಿಕ್ರಿಯಿಸಿ, ಹಲವು ದಿನಗಳಿಂದ ಗೋವು ಕಳ್ಳರ ಬಗ್ಗೆ ನಿಗಾ ವಹಿಸಿದ್ದೇವೆ. ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದೇವೆ. ಸಾರ್ವಜನಿಕರೂ ಈ ಬಗ್ಗೆ ಜಾಗೃತರಾಗಬೇಕು. ದನಗಳಿರುವ ಹಟ್ಟಿಗೆ ರಾತ್ರಿವೇಳೆ ಬೀಗ ಹಾಕಬೇಕು. ಜಂಕ್ಷನ್‌ಗಳಲ್ಲಿ, ಅಂಗಡಿಗಳ ಮುಂದೆ ಸಿಸಿ ಟಿವಿ ಅಳವಡಿಸಬೇಕು. ಸಾರ್ವಜನಿ ಕರೂ ತಮ್ಮ ರಕ್ಷಣೆಗೆ ಕ್ರಮ ಕೈಗೊಂಡು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.

Advertisement

ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾ ಧಿಕಾರಿ ದೀಕ್ಷಿತಾ ಯೋಗೀಶ್‌ ಮಾಹಿತಿ ನೀಡಿ, ಕೇಂದ್ರದ ವ್ಯಾಪ್ತಿಯಲ್ಲಿ ಡೆಂಗ್ಯೂ, ಮಲೇರಿಯಾ ರೋಗ ಪ್ರಕರಣಗಳಿಲ್ಲ ಎಂದು ತಿಳಿಸಿದರು.

ರಾಷ್ಟ್ರೀಯ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ರೂ. 18,29,156 ಮೊತ್ತದಲ್ಲಿ 166 ಕಾಮಗಾರಿಗಳನ್ನು ನಿರ್ವಹಿಸಲಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷ ರವೀಂದ್ರ ಪೂಜಾರಿ ಮಾಹಿತಿ ನೀಡಿದರು. ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಸಿಬಂದಿ ಕೊರತೆಯನ್ನು ನೀಗಿಸಿ ರಾತ್ರಿ ವೇಳೆಯಲ್ಲೂ ವೈದ್ಯರ ನೇಮಕ ಆಗಬೇಕು. ಸಿಸಿಟಿವಿ ಅಳವಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ನಾರಾವಿ, ಕುತ್ಲೂರು ಹಾಗೂ ಅರಸುಕಟ್ಟೆ ಅಂಗನವಾಡಿ ಕೇಂದ್ರ ಕಟ್ಟಡಗಳ ದುರಸ್ತಿಗೆ ಜಿ.ಪಂ. ಎಂಜಿನಿಯರ್‌ ಅವರನ್ನು ಗ್ರಾಮಸ್ಥರು ಆಗ್ರಹಿಸಿದರು. ಕುಸಿದಿರುವ ಅರಸುಕಟ್ಟೆ ಅಂಗನವಾಡಿ ಕೇಂದ್ರದ ಕಂಪೌಂಡ್‌ ಅನ್ನು ದುರಸ್ತಿಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಪಂ. ಕಾರ್ಯದರ್ಶಿ ನಿರ್ಮಲ್‌ ಕುಮಾರ್‌ ಸ್ವಾಗತಿಸಿ, ಖರ್ಚು ಮಂಡನೆ ಹಾಗೂ ವಾರ್ಡ್‌ ಸಭೆಗಳಲ್ಲಿ ಬಂದ ಬೇಡಿಕೆ ಗಳನ್ನು ಹೇಳಿದರು. ಪಂ. ಅಭಿವೃದ್ಧಿ ಅಧಿಕಾರಿ ರವಿ ಎಸ್‌.ಎಂ. ವಂದಿಸಿದರು.

ಕುಕ್ಕುಜೆ ಸೇತುವೆ ಶಿಥಿಲ
ಕುಕ್ಕುಜೆ ಸೇತುವೆಯು ಶಿಥಿಲಾವಸ್ಥೆಗೆ ತಲುಪಿದ್ದು, ಹಲವು ಶಾಲಾ ವಾಹನಗಳೂ ಇದರಲ್ಲಿ ಚಲಿಸುತ್ತವೆ. ಅವಘಡ ಸಂಭವಿಸುವ ಮೊದಲು ನೂತನ ಸೇತುವೆಯನ್ನು ನಿರ್ಮಿಸಬೇಕೆಂದು ಗ್ರಾಮಸ್ಥರು ಸಭೆಯಲ್ಲಿ ಆಗ್ರಹಿಸಿದರು.

ಸರ್ವರ ಸಹಕಾರ
ಅಭಿವೃದ್ಧಿ ವಿಷಯದಲ್ಲಿ ಗ್ರಾ.ಪಂ. ಯಾವುದೇ ರಾಜಕೀಯ ಮಾಡಿಲ್ಲ. ಅಭಿವೃದ್ಧಿ ಯೋಜನೆಗಳಿಗೆ ಪಂ.ನ ಪಿಡಿಒ, ಕಾರ್ಯದರ್ಶಿ, ಸದಸ್ಯರ ಹಾಗೂ ಸಿಬಂದಿ ಸಹಕಾರ ಅತ್ಯುತ್ತಮವಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದ್ದೇವೆ. ಪತ್ರಕರ್ತರು ಕುತ್ಲೂರಿನಲ್ಲಿ ಗ್ರಾಮವಾಸ್ತವ್ಯ ನಡೆಸಿ ಈ ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿ ಗೊಳಿಸುವುದಾಗಿ ತಿಳಿಸಿದ್ದರು. ಈ ಗ್ರಾಮದ ಸಮಗ್ರ ಅಭಿವೃದ್ಧಿಯಲ್ಲಿ ಕೈಜೋಡಿಸುವರೆಂಬ ಭರವಸೆ ಇದೆ.
– ರವೀಂದ್ರ ಪೂಜಾರಿ, ಅಧ್ಯಕ್ಷರು, ನಾರಾವಿ ಗ್ರಾ.ಪಂ.

ಜಲ ಮರುಪೂರಣ
ಗ್ರಾಮಸ್ಥರ ಪ್ರಶ್ನೆಗಳು ಗ್ರಾಮದ ಅಭಿವೃದ್ಧಿಗೆ ಪೂರಕವಾಗಲಿದೆ. ಗ್ರಾಮ ಸಭೆಗಳಲ್ಲಿ ಅಧಿಕಾರಿಗಳ ಗಮನಕ್ಕೆ ತರುವ ಸಮಸ್ಯೆಗಳನ್ನು ಆ ಬಳಿಕ ವಿಚಾರಿಸಬೇಕು. ಭೂಮಿಯಲ್ಲಿ ನೀರಿನ ಮಟ್ಟ ಕುಸಿದಿದ್ದು, ಎಲ್ಲರೂ ಜಲ ಮರುಪೂರಣ ಘಟಕ ವನ್ನು ನಿರ್ಮಿಸ ಬೇಕಿದೆ. ನದಿ, ತೋಡುಗಳಲ್ಲಿ ನೀರಿನ ಹರಿವು ಕಡಿಮೆಯಾದಾಗ ಅಲ್ಲಲ್ಲಿ
ಕಟ್ಟ ನಿರ್ಮಿಸ‌ಬೇಕು.
– ಪಿ. ಧರಣೇಂದ್ರ ಕುಮಾರ್‌ಸದಸ್ಯರು, ಜಿ.ಪಂ.

Advertisement

Udayavani is now on Telegram. Click here to join our channel and stay updated with the latest news.

Next