ನವದೆಹಲಿ:ತೈವಾನ್‌ನ ಸಂಸದೀಯ ನಿಯೋಗವು ಭಾರತಕ್ಕೆ ಭೇಟಿ ನೀಡಿರುವುದು ಚೀನಾದ ನಿದ್ದೆಗೆಡಿಸಿದೆ. ಭಾರತ-ಚೀನಾ ಸಂಬಂಧ ಚೆನ್ನಾಗಿರಬೇಕೆಂದರೆ ತೈವಾನ್‌ಗೆ ಸಂಬಂಧಿಸಿದ ವಿಚಾರದಲ್ಲಿ ಎಚ್ಚರಿಕೆಯಿಂದ ವರ್ತಿಸಿ ಎಂದು ಭಾರತಕ್ಕೆ ಚೀನಾ ಎಚ್ಚರಿಕೆ ನೀಡಿದೆ. ಜತೆಗೆ, ಭಾರತಕ್ಕೆ ತೈವಾನ್ ವಿಚಾರದಲ್ಲಿ ಆದಷ್ಟು ಜಾಗರೂಕತೆಯಿಂದ ವರ್ತಿಸಿದರೆ, ನಮ್ಮ ಸಂಬಂಧ ಉಳಿಯಬಹುದು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್ ಶುವಾಂಗ್ ತಿಳಿಸಿದ್ದಾರೆ. ಇದಕ್ಕೂ ಮೊದಲು, “ತೈವಾನ್ ಕಾರ್ಡ್ ಆಡುವುದೆಂದರೆ, ಬೆಂಕಿಯೊಂದಿಗೆ ಸರಸವಾಡಿದಂತೆ’ ಎಂದು ತನ್ನ ಮಾಧ್ಯಮಗಳ ಮೂಲಕವೂ ಚೀನಾ ಭಾರತಕ್ಕೆ ಸಂದೇಶ ರವಾನಿಸಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೈವಾನ್ ಪರ ಹಾಗೂ ಚೀನಾ ವಿರೋಧಿ ಹೇಳಿಕೆಗಳಿಂದ ಈಗಾಗಲೇ ಚೀನಾ ಕೆಂಡಾಮಂಡಲವಾಗಿದೆ. ತೈವಾನ್ ತನ್ನ ಭೂಪ್ರದೇಶದ ಭಾಗವೆಂದೇ ಚೀನಾ ಹೇಳಿಕೊಳ್ಳುತ್ತಿದ್ದು, ಈ ವಿಚಾರದಲ್ಲಿ ಸಾಂಪ್ರದಾಯಿಕ ವೈರಿಗಳು ಒಂದಾಗುವ ಭೀತಿಯಲ್ಲಿದೆ.