Advertisement

ನರಗುಂದ: ಸಾಹಿತ್ಯ ಲೋಕದ ಮಿನುಗುತಾರೆ ಬೇಂದ್ರೆ-ಶ್ರೀ ಶಾಂತಲಿಂಗ ಸ್ವಾಮಿ

05:55 PM Feb 03, 2024 | Team Udayavani |

ಉದಯವಾಣಿ ಸಮಾಚಾರ
ನರಗುಂದ: ಬೇಂದ್ರೆಯವರು ಸಾಹಿತ್ಯದ ಮೂಲಕ ಸಾಮಾಜಿಕ ಸಮನ್ವಯತೆ ಪರಿಕಲ್ಪನೆಯನ್ನು ನೀಡಿದ ಸಾಮರಸ್ಯದ ಕವಿ ಎಂದು ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮಿಗಳು ಹೇಳಿದರು.

Advertisement

ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ವರಕವಿ ಡಾ| ದ.ರಾ. ಬೇಂದ್ರೆ ಅವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿ, ನರಬಲಿ ಕವನದ ಮೂಲಕ ಸ್ವಾತಂತ್ರ್ಯ ಜಾಗೃತಿ ಮೂಡಿಸಿ ಸ್ವಾತಂತ್ರ್ಯಚಳವಳಿಗೆ ಪುಷ್ಟಿ ನೀಡಿದರು ಎಂದರು.

ಬ್ರಿಟಿಷರ ಕೋಪಕ್ಕೆ ಬಲಿಯಾಗಿ ಜೈಲುವಾಸ ಅನುಭವಿಸಿದ್ದ ಬೇಂದ್ರೆಯವರು ಕಷ್ಟಗಳ ಕುಲುಮೆಯಲ್ಲಿ ಬೆಂದು ಅರಳಿನಿಂತ ಅಪೂರ್ವ ಪ್ರತಿಭೆ. ಅಪ್ಪಟ ಗ್ರಾಮೀಣ ಸೊಗಡಿನಲ್ಲಿ ರಚಿಸಿದ ಅವರ ಸಾಹಿತ್ಯ ಎಲ್ಲವನ್ನೂ ಒಳಗೊಂಡಿದೆ.

ಕಿತ್ತು ತಿನ್ನುವ ಬಡತನದಲ್ಲಿ ಸಾಧನೆ ಶಿಖರವನ್ನೇರಿದ ಬೇಂದ್ರೆಯವರು ತಮ್ಮ ಬದುಕಿನುದ್ದಕ್ಕೂ ಅನುಭವಿಸಿದ ಕಷ್ಟಗಳನ್ನು ಸಾಹಿತ್ಯದ ಮೂಲಕ ಹೊರಹಾಕಿದ್ದಾರೆ ಎಂದು ಅಭಿಪ್ರಾಯ ಪಟ್ಟರು. ಅವರ ಸಾಹಿತ್ಯ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ಬೇಂದ್ರೆಯವರ ಸಾಹಿತ್ಯ ಪ್ರತಿಯೊಬ್ಬರು ಓದಲೇಬೇಕು. ಸಾಧನಕೇರಿ ಪರಿಸರ ಬೇಂದ್ರೆ ಅವರ ಸಾಧನೆಯಿಂದ ಸಾಧನೆಕೇರಿಯಾಗಿದೆ.

ಹೀಗಾಗಿ ಅವರನ್ನು ಕನ್ನಡ ಸಾಹಿತ್ಯ ಲೋಕದ ಮಿನುಗುತಾರೆ ಎಂದು ಶ್ರೀಗಳು ಬಣ್ಣಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಡಾ| ಗುರುನಾಥ ಹೂಗಾರ ಮಾತನಾಡಿ, ಬೇಂದ್ರೆಯವರ ಮಾತೃಭಾಷೆ ಮರಾಠಿಯಾಗಿದ್ದರೂ ನಿರೀಕ್ಷೆಗೂ ಮೀರಿ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಸಾಮಾನ್ಯರ ಜನಜೀವನ, ನೋವು-ನಲಿವು, ಮಿಡಿತ-ತುಡಿತಗಳನ್ನು ಕವನಗಳಲ್ಲಿ ಮೂಡಿಸಿದ
ಮಹತ್ವದ ಕವಿಗಳಲ್ಲಿ ಬೇಂದ್ರೆ ಅಗ್ರಗಣ್ಯರು ಎಂದು ಹೇಳಿದರು.

Advertisement

ಇಂತಹ ಕವಿಗಳ ಕವನಗಳನ್ನು ವಿದ್ಯಾರ್ಥಿಗಳು ಹೆಚ್ಚಾಗಿ ಓದಬೇಕಾಗಿದೆ. ಬದುಕಿನಲ್ಲಿ ಎದುರಾಗುವ ಕಷ್ಟಗಳೊಂದಿಗೆ ಚೆನ್ನಾಗಿ ಬೆಂದರೆ ಮಾತ್ರ ಬೇಂದ್ರೆ ಆಗಲು ಸಾಧ್ಯ. ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯವನ್ನು ರಾಷ್ಟ್ರಮಟ್ಟದಲ್ಲಿ ಉತ್ತುಂಗಕ್ಕೇರಿಸಿದ ಕೀರ್ತಿ ಅಂಬಿಕಾತಯನದತ್ತ ಸಲ್ಲುತ್ತದೆ ಎಂದರು.

ಕೇತ್ರ ಸಮನ್ವಯಾಧಿಕಾರಿ ಬಿ.ಎಫ್‌. ಮಜ್ಜಗಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಎನ್‌. ಆರ್‌. ನಿಡಗುಂದಿ ಹಾಗೂ ಶಿಕ್ಷಕರಾದ ಝೆಡ್‌. ಎಮ್‌. ಖಾಜಿ, ಪಿ.ಸಿ. ಕಲಹಾಳ, ಎಸ್‌.ಜಿ. ಮಣ್ಣೂರಮಠ, ವೀರಭದ್ರಪ್ಪ ಅಣ್ಣಿಗೇರಿ, ಎಸ್‌. ಎಲ್‌. ಮರಿಗೌಡ್ರ, ನಿವೃತ್ತ ಮುಖ್ಯ ಶಿಕ್ಷಕ ವೀರಯ್ಯ ಸಾಲಿಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next