Advertisement

ಎಲೆಂದರಲ್ಲಿ ಒಂಟಿಯಾಗಿ ಹಾರುವ ನ್ಯಾನೋಲೈಟ್‌ ಏರ್‌ ಕ್ರಾಪ್ಟ್

12:20 PM Feb 14, 2023 | Team Udayavani |

ಬೆಂಗಳೂರು: ಎಲ್ಲೆಂದರಲ್ಲಿ ಒಂಟಿಯಾಗಿ ಆಗಸದಲ್ಲಿ ಹಕ್ಕಿಯಂತೆ ಹಾರಾಡಿಸಬಲ್ಲ ಭಿನ್ನ ಮಾದರಿಯ “ನ್ಯಾನೋಲೈಟ್‌ ಏರ್‌ ಕ್ರಾಫ್ಟ್’ ಮಿನಿ ವಿಮಾನವೊಂದು ಶೀಘ್ರ ಲಗ್ಗೆ ಇಡಲು ಸಜ್ಜಾಗಿದೆ.

Advertisement

ಮಧ್ಯ ಪ್ರದೇಶದ ಗ್ವಾಲಿಯರ್‌ನ ಲಕ್ಷ್ಯ ಫ್ಲೈಯಿಂಗ್‌ ಸಿಸ್ಟಮ್ಸ್‌ ಸಂಸ್ಥೆಯು ಅಭಿವೃದ್ಧಿಪ ಡಿಸಿರುವ ಹಲವು ವೈಶಿಷ್ಟ್ಯತೆಗಳನ್ನು ಹೊಂದಿರುವ “ನ್ಯಾನೋಲೈಟ್‌ ಏರ್‌ ಕ್ರಾಫ್ಟ್’ ಮಿನಿ ವಿಮಾನವು ಏರೋ ಶೋದಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಒಂಟಿಯಾಗಿ ಆಗಸದಲ್ಲಿ ಹಾರಲು ನೆರವಾಗುವ ಮಾದರಿಯಲ್ಲಿ ಈ ವಿಮಾನವನ್ನು ಭಿನ್ನವಾಗಿ ತಯಾರಿಸಲಾಗಿದೆ.

ಇದರ ರೆಕ್ಕೆಯು 21 ಅಡಿ ಉದ್ದ ಹೊಂದಿದ್ದು, ಒಟ್ಟು 75 ಕೆ.ಜಿ. ತೂಕ ಹೊಂದಿರುವ ಈ ವಿಮಾನವು ಪ್ಯಾರೋಮೋಟಾರ್‌ ಅಥವಾ ಎಲೆಕ್ಟ್ರಿಕ್‌ ಇಂಜಿನ್‌ ಹೊಂದಿದ್ದು, 15-25ಎಚ್‌ಪಿ ಇಂಜಿನ್‌ ಸಾಮರ್ಥ್ಯ ಹೊಂದಿದೆ. “ನ್ಯಾನೋಲೈಟ್‌ ಏರ್‌ ಕ್ರಾಪ್ಟ್’ ಮಿನಿ ವಿಮಾನದಲ್ಲಿ ಗರಿಷ್ಠ 90 ಕೆ.ಜಿ.ತೂಕದ ಒಬ್ಬ ವ್ಯಕ್ತಿಗೆ ಮಾತ್ರ ಕೂರಲು ಅವಕಾಶ ಕಲ್ಪಿಸಲಾಗಿದೆ. ಈ ವಿಮಾನವು ಹೆಲಿಕಾಪ್ಟರ್‌ ಮಾದರಿಯಲ್ಲಿ ಎತ್ತರಕ್ಕೆ ಹಾರಾಟ ನಡೆಸಿ ಮುನ್ನುಗ್ಗಲಿದೆ. 60 ಕೆ.ಜಿ. ವರೆಗಿನ ವಸ್ತುಗಳನ್ನು ಹೊತ್ತೂಯ್ಯಬಲ್ಲದಾಗಿದೆ. 100 ಕಿ. ಮೀ ವೇಗದಲ್ಲಿ 3 ಗಂಟೆಗೂ ಅಧಿಕ ಅವಧಿಗಳ ಕಾಲ ಹಾರಾಟ ನಡೆಸಬಲ್ಲದಾಗಿದೆ.

ಹಲವು ವೈಶಿಷ್ಟ್ಯಗಳೊಂದಿಗೆ ಏರ್ಫ್ರೇಮ್ ಅಳವಡಿಸಲಾಗಿದೆ. ‌ಪೈಲಟ್‌ ಇಲ್ಲದೇ ಸ್ವಯಂಚಾಲಿತ (ಅಟೋಮೆಟಿಕ್‌) ವ್ಯವಸ್ಥೆಯಲ್ಲೂ ಈ ಮಿನಿ ವಿಮಾನ ಹಾರಾಟ ನಡೆಸಬಲ್ಲದಾಗಿದೆ. ಅಲ್ಲದೆ, ಪೈಲಟ್‌ ಸಹಿತ ಹಾರಾಟ ನಡೆಸಬಹುದಾದ ವಿಮಾನಗಳನ್ನೂ ಅಭಿವೃದ್ಧಿಪಡಿಸಲಾಗಿದೆ.

ಈ ವಿಮಾನ ಹಾರಾಟಕ್ಕೆ ಸಿದ್ಧವಾಗಿದ್ದು ಕೆಲವೊಂದು ಪ್ರಕ್ರಿಯೆಗಳಷ್ಟೆ ಬಾಕಿ ಇದೆ. ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಈ ವಿಮಾನವು ಸದ್ಯ ಸೇನಾ ಉಪಯೋಗಕ್ಕೆ ಯೋಗ್ಯವಾಗಿದೆ. ಸೇನೆಗೆ ಇನ್ನಷ್ಟು ಬಲ ನೀಡುವ ನಿಟ್ಟಿನಲ್ಲಿ ಈ ವಿಮಾನ ನಿರ್ಮಿಸಲಾಗಿದೆ. ಲಕ್ಷ್ಯ ಫ್ಲೈಯಿಂಗ್‌ ಸಿಸ್ಟಮ್ಸ್‌ ಸಂಸ್ಥೆಯು ಭಾರತದಲ್ಲೇ ದೇಶೀಯ ಉತ್ಪನ್ನಗಳ ಸಹಾಯದಿಂದಲೇ “ನ್ಯಾನೋಲೈಟ್‌ ಏರ್‌ ಕ್ರಾಫ್ಟ್’ ವಿನ್ಯಾಸಗೊಳಿಸಲಾಗಿದೆ.

Advertisement

ಸದ್ಯ ಇದನ್ನು ಸೇನಾ ಉಪಯೋಗಗಳಿಗೆ ಬಳಸಲು ಸಿದ್ಧತೆ ನಡೆಸಲಾಗಿದ್ದು, ಖಾಸಗಿ ವ್ಯಕ್ತಿಗಳಿಗೆ ವೈಯಕ್ತಿಕ ಬಳಕೆಗೆ ಅನುಮತಿ ಇಲ್ಲ. ಆದರೆ, ಮುಂದೆ ಖಾಸಗಿ ಬಳಕೆಗೆದಾರರೂ ಈ ವಿಮಾನದ ಅನುಕೂಲತೆ ಪಡೆದುಕೊಳ್ಳಲು ಚಿಂತಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಶಿವಾನಂದ್‌ ತಿಳಿಸಿದ್ದಾರೆ.

ಮಿನಿ ವಿಮಾನದ ಉಪಯೋಗವೇನು ? : ಸೇನಾ ಸಲಕರಣೆ ಸಾಗಾಟ, ಅಪಘಾತ ಸ್ಥಳಾಂತರ, ಉಭಯಚರ ನೌಕಾ ಕಾರ್ಯಾಚರಣೆ, ವಿವಿಧ ಸೂಕ್ಷ್ಮ ಪ್ರದೇಶಗಳ ಮೇಲೆ ಕಣ್ಗಾವಲು ಇರಿಸಲು “ನ್ಯಾನೋಲೈಟ್‌ ಏರ್‌ ಕ್ರಾಫ್ಟ್ ಸಹಕಾರಿಯಾಗಿದೆ. ಶತ್ರುಗಳು ಆಕ್ರಮಣ ಮಾಡಿದ ಸಂದರ್ಭದಲ್ಲಿ ಅವರ ಮೇಲೆ ಕಣ್ಣಿಡಲು ಸಹಕಾರಿಯಾಗಿದೆ. ಸಮುದ್ರ, ಕಾಡು, ಬೆಟ್ಟ ಸೇರಿದಂತೆ ಇಕ್ಕಟ್ಟಾದ ಪ್ರದೇಶಗಳಲ್ಲೂ ತನ್ನ ಮಿತಿಯಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ. ಕಿರಿದಾದ ಪ್ರದೇಶಗಳಲ್ಲೂ ಲ್ಯಾಂಡ್‌ ಆಗಬಲ್ಲ ಸಾಮರ್ಥ್ಯ ಹೊಂದಿದೆ.

ನ್ಯಾನೋಲೈಟ್‌ ಏರ್‌ ಕ್ರಾಫ್ಟ್ ಮಿನಿ ವಿಮಾನವನ್ನು ಒಬ್ಬ ವ್ಯಕ್ತಿಗೆ ಕುಳಿತು ಚಲಾಯಿಸುವ ಮಾದರಿಯಲ್ಲಿ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ವಿಮಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು. – ಶಿವಾನಂದ್‌, ನಿರ್ದೇಶಕ, ಲಕ್ಷ್ಯ ಫ್ಲೈಯಿಂಗ್‌ ಸಿಸ್ಟಮ್ಸ್‌

-ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next