Advertisement

ಜಾನುವಾರು ದೇವ್ರೇ ಕಾಪಾಡ್ಬೇಕು

04:29 PM Dec 19, 2019 | Naveen |

„ಸಿದ್ಧಲಿಂಗಯ್ಯ ಮಣ್ಣೂರಮಠ
ನರಗುಂದ:
ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಅವ್ಯವಸ್ಥೆಯಿಂದ ಕೂಡಿದ್ದು, ಜಾನುವಾರುಗಳ ರಕ್ಷಣೆ ರೈತಾಪಿ ವರ್ಗದ ನಿದ್ದೆಗೆಡಿಸಿದೆ. 40 ಮಂಜೂರಾತಿ ಹುದ್ದೆಗಳಲ್ಲಿ 24 ಹುದ್ದೆಗಳು ಖಾಲಿ ಇದ್ದು, ಒಬ್ಬರೇ ಒಬ್ಬರು ಪಶು ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ.

Advertisement

ತಾಲೂಕಿನಲ್ಲಿ ಚಿಕ್ಕನರಗುಂದ, ಶಿರೋಳ, ಹದಲಿ, ಜಗಾಪೂರ, ಬನಹಟ್ಟಿ, ಕಣಕಿಕೊಪ್ಪದಲ್ಲಿ ಪಶು ಚಿಕಿತ್ಸಾಲಯಗಳು, ನರಗುಂದ, ಕೊಣ್ಣುರುದಲ್ಲಿ ಪಶು ಆಸ್ಪತ್ರೆಗಳಿವೆ. ವಿಚಿತ್ರವೆಂದರೆ ಏಕೈಕ ಪಶು ವೈದ್ಯಾಧಿಕಾರಿಯಾಗಿರುವ ಡಾ| ವೆಂಕಟೇಶ ಸಣಬಿದರಿ ಪ್ರಭಾರ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟಾರೆ 10 ಪಶು ವೈದ್ಯಾಧಿಕಾರಿ ಮಂಜೂರಾತಿ ಹುದ್ದೆಗಳಲ್ಲಿ 9 ಖಾಲಿ ಇವೆ. ಆಯಾ ಪಶು ಚಿಕಿತ್ಸಾಲಯ ಕೇಂದ್ರಗಳಲ್ಲಿ ಓರ್ವ ಪಶು ವೈದ್ಯರು, ಓರ್ವ ಪಶು ವೈದ್ಯ ಪರಿವೀಕ್ಷಕರು, ಇಬ್ಬರು ಡಿ ವರ್ಗ ನೌಕರರು ಸೇರಿ ನಾಲ್ವರು ಸಿಬ್ಬಂದಿ ಮಂಜೂರಾತಿ ಹುದ್ದೆಗಳಿವೆ. 6 ಚಿಕಿತ್ಸಾಲಯಗಳ ಐದರಲ್ಲಿ ವೈದ್ಯರಿಲ್ಲ. 2 ಕಡೆ ವೈದ್ಯ ಪರಿವೀಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶಿರೋಳ, ಕಣಕಿಕೊಪ್ಪ ಚಿಕಿತ್ಸಾಲಯಗಳಲ್ಲಿ ಎಲ್ಲ ಹುದ್ದೆಗಳೂ ಮತ್ತು ಮೂರು ಪಶು ವೈದ್ಯ ಸಹಾಯಕ ಹುದ್ದೆಗಳೂ ಖಾಲಿ ಇರುವುದು ದುರ್ದೈವ ಸಂಗತಿ. ತಾಲೂಕಿನ ಕೊಣ್ಣೂರ ಗ್ರಾಮದ ಪಶು ಚಿಕಿತ್ಸಾಲಯ ಪಶು ಆಸ್ಪತ್ರೆಯಾಗಿ ಪರಿವರ್ತನೆಗೊಂಡರೂ ಈ ಆಸ್ಪತ್ರೆಗೆ ಪಶು ವೈದ್ಯರನ್ನೇ ನೇಮಿಸಿಲ್ಲ. ಮಂಜೂರಾತಿ ಹುದ್ದೆಗಳು ಕೇವಲ ನಾಮಕೇವಾಸ್ತೆ ಎಂಬುದು ವಿಪರ್ಯಾಸ ಸಂಗತಿ.

ತಾಲೂಕಿನ ಪಶುಪಾಲನೆ ಇಲಾಖೆಯಡಿ ಕಾರ್ಯ ನಿರ್ವಹಿಸುವ ನರಗುಂದ ಪಶು ಆಸ್ಪತ್ರೆ ಸೇರಿ ತಾಲೂಕಿನ ಪಶು ಚಿಕಿತ್ಸಾಲಯಗಳ
40 ಮಂಜೂರಾತಿ ಹುದ್ದೆಗಳಲ್ಲಿ 16ಜನ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ನರಗುಂದ ಪಶು ಆಸ್ಪತ್ರೆ ಕೇಂದ್ರ ಕಚೇರಿಯಲ್ಲಿ ದೀರ್ಘಾವಧಿ ರಜೆಯಲ್ಲಿರುವ ಸಹಾಯಕ ಪಶು ನಿರ್ದೇಶಕರ ಹುದ್ದೆ, ಇಬ್ಬರು ಮುಖ್ಯ ಪಶು ವೈದ್ಯಾಧಿಕಾರಿ ಸೇರಿ ಪ್ರಮುಖ 3 ಹುದ್ದೆಗಳೂ ಖಾಲಿಯಿವೆ.

ಸಹಾಯಕ ಪಶು ನಿರ್ದೇಶಕರು, ವೈದ್ಯಾಧಿಕಾರಿ, ಮುಖ್ಯ ಪಶು ವೈದ್ಯಾಧಿಕಾರಿ ಹುದ್ದೆಗೆ ಇರುವುದು ಡಾ|ವೆಂಕಟೇಶ ಸಣಬಿದರಿ ಮಾತ್ರ. ಹೀಗಾಗಿ ಪಶು ಇಲಾಖೆ ಒನ್‌ ಮ್ಯಾನ್‌ ಆರ್ಮಿಯಂತೆ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೇ ತೊಂದರೆಯಾಗುತ್ತಿದೆ ಎಂಬ ದೂರುಗಳು ರೈತರಿಂದ ಕೇಳಿ ಬರುತ್ತಿದೆ. ರೈತರ ಬೆನ್ನೆಲುಬುಗಳಾದ ಜಾನುವಾರುಗಳ ಸಂರಕ್ಷಣೆ, ಸಕಾಲಕ್ಕೆ ಚಿಕಿತ್ಸೆ ಹಾಗೂ ಅಗತ್ಯ ಪಶು ವೈದ್ಯರ ಕೊರತೆ ನೀಗಿಸಲು ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಿ.ಸಿ.ಪಾಟೀಲ ಗಮನಿಸಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next