Advertisement

ನರಗುಂದ: ಬಿಸಿಲ ತಾಪಕ್ಕೆ ತಂಪು ಪಾನೀಯ ಮೊರೆ ಹೋದ ಜನ

04:18 PM Apr 01, 2023 | Team Udayavani |

ನರಗುಂದ: ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಪ್ರಖರತೆಗೊಂಡಿರುವ ಸುಡು ಬಿಸಿಲಿನ ತಾಪಕ್ಕೆ ಜನರು ಬಸವಳಿದಿದ್ದಾರೆ. ಬೆಳಿಗ್ಗೆ 9-10 ಗಂಟೆಗೇ ನೆತ್ತಿ ಸುಡುತ್ತಿರುವ ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳಲು ಜನರು ತಂಪು ಪಾನೀಯಗಳ ಮೊರೆ ಹೋಗುವಂತಾಗಿದೆ.

Advertisement

ಪ್ರಸಕ್ತ ವರ್ಷದ ಬೇಸಿಗೆಯ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಳಿಗ್ಗೆಯಿಂದಲೇ ರಸ್ತೆಗಿಳಿದ ಜನತೆಯ ನೆತ್ತಿ ಸುಡುವ ಕಾಯಕದಲ್ಲಿರುವ ಸೂರ್ಯನ ಪ್ರಖರತೆಗೆ ಜನತೆ ಕಂಗಾಲಾಗಿದ್ದಾರೆ. ಇದರ ಪ್ರತಾಪದಿಂದ ಬಸವಳಿದಿರುವ ಜನರು ನಿಟ್ಟುಸಿರು ಬಿಡುತ್ತ ಒಣಗುತ್ತಿರುವ ಗಂಟಲಿನ ದಾಹ ನೀಗಿಸಿಕೊಳ್ಳಲು ಪ್ರಕೃತಿದತ್ತವಾಗಿ ಸಿಗುವ ಮಜ್ಜಿಗೆ ಸೇರಿದಂತೆ ಕೃತಕ ತಂಪು ಪಾನೀಯಗಳತ್ತ ಮುಖ ಮಾಡಿದ್ದಾರೆ.

ಗುಡ್ಡದ ಬದಿಗಿರುವ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದೆ. ಮೈಯಿಂದ ಹರಿಯುತ್ತಿರುವ ಬೆವರಿನಿಂದ ಮುಕ್ತಿ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಮಾಯವಾಗಿರುವ ಬಡವರ ಫ್ರಿಜ್‌ ಎಂದು ಕರೆಸಿಕೊಂಡಿರುವ ಮಣ್ಣಿನ ಮಡಕೆಗಳಿಗಾಗಿ ಜನರು ಹುಡಕಾಟ ನಡೆಸುವಂತಾಗಿದೆ. ತಂಪು ಪಾನೀಯಗಳಾದ ಎಳನೀರು, ಲಿಂಬೆಹಣ್ಣು, ಕಲ್ಲಂಗಡಿ, ಐಸ್‌ಕ್ರೀಮ್‌ ಮತ್ತು ಕಬ್ಬಿನ ಹಾಲಿನ ಮೊರೆ ಹೋಗುತ್ತಿದ್ದರಿಂದ ಸಹಜವಾಗಿ ಇವುಗಳ ಬೇಡಿಕೆಯೂ
ಹೆಚ್ಚಳಗೊಂಡಿದೆ. ಬೇಸಿಗೆಯ ಈ ಕಡು ಬಿಸಿಲಿನಲ್ಲಿ ಜನ ತಂಪು ಪಾನೀಯ(ಕೋಲ್ಡ್ ಡ್ರಿಂಕ್ಸ್‌) ಅಂಗಡಿಗೆ ಮುಗಿ ಬೀಳುತ್ತಿದ್ದು, ಮನೆಯಿಂದ ಹೊರಬರಲು ಹಿಂಜರಿಕೆ ಮಾಡುವಂತಾಗಿದೆ.

ಹೀಗಾಗಿ, ಪಟ್ಟಣದ ಮುಖ್ಯ ರಸ್ತೆಗಳು ಸಹ ಮಧ್ಯಾಹ್ನ 12ರಿಂದ ಸಾಯಂಕಾಲ 5 ಗಂಟೆವರೆಗೆ ಜನರಿಲ್ಲದೇ ಬಿಕೋ ಎನ್ನುತ್ತಿವೆ. ಮೂಲೆ ಸೇರಿದ್ದ ಫ್ಯಾನ್‌ಗಳು ತಿರುಗುತ್ತಿವೆ. ಹೊಸ ಫ್ಯಾನ್‌ಗಳ  ಖರೀದಿಯಾಗುತ್ತಿವೆ. ಆದರೆ, ವಿದ್ಯುತ್‌ ಪೂರೈಕೆಯ ಕಣ್ಣಾಮುಚ್ಚಾಲೆಯಿಂದ ಜನ ಬೇಸತ್ತಿದ್ದಾರೆ. ಬಿಸಿಲಿನ ಝಳದಿಂದ ಬಳಲಿದ ಜನತೆಯ ಬಾಯಾರಿಸುವ ಲಿಂಬೆಹಣ್ಣು ಮಾರುಕಟ್ಟೆಯಲ್ಲಿ ದುಬಾರಿಯಾಗಿದೆ.

50 ಪೈಸೆ, 1 ರೂ.ಗೆ ಸಿಗುತ್ತಿದ್ದ 1 ಲಿಂಬೆಹಣ್ಣಿನ ದರ 2, 3 ರೂ.ಗೆ ಏರಿಕೆಯಾಗಿದೆ ಎನ್ನಲಾಗಿದೆ. ಸದ್ಯ ಸುಡು ಬಿಸಿಲಿನ ಝಳದಿಂದ ತತ್ತರಿಸಿದ ಜನತೆ ಇದೆಂಥಾ ಬಿಸಿಲಪ್ಪಾ.. ಮಾರ್ಚ್‌ ತಿಂಗಳಲ್ಲಿಯೇ ಇಷ್ಟೊಂದು ಬೇಸಿಗೆಯ ಪ್ರಖರತೆ ಅನುಭವಿಸಿದರೆ ಏಪ್ರಿಲ್‌, ಮೇ ತಿಂಗಳಲ್ಲಿ ಇನ್ಯಾವ ಗತಿ ಕಾದಿದೆಯೋ ಎಂಬ ಆತಂಕದಲ್ಲಿದ್ದಾರೆ. ಒಟ್ಟಾರೆ ಬೇಸಿಗೆಯ ರಣಬಿಸಿಲು ಜನರನ್ನು ಕಂಗಾಲಾಗಿಸಿದೆ.

Advertisement

*ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

Udayavani is now on Telegram. Click here to join our channel and stay updated with the latest news.

Next