ತನಗಿರುವ ಅತಿಯಾದ ನಿದ್ದೆಯ ಖಾಯಿಲೆಯಿಂದ ಎಲ್ಲರಿಂದ ತಿರಸ್ಕಾರಕ್ಕೆ ಒಳಗಾಗುವ ಯುವಕ. ಮತ್ತೂಬ್ಬ ಮಗ ಮತ್ತು ಸೊಸೆಯ ಉಪಟಳದಿಂದ ಬೇಸತ್ತ ಮುದುಕ. ಇವರಿಬ್ಬರ ನಡುವೆ ಹಣಕ್ಕಾಗಿ ವೇಶ್ಯಾವಾಟಿಕೆ ದಾರಿ ಹಿಡಿದ ಹುಡುಗಿ. ಈ ಮೂರು ಬೇರೆ ಬೇರೆ ಹಿನ್ನೆಲೆಯಿಂದ ಬಂದವರು ಒಂದು ಕಡೆ ಸೇರಿದಾಗ ನಡೆಯುವ ಒಂದಷ್ಟು ಘಟನೆಗಳು ಹೇಗಿರುತ್ತವೆ ಎಂಬುದು ಈ ವಾರ ತೆರೆಗೆ ಬಂದಿರುವ “ನಾನು ಅದು ಮತ್ತು ಸರೋಜ’ ಚಿತ್ರ.
ಸಿನಿಮಾದ ಬಿಡುಗಡೆಗೂ ಮೊದಲೆ ಟೀಸರ್, ಟ್ರೇಲರ್‌ನಲ್ಲಿ ಕಾಣಿಸಿದಂತೆ “ನಾನು ಅದು ಮತ್ತು ಸರೋಜ’ ಒಂದು ಕಾಮಿಡಿ, ಸಸ್ಪೆನ್ಸ್ ಮತ್ತು ಎಮೋಶನ್ಸ್ ಅಂಶಗಳನ್ನು ಇಟ್ಟುಕೊಂಡು ತೆರೆಗೆ ಬಂದಿರುವ ಸಿನಿಮಾ. ಸರಳವಾದ ಕಥೆಯ ಎಳೆಯನ್ನು ಇಟ್ಟುಕೊಂಡು ಅದಕ್ಕೆ ಒಂದಷ್ಟು ಮಸಾಲ ಅಂಶಗಳನ್ನು ಸೇರಿಸಿ ಮಾಸ್ ಆಡಿಯನ್ಸ್‌ಗೆ ಇಷ್ಟವಾಗುವಂತೆ ಸಿನಿಮಾ ಮಾಡುವ ಪ್ರಯತ್ನ ಚಿತ್ರತಂಡ ಮಾಡಿದೆ.
ಸಿನಿಮಾದ ಟೈಟಲ್ಲೇ ಹೇಳುವಂತೆ “ನಾನು ಅದು ಮತ್ತು ಸರೋಜ’ ಸಿನಿಮಾ ಕಥೆ ಮುಖ್ಯವಾಗಿ ಲೂಸ್‌ಮಾದ ಯೋಗಿ, ದತ್ತಣ್ಣ ಮತ್ತು ಅಪೂರ್ವಾ ಭಾರದ್ವಾಜ್ ಕಾಣಿಸಿಕೊಂಡಿರುವ ಮೂರು ಪಾತ್ರಗಳ ಸುತ್ತ ನಡೆಯುತ್ತದೆ. ಈ ಮೂರು ಪಾತ್ರಗಳೇ ಇಡೀ ಸಿನಿಮಾದ ಹೈಲೈಟ್ಸ್ ಎಂದರೂ ತಪ್ಪಾಗಲಾರದು. ಮೂವರು ಕೂಡ ತಮ್ಮ ಪಾತ್ರವನ್ನು ಯಶಸ್ವಿಯಾಗಿ ದಡ ಮುಟ್ಟಿಸಿದ್ದಾರೆ. ಉಳಿದಂತೆ ಇತರ ಪಾತ್ರಗಳಿಗೆ ಹೆಚ್ಚಿನ ಮಣೆ, ಮನ್ನಣೆ ಇಲ್ಲದಿರುವುದರಿಂದ, ಅವುಗಳ ಬಗ್ಗೆ ಹೆಚ್ಚೇನೂ ಹೇಳಲಾಗದು. ಅದನ್ನು ಹೊರತುಪಡಿಸಿ “ನಾನು ಅದು ಮತ್ತು ಸರೋಜ’ದ ಒಂದಷ್ಟು ಸನ್ನಿವೇಶಗಳು, ಸಂಭಾಷಣೆಗಳು ಅಲ್ಲಲ್ಲಿ ಕಚಗುಳಿಯಿಡುವಂತಿದೆ.
ಚಿತ್ರಕಥೆ ಮತ್ತು ನಿರೂಪಣೆ ಇನ್ನಷ್ಟು ಗಟ್ಟಿಯಾಗಿದ್ದರೆ, “ನಾನು ಅದು ಮತ್ತು ಸರೋಜ’ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಮುಟ್ಟುವ ಸಾಧ್ಯತೆಗಳಿದ್ದವು. ಆ ಸಾಧ್ಯತೆಯನ್ನು ಚಿತ್ರತಂಡ ಸರಿಯಾಗಿ ಬಳಸಿಕೊಂಡಂತಿಲ್ಲ. ಅದೆಲ್ಲವನ್ನು ಬದಿಗಿಟ್ಟು ಹೇಳುವುದಾದರೆ, ಅತಿಯಾದ ನಿರೀಕ್ಷೆಗಳಿಲ್ಲದೆ ಥಿಯೇಟರ್‌ಗೆ ಹೋದವರಿಗೆ ಒಂದಷ್ಟು ಮನರಂಜನೆ ನೀಡುವಲ್ಲಿ ಚಿತ್ರ ಯಶಸ್ವಿಯಾಗಿದೆ ಎನ್ನಬಹುದು.
ಜಿಎಸ್ ಕೆ