ಮೈಸೂರು: ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ತಾವು ಹಿಂದೆ ಸರಿದಿರುವುದಾಗಿ ಕಾಂಗ್ರೆಸ್ಸಿನ ಹಿರಿಯ ನಾಯಕ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಘೋಷಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್.ಧ್ರುವನಾರಾಯಣ್ ಅವರ ಪುತ್ರ ದರ್ಶನ್ ಧ್ರುವನಾರಾಯಣ ಅವರನ್ನು ಬುಧವಾರ ಇಲ್ಲಿನ ಅವರ ನಿವಾಸದಲ್ಲಿ ಭೇಟಿ ಮಾಡಿ ಅವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಡಾ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅವರೂ ಜೊತೆಗಿದ್ದರು.
ಡಾ.ಮಹದೇವಪ್ಪ ಅವರು ನಂತರ ಉದಯವಾಣಿ ಜೊತೆ ಮಾತನಾಡಿ, ನಂಜನಗೂಡು (ಮೀಸಲು) ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿರುವುದರಿಂದ ಹಿಂದೆ ಸರಿದಿದ್ದೇನೆ. ನನ್ನ ಸಂಪೂರ್ಣ ಬೆಂಬಲ ದರ್ಶನ್ ಧ್ರುವನಾರಾಯಣ್ ಅವರಿಗೆ ಇರುತ್ತದೆ. ನನ್ನ ಆತ್ಮಸಾಕ್ಷಿ ಪ್ರಕಾರ ಈ ನಿರ್ಧಾರ ಮಾಡಿದ್ದೇನೆ ಎಂದರು.
ಸಿದ್ದರಾಮಯ್ಯ ಅಥವಾ ಯಾವುದೇ ರಾಜಕೀಯ ನಾಯಕರ ಜೊತೆಯೂ ನಾನು ಈ ಬಗ್ಗೆ ಚರ್ಚೆ ಮಾಡಿಲ್ಲ. ಇವತ್ತಿನಿಂದ ನಂಜನಗೂಡು ಚುನಾವಣಾ ವಿಚಾರದಲ್ಲಿ ನಾನು ದರ್ಶನ್ ಧ್ರುವನಾರಾಯಣ್ ಅವರನ್ನು ಬೆಂಬಲಿಸುತ್ತೇನೆ. ಧ್ರುವನಾರಾಯಣ್ ಜೊತೆ ನನಗೆ ಯಾವತ್ತೂ ರಾಜಕೀಯ ಭಿನ್ನಾಭಿಪ್ರಾಯ ಇರಲಿಲ್ಲ. ನಂಜನಗೂಡು ಉಪ ಚುನಾವಣೆಯಲ್ಲಿ ನನ್ನ ಮಗ ಸುನೀಲ್ ಬೋಸ್‌ಗೆ ಟಿಕೆಟ್ ಕೊಡಿ ಎಂದು ಹಲವರು ಒತ್ತಾಯಿಸಿದ್ದರು. ಆದರೆ ಕಳಲೆ ಕೇಶವಮೂರ್ತಿ ಅವರಿಗೆ ಹೈಕಮಾಂಡ್ ಟಿಕೆಟ್ ಕೊಟ್ಟಿತ್ತು. ನಾನು ನಂಜನಗೂಡು ವಿಧಾನಸಭಾ ಕ್ಷೇತ್ರವನ್ನು ಈ ಹಿಂದೆ ಸಚಿವನಾಗಿ ಅಭಿವೃದ್ಧಿ ಮಾಡಿದ್ದು ನೋಡಿ ನನಗೆ ಅಲ್ಲಿಯೇ ಸ್ಪರ್ಧಿಸುವಂತೆ ಜನರು ಒತ್ತಾಯಿಸಿದ ಕಾರಣ ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದೆ. ಧ್ರುವನಾರಾಯಣ ಅವರೂ ಅರ್ಜಿ ಸಲ್ಲಿಸಿದ್ದರು ಎಂದು ಡಾ.ಮಹದೇವಪ್ಪ ಹೇಳಿದರು.