Advertisement

ಆತಿಥ್ಯ ಬಡಿಸಿ ನಶಿಸುತ್ತಿರುವ ನಂಜನಗೂಡು ರಸಬಾಳೆ ಉಳಿದೀತೇ?

04:37 PM Jan 01, 2021 | Team Udayavani |

ನಂಜನಗೂಡ: ನಂಜನಗೂಡು ರಸಬಾಳೆ ಹೆಸರನ್ನು ಕೇಳದವರೇ ಇಲ್ಲ. ಅನನ್ಯ ರುಚಿ, ಸುವಾಸನೆ,ಬೆಣ್ಣೆಯಂತೆ ಮೃದುವಾಗಿರುವ ಈ ರಸಬಾಳೆಯುಬಾಳೆಗಳ ತಳಿಗಳಲ್ಲೇ ರಾಜ ಎಂಬ ಖ್ಯಾತಿ ಪಡೆದಿದೆ.ಇದಕ್ಕೆ ಭೌಗೋಳಿಕ ಮಾನ್ಯತೆ (ಜಿಐ) ಕೂಡ ದೊರೆತಿದೆ. ಆದರೆ, ಈ ರಸಬಾಳೆ ಅವಸಾನದ ಅಂಚು ಸೇರಿದೆ. ಮುಂದೊಂದು ದಿನ ಈ ವಿಶಿಷ್ಟ ಪಾರಂಪರಿಕ ಬಾಳೆ ಕಣ್ಮರೆಯಾಗಬಹುದು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ನಂಜನಗೂಡು ತಾಲೂಕಿನ ದೇವರಸನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೆಳೆದರೆ ಮಾತ್ರ ರಸಬಾಳೆ ರಸ ಸ್ವಾದಿಷ್ಟ ದೊರೆಯುತ್ತದೆ. ಇಲ್ಲಿನ ಭೂಮಿ ಬಿಟ್ಟು ಬೇರೆಯಾವುದೇ ಭಾಗದಲ್ಲೂ ರಸಬಾಳೆಯನ್ನು ಬೆಳೆದರೆ ಅಷ್ಟು ರುಚಿ, ಸುವಾಸನೆ, ಸ್ವಾದಿಷ್ಟ ದೊರಕಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಗೆ ಈ ಬಾಳೆ ಈ ಭಾಗದ ರೈತರ ಅಸ್ಮಿತೆಯಾಗಿತ್ತು. ದೇವರಸನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಹಸ್ರಾರು ಎಕರೆಗಳಲ್ಲಿ ಬೆಳೆಯಲಾಗುತ್ತಿದ್ದ ಈ ರಸಬಾಳೆದೇಶ ವಿದೇಶದಲ್ಲೂ ಖ್ಯಾತಿ ಪಡೆದಿತ್ತು. ಪ್ರಸ್ತುತ ಇಡೀತಾಲೂಕಿನಲ್ಲಿ ಹುಡುಕಿದರೂ ನಾಲ್ಕೈದು ಎಕರೆ ಕೂಡಈ ಬೆಳೆ ಸಿಗುವುದಿಲ್ಲ. ಈ ಪ್ರದೇಶದಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡು ಸುತ್ತಾಡಿದರೂ ಹೆಚ್ಚೆಂದರೆ ನಾಲ್ಕೈದುಎಕರೆ ಮಾತ್ರ ರಸಬಾಳೆ ಸಿಗಬಹುದು. ಅಷ್ಟರಮಟ್ಟಿಗೆ ಈ ರಸಬಾಳೆ ಅವಸಾನದ ಅಂಚು ಸೇರಿದೆ.

ನಂಜನಗೂಡು ರಸಬಾಳೆಗೆ ಭೌಗೋಳಿಕ ಮಾನ್ಯತೆ :  ನಂಜನಗೂಡು ರಸಬಾಳೆಗೆ 2005ರಲ್ಲಿ ತೋಟಗಾರಿಕೆಇಲಾಖೆಯು ನೋಂದಣಿ ಗೂಡ್ಸ್‌ ಆಕ್ಟ್-1999ಅಡಿಯಲ್ಲಿ ಭೌಗೋಳಿಕ ಮಾನ್ಯತೆ ನೀಡಲಾಗಿದೆ. ಡಿಸೈನ್ಸ್‌ನಿಯಂತ್ರಕ ಜನರಲ್‌ ಹಾಗೂ ಟ್ರೇಡ್‌ಮಾರ್ಕ್‌ಕಚೇರಿಯು ಈ ಭಾಗದ ರೈತರಿಗೆ ರಸಬಾಳೆ ಹಾಗೂ ಅದರಉತ್ಪನ್ನಗಳ ಬ್ರಾಂಡ್‌ ಹಕ್ಕನ್ನು ನೀಡಿದೆ. ರಸಬಾಳೆ ಹೆಸರಿನಲ್ಲಿಬೇರೆ ಬಾಳೆಯನ್ನು ಮಾರಾಟ ಮಾಡುವುದು ನಿಯಮ ಬಾಹಿರವಾಗಿದೆ. ಆದರೂ ಸಹ ರಸಬಾಳೆ ಹೆಸರಿನಲ್ಲಿ ಏಲಕ್ಕಿ ಮತ್ತಿತರ ಬಾಳೆಯನ್ನು ಗ್ರಾಹಕರಿಗೆ ದುಪ್ಪಟ್ಟು ದರದಲ್ಲಿಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಕೂಡ ಕೇಳಿ ಬಂದಿವೆ. ನಿಜಕ್ಕೂ ರಸಬಾಳೆ ತಿಂದವನಿಗಷ್ಟೇ ಅದರ ಸ್ವಾದಿಷ್ಟ ಮೌಲ್ಯ ತಿಳಿದಿರುತ್ತದೆ.

ರಸಬಾಳೆ ಇಲ್ಲದ ಆತಿಥ್ಯವೇ ಇಲ್ಲ  ;  ಮೈಸೂರು ರಾಜರ ಮನೆತನದ ಕಾಲದಿಂದಲೂ ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ವೀಳ್ಯದಲೆ ಇಲ್ಲಿನ ಜನರಲ್ಲಿ ಹಾಸುಹೊಕ್ಕಿತ್ತು. ನಾಲ್ವಡಿಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಅರಮನೆಗೆ ಭೇಟಿನೀಡುವ ಗಣ್ಯರು ಹಾಗೂ ವಿದೇಶಿ ಅತಿಥಿಗಳಿಗೆರಸಬಾಳೆ, ಅಂಜೂರ ಹಣ್ಣನ್ನು ನೀಡಲಾಗುತ್ತಿತ್ತು.ಎರಡನೇ ಬಾರಿಗೆ ಅರಮನೆಗೆ ಬಂದವರುಮರೆಯದೇ ಈ ಹಣ್ಣುಗಳನ್ನು ಕೇಳಿ ಪಡೆಯುತ್ತಿದ್ದರು. ನಂಜನಗೂಡಿಗೆ ಆಗಮಿಸಿದ ಅತಿಥಿಗಳಿಗೆ ಈರಸಬಾಳೆ ಹಣ್ಣು ತಿನ್ನಿಸದಿದ್ದರೆ ಇಲ್ಲಿನವರ ಆತಿಥ್ಯವೇಪೂರ್ಣವಾಗತ್ತಿರಲಿಲ್ಲ. ಅಷ್ಟರ ಮಟ್ಟಿಗೆ ರಸಬಾಳೆ ಪ್ರಖ್ಯಾತಿ ಪಡೆದಿತ್ತು.

ಏಕೆ ಅಳಿವಿನಂಚಿಗೆ ಸೇರುತ್ತಿದೆ? ;  ಇಲ್ಲಿನ ಕಪ್ಪು ಜೇಡಿ ಮಣ್ಣು ಅಪ್ಪಟ ಬಂಗಾರದಂತೆ ಇತ್ತು.ಈ ಭಾಗದಲ್ಲಿ ರಸಬಾಳೆಯೇ ರೈತರ ಅಸ್ಮಿತೆಯಾಗಿತ್ತು.ಹಣ್ಣಿನ ರುಚಿ, ಸುವಾಸಣೆ ದೇಶ ವಿದೇಶದಲ್ಲೂ ಖ್ಯಾತಿಗಳಿಸಿತ್ತು. 70ರ ದಶಕದಲ್ಲಿ ನದಿಯಿಂದ ನಾಲೆ ಮೂಲಕ ನೀರು ಹರಿದ ಪರಿಣಾಮ ಇಲ್ಲಿನ ಮಣ್ಣಿನ ಸತ್ವ ನೀರಿನಲ್ಲಿ ಕೊಚ್ಚಿಹೋಯಿತು. ಕಾಲ ಕಳೆದಂತೆ ಮಣ್ಣಿನ ಫ‌ಲವತ್ತತೆ ಕ್ಷೀಣಿಸಿತು. ರಸಗೊಬ್ಬರ, ಕೀಟನಾಶಕ ಬಳಕೆ ಹೆಚ್ಚಾದಂತೆ ಬೆಳೆಗೆ ರೋಗಬಾಧೆ ಹೆಚ್ಚಾಯಿತು. ರಸಬಾಳೆ ಬೆಳೆದರೆ ಬಹುತೇಕ ಗಿಡಗಳಿಗೆ ರೋಗ ಬಾಧಿಸುತ್ತದೆ. ಗಿಡಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಹೀಗಾಗಿ ನಷ್ಟ ಅನುಭವಿಸುವಂತಾಗಿದೆ ಎನ್ನುತ್ತಾರೆ ಈ ಭಾಗದರೈತರು. ರಸಬಾಳೆ ಬದಲು ಏಲಕ್ಕಿ ಹಾಗೂ ಪಚ್ಚ ಬಾಳೆ ಮೊರೆ ಹೋಗಿದ್ದಾರೆ. ಸಹಸ್ರಾರು ಎಕರೆಯಲ್ಲಿ ಬೆಳೆಯಲಾಗುತ್ತಿದ್ದ ಪಾರಂಪರಿಕ ರಸಬಾಳೆ ಇದೀಗ ನಾಲ್ಕೈದು ಎಕರೆಗೆ ಸೀಮಿತವಾಗಿದೆ.

Advertisement

ಭೂಮಿಗೆ ಅಂಥ ಗುಣ ಏನಿದೆ? :  ದೇವರಸನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಜಮೀನುಗಳಲ್ಲಿ ಬೆಳೆಯುವ ರಸಬಾಳೆಗೆ ಮಾತ್ರವಿಶಿಷ್ಟವಾದ ರಚಿ ಸಿಗುತ್ತದೆ. ಇಲ್ಲಿನ ಭೂಮಿ ಕಪ್ಪು ಜೇಡಿಮಣ್ಣನಿಂದ(ಮೆಕ್ಕಲು ಮಣ್ಣು) ಕೂಡಿದೆ. ಉಷ್ಣವಲಯದ ಸಸ್ಯಒಣಹವೆಯಲ್ಲಿ ಅತ್ಯುತ್ತಮವಾಗಿ ಬೆಳೆಯುತ್ತದೆ. ರಸಬಾಳೆಗೆ ಬೇಕಾದಎಲ್ಲ ರೀತಿ ವಾತಾವರಣ ಇಲ್ಲಿದೆ. ಇಲ್ಲಿನ ಹೊನ್ನು, ಹವಗುಣವು ಈಪಾರಂಪರಿಕ ರಸಬಾಳೆಗೆ ಹೇಳಿ ಮಾಡಿಸಿದಂತೆ ಇದೆ. ನಂಜನಗೂಡುತಾಲೂಕು, ಆಸುಪಾಸು ಬಿಟ್ಟು ಬೇರೆ ಯಾವುದೇ ಭಾಗದಲ್ಲಿ ಈರಸಬಾಳೆಯನ್ನು ಬೆಳೆದರೆ ಅದರ ಮೂಲ ರುಚಿ, ಮೃದುತ್ವ, ಸುವಾಸನೆ ಸಿಗುವುದಿಲ್ಲ.

ಎಕರೆಗೆ 40 ಸಾವಿರ ರೂ. ಸಹಾಯಧನ :  ನಂಜನಗೂಡು ರಸ ಬಾಳೆ ಬೆಳೆಯುವ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಜನವರಿಯಿಂದ ಎಕರೆಗೆ 40 ಸಾವಿರ ರೂ.ಪ್ರೋತ್ಸಾಹ ಧನ ನೀಡಲಾಗುವುದು. ಬೆಳೆ ಬೆಳೆಯಲುರೈತರು ಮುಂದೆ ಬರಬೇಕಿದೆ. ಸದ್ಯ ತೋಟಗಾರಿಕೆಇಲಾಖೆಯು ಜಿಲ್ಲೆಯ 10 ರೈತರನ್ನು ಈ ಯೋಜನೆಗಾಗಿಆಯ್ಕೆ ಮಾಡಿಕೊಂಡಿದೆ. ರಸಬಾಳೆಯ ರೋಗ ರಹಿತವಾದಅಂಗಾಂಶ ತಳಿಯನ್ನು ಅಭಿವೃದ್ಧಿ ಪಡಿಸಿರುವ ಮೈಸೂರುಆರ್ಗಾನಿಕ್‌ನ ಮಾಲೀಕರಲ್ಲಿ ತಿಂಗಳಿಗೆ ಎರಡು ಸಾವಿರಸಸಿಗಳನ್ನು ತಂದು ತೋಟಗಾರಿಕಾ ಇಲಾಖೆ ನೇತೃತ್ವದಲ್ಲಿ ವಿತರಿಸಲಾಗುವುದು. ಈ ಯೋಜನೆ ಜನವರಿ 15ರಿಂದಅನುಷ್ಠಾನವಾಗಲಿದೆ. ರಸಬಾಳೆ ಬೆಳೆಯುವವರೇಕಡಿಮೆಯಾಗಿದ್ದರಿಂದ ಸದ್ಯ ಮಾರುಕಟ್ಟೆ ಕೊರತೆ ಇಲ್ಲ.ತೋಟಗಾರಿಕೆ ಇಲಾಖೆಯಿಂದ ಆಯ್ದ ಸ್ಥಳಗಳಲ್ಲಿ ರಸಬಾಳೆ ಮಾರಾಟ ಕೇಂದ್ರ ತೆರೆಯಲಾಗುವುದು ಎಂದು ಜಿಲ್ಲಾ ತೊಟಗಾರಿಕಾ ಅಧಿಕಾರಿ ರುದ್ರೇಶ್‌ ತಿಳಿಸಿದ್ದಾರೆ.

ಡಿಮ್ಯಾಂಡ್‌ ಇದೆ, ಆದರೆ ರಸಬಾಳೆ ಸಿಗ್ತಿಲ್ಲ :  ರಸಬಾಳೆಗೆ ಗ್ರಾಹಕರಿಂದ ಭಾರೀ ಬೇಡಿಕೆಯಿದ್ದು, ಆದರೆ,ರಸಬಾಳೆ ಸಿಗುತ್ತಿಲ್ಲ. ನಂಜನಗೂಡಿಗೆ ಶ್ರೀಕಂಠೇಶ್ವರನದೇವಾಲಯಕ್ಕೆ ಬರುವ ಭಕ್ತರು ಕೂಡ ತಮ್ಮ ಅಂಗಡಿಗೆ ಬಂದುರಸ ಬಾಳೆಹಣ್ಣನ್ನೇ ಕೊಡಿ ಎನ್ನುತ್ತಾರೆ. ಆದರೆ, ರಸ ಬಾಳೆಗೊನೆವಾರಕ್ಕೆ ಒಂದೆರಡು ಬಂದರೆ ಹೆಚ್ಚು. ಈ ಬಾಳೆ ಹಣ್ಣನ್ನು ತೂಕದಲೆಕ್ಕದಲ್ಲಿ ಕೊಡುವುದಿಲ್ಲ. ಬಿಡಿಯಾಗಿ ನೀಡಲಾಗುವುದು.ಒಂದು ಹಣ್ಣಿಗೆ 6. ರೂ., ದಪ್ಪವಿದ್ದರೆ 7 ರೂ.ನಂತೆ ಮಾರಾಟಮಾಡುತ್ತೇವೆ. ಎಷ್ಟೇ ಪ್ರಮಾಣದ ರಸ ಬಾಳೆ ಬೆಳೆದರೂಮಾರಾಟವಾಗುತ್ತೆ. ಆದರೆ, ಬೆಳೆಯುವ ರೈತ ಹಾಗೂ ಭೂಮಿಎರಡು ಕೂಡ ಕಡಿಮೆಯಾಗಿದೆ ಎಂದು ಮಾರಾಟಗಾರರಾದ ಚಲುವಪ್ಪ ಹಾಗೂ ಕೆಂಪಣ್ಣ ತಿಳಿಸಿದ್ದಾರೆ.

ರಸಬಾಳೆ ವೈಭವ ಮರಳಲು ಮಾಡಬೇಕಿರುವುದು ಏನು? :  ಈ ಭೂಮಿಯಲ್ಲಿ ಸಾವಯವ ಗೊಬ್ಬರ ಬಳಸಿ, ಹನಿ ನೀರಾವರಿ ಮೂಲಕ ರಸಬಾಳೆ ಬೆಳೆದರೆ ಯಾವುದೇ ರೋಗ ಬಾಧೆ ಇರುವುದಿಲ್ಲ. ಇಳುವರಿ ಹಾಗೂ ಗುಣಮಟ್ಟ ಕೂಡ ಚೆನ್ನಾಗಿರುತ್ತದೆ ಎನ್ನುತ್ತಾರೆ ಕೃಷಿ ತಜ್ಞರು. ಈ ಹಿಂದೆ ಎಕರೆಗೆ ಸುಮಾರು 10 ಗಾಡಿ ಕೊಟ್ಟಿಗೆ ಗೊಬ್ಬರ, ತಲಾ ಮೂರು ಗಾಡಿ ಬೇವಿನಸೊಪ್ಪು, ಹೊಂಗೆ ಸೊಪ್ಪನ್ನು ಚೆನ್ನಾಗಿ ಕತ್ತರಿಸಿ ಉಳಿಮೆ ಮಾಡಿ ಮಾಗಿ ಮಾಡಲಾಗುತ್ತಿತ್ತು. ಈಗಲೂ ಕೂಡ ಅದೇ ವಿಧಾನ ಅನುಸರಿಸಬೇಕಾಗಿದೆ. ಸಾವಯವ ಕೃಷಿ ಮಾಡಲು ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ. ಒಂದು ಸಸಿಗೆ 50 ರೂ.ಗೆ ತಂದು ಗೊಬ್ಬರ, ನೀರು, ಕೂಲಿ ಖರ್ಚು ಸೇರಿದರೆ ಎಕರೆಗೆ ಕನಿಷ್ಠ 50 ಸಾವಿರ ರೂ. ಬೇಕಾಗುತ್ತದೆ. ಹೀಗಾಗಿ ಸರ್ಕಾರ ಈಗ ನೀಡುತ್ತಿರುವಸಹಾಯಧನ ಎಕರೆಗೆ 12 ಸಾವಿರ ರೂ.ಗಳನ್ನು 75 ಸಾವಿರ ರೂ.ಗಳಿಗೆ ಏರಿಸಬೇಕು. ರಸಬಾಳೆಗೆ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕು ಎನ್ನತ್ತಾರೆ ದೇವರಸನಹಳ್ಳಿ ರೈತರಾದ ರಮೇಶ, ಪಾಷ, ಮುತ್ತುರಾಜು, ಸಿದ್ದೇಗೌಡರು, ಚಿಕ್ಕಸಿದ್ದೇಗೌಡರು, ಚಲುವಪ್ಪ, ರಾಮಣ್ಣ, ಸಣ್ಣಬೋರ, ರಾಮು ದೊಡ್ಡಸಿದ್ದೇಗೌಡ, ಚಿಕ್ಕಣ್ಣ, ರಾಜು ಮತ್ತಿತರರು.

ನಂಜನಗೂಡು ತಾಲೂಕಿನ ದೇವರಸನ ಹಳ್ಳಿ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಮಣ್ಣಿನಗುಣದ ವಿಶಿಷ್ಟತೆ ನಶಿಸುತ್ತಿರುವ ಕುರಿತುಸಂಶೋಧನೆ ಆಗಬೇಕು. ನಮ್ಮ ಸಂಶೋಧನಾಕೇಂದ್ರಗಳು ಇತ್ತ ಗಮನ ಹರಿಸಿ ಈ ರಸಬಾಳೆಯನ್ನು ಉಳಿಸಿ ಬೆಳೆಸಿ ಮಾರುಕಟ್ಟೆ ಒದಗಿಸಿದರೆ ಮಾತ್ರ ಇದರ ಉಳಿವು ಸಾಧ್ಯ. ಇಲ್ಲವಾದರೆ ಅಳಿವು ತಪ್ಪಿದ್ದಲ್ಲ.-ಗುರುಸ್ವಾಮಿ, ತಾಲೂಕು ತೋಟಗಾರಿಕೆ ಅಧಿಕಾರಿ

ಒಂದೆ ಬಾಳಿನ ಬಿಂಬ ನೂರು ಮೈ ತಳೆದಂತೆ ನೂರು ಬಗೆ ಆಕಾರ, ನೂರು ಚೆಲುವು ಗುಡ್ಡದೀ ಕಣಿವೆಯಲಿ ನಿಂತ ಮಿಂಚಿನ ಸರಸಿ- ಯಂತಿರುವ ಸಂಜೆಯಲಿ ರಸದ ನಲವು! -ಜಿ. ಎಸ್‌. ಶಿವರುದ್ರಪ್ಪ

 

-ಶ್ರೀಧರ್‌ ಆರ್‌.ಭಟ್‌

Advertisement

Udayavani is now on Telegram. Click here to join our channel and stay updated with the latest news.

Next