Advertisement

ಮಧ್ಯಮ ವರ್ಗದ ಸಾರಥಿ ನ್ಯಾನೋಗೆ ಸದ್ಯದಲ್ಲೇ “ಟಾಟಾ’?

03:45 AM Feb 06, 2017 | Harsha Rao |

ಮುಂಬಯಿ: ಮಧ್ಯಮ ವರ್ಗದ ಕನಸಿನ ಕಾರು “ನ್ಯಾನೋ’ ಇನ್ನು ರಸ್ತೆಗಿಳಿಯುವುದೇ ಅನುಮಾನ! ಟಾಟಾ ಮೋಟರ್ಸ್‌ ಇದರ ಉತ್ಪಾದನೆಯನ್ನು ನಿಲ್ಲಿಸಲು ಚಿಂತಿಸಿದ್ದು, ಇದರ ಬದಲಾಗಿ ಹೊಸ ಮಾದರಿಯ ಪ್ರಯಾಣ ಸ್ನೇಹಿ ಕಾರನ್ನು ಮಾರುಕಟ್ಟೆಗೆ ಬಿಡಲು ವೇದಿಕೆ ಸಿದ್ಧವಾಗುತ್ತಿದೆ. ಈ ಮೂಲಕ ನ್ಯಾನೋ ತನ್ನ ಒಂಬತ್ತು ವರ್ಷದ ಪ್ರಯಾಣಕ್ಕೆ ಅಂತ್ಯ ಹಾಡಲಿದೆ.

Advertisement

ಕಾರಣ ಏನು?:
ನ್ಯಾನೋ ಕುರಿತು ಮಾರುಕಟ್ಟೆಯಲ್ಲಿನ ಮಿಶ್ರ ಪ್ರತಿಕ್ರಿಯೆಗಳನ್ನು ಸಂಸ್ಥೆ ಗಂಭೀರವಾಗಿ ಪರಿಗಣಿಸಿದೆ. ಅಗ್ಗದ ಕಾರು ಎಂಬ ಮೆಚ್ಚುಗೆ ಇದಕ್ಕೆ ಇದೆಯಾದರೂ ರಕ್ಷಣೆ, ಅಸ್ಥಿರತೆ, ಸ್ಥಳಾವಕಾಶದ ಕೊರತೆ, ದುರ್ಬಲ ಮಾದರಿಗಳ ಪರಿಷ್ಕರಣೆಗೆ ಸಂಸ್ಥೆಯ ಉನ್ನತ ಅಧಿಕಾರಿಗಳು ಚಿಂತಿಸಿದ್ದಾರೆ. ಅಲ್ಲದೆ, ಈ 9 ವರ್ಷಗಳಲ್ಲಿ ನ್ಯಾನೋ ಉತ್ಪನ್ನದಿಂದ 1000 ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ಮಾಹಿತಿಯಿದೆ.

ಬೇಡಿಕೆ ಕುಸಿತ: 
 2016ರ ಎಪ್ರಿಲ್‌- ಡಿಸೆಂಬರ್‌ ಅವಧಿಯಲ್ಲಿ ದೇಶಾದ್ಯಂತ ಮಾರಾಟಗೊಂಡ ನ್ಯಾನೋ ಕಾರುಗಳ ಸಂಖ್ಯೆ ಕೇವಲ 6,714! ಒಂದು ವರ್ಷದ ಹಿಂದೆ, ಅಂದರೆ 2015ರ ಅದೇ ಅವಧಿಯಲ್ಲಿ 17,258 ಕಾರುಗಳು ಮಾರಾಟ ಗೊಂಡಿದ್ದವು. ಮಾರುಕಟ್ಟೆಯಲ್ಲಿ ಶೇ.61 ಕುಸಿತ ಕಂಡಿದ್ದರಿಂದ ನ್ಯಾನೋ ಉತ್ಪಾದನೆಯನ್ನು ನಿಲ್ಲಿಸುವ ನಿರ್ಧಾರಕ್ಕೆ ಬರಲಾಗಿದೆ.

ಕಾರಿನ ಆರಂಭಿಕ ಬೆಲೆ (ಟಾಟಾ ನ್ಯಾನೋ ಜೆನ್‌ಎಕ್ಸ್‌) 2.06 ಲಕ್ಷ ರೂಪಾಯಿ ಇದ್ದು, 3 ಲಕ್ಷ ರೂಪಾಯಿಯ ಒಳಗೆ ಇನ್ನೂ ಕೆಲವು ಮಾದರಿಗಳನ್ನು ಸಂಸ್ಥೆ ಪರಿಚಯಿಸಿತ್ತು. ಇವುಗಳ ಬೆಲೆ ಏರಿಸಿದರೂ ಮಾರಾಟದಲ್ಲಿ ಇನ್ನಷ್ಟು ಕುಸಿತ ಕಾಣಬಹುದು ಎಂದು ಅಂದಾಜಿಸಲಾಗಿದೆ.

ರತನ್‌ಗೆ ಪಾಠ: ಟಾಟಾ ಸಂಸ್ಥೆಯ ಮುಖ್ಯಸ್ಥ ರತನ್‌ ಟಾಟಾ ಅವರ ಕನಸಿನ ಕೂಸು ನ್ಯಾನೋ. 2009ರಲ್ಲಿ ಇವರ ನೇತೃತ್ವದಲ್ಲಿಯೇ ಈ ಕಾರುಗಳು ಮಾರುಕಟ್ಟೆಯನ್ನು ಪ್ರವೇಶಿಸಿ, ಜನಪ್ರಿಯತೆ ಗಳಿಸಿದ್ದವು. ಆದರೆ, ಇದರ ತಯಾರಿಕೆಯಿಂದ ಆಗುತ್ತಿರುವ ನಷ್ಟವನ್ನು ಟಾಟಾ ಸಮೂಹದ ಅಧ್ಯಕ್ಷ ಸೈರಸ್‌ ಮಿಸಿŒ ಅವರು ರತನ್‌ ಟಾಟಾಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ. “ಮಧ್ಯಮವರ್ಗದ ಕಾರು ಎಂದು ನಾವು ಭಾವನಾತ್ಮಕವಾಗಿ ಯೋಚಿಸಿದರೆ, ಸಂಸ್ಥೆಗೆ ಭರಿಸಲಾಗದ ನಷ್ಟ’ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಟಾಟಾ ಆಡಳಿತ ಮಂಡಳಿ ಪದಚ್ಯುತ ಅಧ್ಯಕ್ಷ ಮಿಸಿŒ ವಿರುದ್ಧ ಆರೋಪಗಳನ್ನೂ ಮಾಡಿತ್ತು.

Advertisement

ಮುಂದಿನ ಯೋಜನೆಗಳೇನು?: 
ನ್ಯಾನೋ ಕಾರಿನ ಲೋಪಗಳನ್ನು ಗಮನದಲ್ಲಿಟ್ಟುಕೊಂಡು, ಕಡಿಮೆ ಬೆಲೆ ಯಲ್ಲಿಯೇ ಪ್ರಯಾಣಸ್ನೇಹಿ ಮಾದರಿಯ ಕಾರನ್ನು ನಿರ್ಮಿಸಲು ಮುಂದಾಗಿದೆ. ಗುಣಮಟ್ಟದ ಎಲೆಕ್ಟ್ರಿಕ್‌ ಕಾರುಗಳನ್ನು ಉತ್ಪಾದಿಸಲು ಸಂಸ್ಥೆ ಚಿಂತಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next