Advertisement

ನರೇಗಾದಡಿ ಜಲಾಮೃತ ಯೋಜನೆ ಆರಂಭಿಸಲು ಒತ್ತಾಯ

10:35 AM Jun 28, 2019 | Suhan S |

ಬೈಲಹೊಂಗಲ: ರೈತರಿಗೆ ನರೇಗಾದಡಿ ಕೇವಲ ಕೆರೆ ಹೂಳೆತ್ತುವ ಕಾಮಗಾರಿಗಳನ್ನು ಕೊಡುವ ಬದಲು ಜಲಾಮೃತ ಯೋಜನೆಯಡಿ ರೈತರು ತಮ್ಮ ಜಮೀನು ಹಾಗೂ ಸ್ವಂತ ಜಾಗದಲ್ಲಿ ವಿವಿಧ ಕೆಲಸಗಳನ್ನು ಮಾಡಿಕೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ತಾಪಂ ಸದಸ್ಯ ಸಂಗಯ್ಯ ದಾಭಿಮಠ ಆಗ್ರಹಿಸಿದರು.

Advertisement

ತಾಲೂಕಿನ ದೊಡವಾಡ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಗುರುವಾರ ಜರುಗಿದ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಇದರಿಂದ ಕಾಮಗಾರಿ ಮತ್ತು ಯೋಜನೆ ಪರಿಪೂರ್ಣವಾಗುತ್ತವೆ. ಗ್ರಾಮದಲ್ಲಿ ಈ ಯೋಜನೆ ಅನುಷ್ಠಾನದ ಕುರಿತಾಗಿ ಈಗಾಗಲೇ ತಾಪಂ ಇಒ ಹಾಗೂ ಜಿಪಂ ಅಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ಸಭೆಯಲ್ಲಿ ತಿಳಿಸಿದರು. ಎಲ್ಲ ಸದಸ್ಯರು ಇದಕ್ಕೆ ಸಹಮತ ವ್ಯಕ್ತ ಪಡಿಸಿದರು.

ವಾರ್ಡ್‌ ಸಂಖ್ಯೆ 5ರ ಸದಸ್ಯ ಯಮನಪ್ಪ ಅಟಗಲ್ಲ ಮಾತನಾಡಿ, ತಮ್ಮ ವಾರ್ಡಿನ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಶೀಘ್ರ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು. ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ದುರಸ್ತಿ ಸೇರಿದಂತೆ ನಾನಾ ಸಮಸ್ಯೆಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಪಿಡಿಒ ಹಾಗೂ ಸದಸ್ಯರ ಗಮನಕ್ಕೆ ತಂದರು. ಗ್ರಾಮದಲ್ಲಿ ಹೆಚ್ಚುತ್ತಿರುವ ಡೆಂಘೀ ಜ್ವರ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಸದಸ್ಯರು ವಾರಕ್ಕೊಮ್ಮೆ ಫಾಗಿಂಗ್‌ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು. ಮುಖಂಡ ಮುದಕಪ್ಪ ಮಾಡಲಗಿ ಮಾತನಾಡಿ, ತಾಲೂಕಿನಲ್ಲೇ ಹೆಚ್ಚಿನ ವಿದ್ಯುತ್‌ ಬಿಲ್ ಪಾವತಿಸುವ ಗ್ರಾಮಕ್ಕೆ ವಿದ್ಯುತ್‌ ಪೂರೈಕೆಯಲ್ಲಿ ಆಗುತ್ತಿರುವ ತೊಂದರೆ ನಿವಾರಣೆಗೆ ಪ್ರತ್ಯೇಕ ಸರಬರಾಜು ವ್ಯವಸ್ಥೆ ಮಾಡಿಕೊಡಲು ಹೆಸ್ಕಾಂ ಮೇಲಧಿಕಾರಿಗಳ ಗಮನಕ್ಕೆ ತಂದು ಶೀಘ್ರ ಕೆಲಸ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಬಸವ ಆವಾಸ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಆಯ್ಕೆಯಾದ 20 ಫಲಾನುಭವಿಗಳ ಹೆಸರನ್ನು ಸಭೆಯಲ್ಲಿ ಘೋಷಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಸಕ್ಕೂಬಾಯಿ ಕಾಳಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗಂಗಪ್ಪ ಕಂಬಾರ, ನೋಡಲ್ ಅಧಿಕಾರಿ ಗಾಯತ್ರಿ ಲೋಕನ್ನವರ ವೇದಿಕೆ ಮೇಲಿದ್ದರು. ಪಿಡಿಓ ಎಸ್‌.ಐ. ದಾನಪ್ಪನವರ ನಿರೂಪಿಸಿ ವಂದಿಸಿದರು. ಗ್ರಾಪಂನ ಎಲ್ಲ ಸದಸ್ಯರು, ವಿವಿಧ ಇಲಾಖೆ ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next