ಬಂಟ್ವಾಳ : ಪುರಾಣ ಪ್ರಸಿದ್ಧ ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದಲ್ಲಿ ಜು. 23ರಂದು ಆಟಿ ಆಮಾವಾಸ್ಯೆ ವಿಶೇಷ ತೀರ್ಥಸ್ನಾನ ನಡೆಯಿತು. ಮುಂಜಾನೆಯೇ ಆರಂಭ ವಾದ ಜನಪ್ರವಾಹ ಅಪರಾಹ್ನದ ಹೊತ್ತಿನ ತನಕ ಆಗಮಿಸುತ್ತಲೇ ಇದ್ದರು. ನೂತನ ವಧೂವರರು, ಮಕ್ಕಳು, ಮಹಿಳೆಯರು ಸೇರಿದಂತೆ ಸಹಸ್ರಾರು ಮಂದಿ ಶಿವಭಕ್ತರು ಬೆಟ್ಟವನ್ನೇರಿ ಬಂದು ತೀರ್ಥಕೊಳಕ್ಕೆ ವೀಳ್ಯದೆಲೆ ಮತ್ತು ಹಣ್ಣು ಅಡಿಕೆ ಸಲ್ಲಿಸಿದರು.
ಕ್ಷೇತ್ರದಲ್ಲಿ ಶ್ರೀ ವಿನಾಯಕ, ನರಹರಿ ಸದಾಶಿವ, ನಾಗರಾಜನಿಗೆ ಪೂಜೆ ಸಲ್ಲಿಸುವ ಮೂಲಕ ಆಟಿ ಅಮಾವಾಸ್ಯೆಯ ವಿಶೇಷ ತೀರ್ಥಸ್ನಾನ ಮಾಡಿದರು.
ಆಟಿ ಅಮಾವಾಸ್ಯೆಯಂದು ಇಲ್ಲಿ ತೀರ್ಥಸ್ನಾನ ವೈವಾಹಿಕ ಜೀವನದಲ್ಲಿ ನೆಮ್ಮದಿ, ಯೋಗ್ಯ ಸಂತಾನ ಪ್ರಾಪ್ತಿ, ಸಂಕಷ್ಟ ನಿವಾರಣೆಯಾಗಿ ಇಷ್ಟಾರ್ಥ ಸಿದ್ಧಿಸುವುದು ಎಂಬ ನಂಬಿಕೆ ಇದ್ದು ಅದರಂತೆ ಭಕ್ತರು ತಮ್ಮ ಹರಕೆಯನ್ನು ಸಲ್ಲಿಸಿದರು. ಮಧ್ಯಾಹ್ನ ಇಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಬೆಟ್ಟವನ್ನೇರುವುದರಿಂದ ಉಬ್ಬಸ ವ್ಯಾಧಿ ದೂರವಾಗುತ್ತದೆ ಎಂಬ ಪ್ರತೀತಿ ಇದ್ದು ಹುರಿ ಹಗ್ಗದ ಹರಿಕೆ ಇಲ್ಲಿನ ವೈಶಿಷ್ಟéವಾಗಿದೆ. ದೇವರಿಗೆ ಸಲ್ಲಿಸುವ ತೊಟ್ಟಿಲು ಮಗು ಸೇವೆಯಿಂದ ಮಹಿಳೆಯರ ಬಂಜೆತನ ನಿವಾರಣೆಯಾಗುತ್ತದೆ ಎಂಬ ನಂಬಿಕೆಯೂ ಬೆಳೆದು ಬಂದಿದೆ.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ| ಪ್ರಶಾಂತ್ ಮಾರ್ಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಆತ್ಮರಂಜನ್ ರೈ, ಉತ್ಸವ ಸಮಿತಿ ಅಧ್ಯಕ್ಷ ಎ. ರುಕ್ಮಯ ಪೂಜಾರಿ, ಪ್ರಮುಖರಾದ ಪರಮೇಶ್ವರ ಮಯ್ಯ, ಕೃಷ್ಣ ನಾಯ್ಕ, ಸುಂದರ ಬಂಗೇರ, ಮೃಣಾಲಿನಿ ಸಿ. ನಾಯಕ್, ಪ್ರತಿಭಾ ಎ. ರೈ, ಮಾಧವ ಶೆಣೈ, ಎಂ.ಎನ್.ಕುಮಾರ್, ಬಾಲಕೃಷ್ಣ ಪೂಜಾರಿ, ವಿಶ್ವನಾಥ ಶೆಟ್ಟಿ, ಶಂಕರ ಆಚಾರ್ಯ, ಕಿಶೋರ್ ಕುದು¾ಲ್, ಮ್ಯಾನೇಜರ್ ಆನಂದ ಪೂಜಾರಿ ಸಹಿತ ಅನೇಕ ಕಾರ್ಯಕರ್ತರು ತೀರ್ಥ ಸ್ನಾನದ ವ್ಯವಸ್ಥೆಯಲ್ಲಿ ತೊಡಗಿದ್ದರು.