Advertisement

Karkala ಮನಸ್ಸಿದ್ದರೆ ನಂದಿಕೂರು-ಮೂಡಿಗೆರೆ ರೈಲು ಮಾರ್ಗ!

12:15 AM Nov 26, 2023 | Team Udayavani |

ಕಾರ್ಕಳ: ಕರಾವಳಿ ಭಾಗದಿಂದ ರಾಜಧಾನಿ ಸಹಿತ ಇತರ ಪ್ರಮುಖ ನಗರಗಳಿಗೆ ರೈಲು ಹೆಚ್ಚಳಗೊಳಿಸುವ ಬೇಡಿಕೆಗಳ ಜತೆಗೆ ಹೊಸ ರೈಲು ಮಾರ್ಗಗಳ ಹಳೆಯ ಪ್ರಸ್ತಾವನೆಗಳಿಗೆ ಮರುಜೀವ ನೀಡಿ ಕಾರ್ಯಗತಗೊಳಿಸಬೇಕೆಂಬ ಆಗ್ರಹ ರೈಲು ಸಂಪರ್ಕ ವಂಚಿತ ಮೂರು ತಾಲೂಕುಗಳ ನಾಗರಿಕರಿಂದ ವ್ಯಕ್ತವಾಗಿದೆ.

Advertisement

ನಂದಿಕೂರು-ಕಾರ್ಕಳ-ಉಜಿರೆ-ಚಾರ್ಮಾಡಿ- ಮೂಡಿಗೆರೆ ನಡುವಿನ 152.30 ಕಿ.ಮೀ. ಉದ್ದೇಶಿತ ರೈಲು ಮಾರ್ಗ ಆರ್ಥಿಕವಾಗಿ ಕಾರ್ಯ ಸಾಧುವಲ್ಲ ಎಂದು ರೈಲ್ವೇ ಬೋರ್ಡ್‌ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿದೆ.

ಈ ಪ್ರಸ್ತಾವನೆಯನ್ನು ರೈಲ್ವೇ ಮಂಡಳಿ ಕೈ ಬಿಟ್ಟಿದ್ದರೂ ಸರಕಾರದ ಮಟ್ಟದಲ್ಲಿ ಜೀವಂತವಿದೆ. ಹಾಗಾಗಿ ಈ ಭಾಗದ ಜನಪ್ರತಿನಿಧಿಗಳು ಮನಸ್ಸು ಮಾಡಿ ಕೇಂದ್ರ ಸರಕಾರಕ್ಕೆ ಮನದಟ್ಟು ಮಾಡಿ ಕೊಟ್ಟರೆ ಯೋಜನೆಗೆ ಜೀವ ಬಂದು ಕಾರ್ಯ ಗತಗೊಳ್ಳಬಹುದು ಎಂಬುದು ರೈಲ್ವೇ ಯಾತ್ರಿಕರ ಅಭಿಪ್ರಾಯ.

50:50 ಅನುಪಾತ
ಸುಮಾರು 12 ಸಾವಿರ ಕೋಟಿ ರೂ. ವೆಚ್ಚದ ಪ್ರಸ್ತಾವಿತ ರೈಲು ಮಾರ್ಗ ಯೋಜನೆ ಆರ್ಥಿಕ ಸಾಧುವಲ್ಲ ಎನ್ನುವ ನೆಪವೊಡ್ಡುವ ಬದಲು ಕೇಂದ್ರ ಹಾಗೂ ರಾಜ್ಯ ಸರಕಾರ 50:50 ಅನುಪಾತದಲ್ಲಿ ವೆಚ್ಚವನ್ನು ಭರಿಸಿದರೇ ತಾಲೂಕುಗಳ ದಶಕ ಗಳ ಬೇಡಿಕೆ ಈಡೇರಲಿದೆ. ಲೋಕಸಭಾ ಚುನಾವಣೆಯ ಸನಿಹದಲ್ಲಿ ರೈಲ್ವೇಗೆ ಸಂಬಂಧಿಸಿದ ಕೆಲವು ಕಾಮಗಾರಿಗಳು ವೇಗ ಪಡೆದಿವೆ. ದ.ಕ., ಉಡುಪಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಹಾದು ಹೋಗುವ ಈ ಹೊಸ ರೈಲು ಮಾರ್ಗದಿಂದ ಕರಾ ವಳಿಗೆ ಬಹಳ ಅನುಕೂಲವಾಗಲಿದೆ. ಜತೆಗೆ ಚಿಕ್ಕಮಗಳೂರು ಜಿಲ್ಲೆಯ ಕೆಲವು ತಾಲೂಕುಗಳಿಗೂ ಅನುಕೂಲವಾಗಲಿದೆ. ಈ ತಾಲೂಕು ಗಳು ಧಾರ್ಮಿಕ, ಪ್ರವಾಸಿ ಯಾತ್ರ ಸ್ಥಳಗಳಾಗಿದ್ದು, ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಪ್ರಸ್ತಾವಿತ ರೈಲು ಮಾರ್ಗದಿಂದ ಪ್ರಯೋಜನವಾಗಲಿದೆ ಎಂಬ ಅಭಿಪ್ರಾಯ ಹಲವರದ್ದು.

2010ರಲ್ಲಿ ಅಂದಿನ ರೈಲ್ವೇ ಮಂತ್ರಿ ಮಮತಾ ಬ್ಯಾನರ್ಜಿ ಸಮೀಕ್ಷೆಗೆ ಆದೇಶಿಸಿದ್ದರು. ಬಳಿಕ ವರದಿಯನ್ನು ನೈಋತ್ಯ ರೈಲ್ವೇ ವಿಭಾಗವು ಮಂಜೂರಾತಿಗಾಗಿ ಕೇಂದ್ರ ರೈಲ್ವೇ ಮಂಡಳಿಗೆ ಸಲ್ಲಿಸಿತ್ತು. ಮಂಡಳಿ ಹಣಕಾಸಿನ ಹೊರೆ ಕಾರಣಕ್ಕೆ ಕೈ ಬಿಟ್ಟು, ಕೇಂದ್ರ ಸರಕಾರದ ಮುಂದೆ ಹಣಕಾಸಿನ ಮಂಜೂರಾತಿಗೆ ಸಲ್ಲಿಸಲಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರ 50:50 ವೆಚ್ಚ ಹಂಚಿಕೆಯ ಆಧಾರದಲ್ಲಿ ಅನುಷ್ಠಾನಕ್ಕೆ ಮುಂದಾಗುವಂತೆ ಮೂರು ಜಿಲ್ಲೆಗಳ ಸಂಸದರು, ಜಿಲ್ಲೆಗಳ ಜನಪ್ರತಿನಿಧಿಗಳು ಮಂಡಳಿ ಹಾಗೂ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕಿದೆ.

Advertisement

ಎಲ್ಲೆಲ್ಲಿ ನಿಲ್ದಾಣ ಇರಲಿದೆ
ನಂದಿಕೂರು – ಚಾರ್ಮಾಡಿ ಮಾರ್ಗವು ಸೋಮನಾಡು ಸೇತುವೆ ಭಾಗದಲ್ಲಿ ಸುರಂಗದ ಮೂಲಕ ಸಾಗಿ ಕೊಟ್ಟಿಗೆಹಾರದಿಂದ ಮೂಡಿಗೆರೆಯಲ್ಲಿ ರೈಲು ಮಾರ್ಗಕ್ಕೆ ಜೋಡಣೆಯಾಗುತ್ತದೆ. ಅದು ಮುಂದಕ್ಕೆ ಬೆಂಗಳೂರಿಗೆ ಸಾಗಲಿದೆ. ನಂದಿಕೂರು ಜಂಕ್ಷನ್‌ ಆಗಿ ರೂಪುಗೊಳ್ಳುವುದು ಪ್ರಸ್ತಾವನೆಯಲ್ಲಿ ಸೇರಿಕೊಂಡಿತ್ತು. ಮಂಜರಪಲ್ಕೆ, ಕಾರ್ಕಳ, ಕೆಳಪುತ್ತಿಗೆ, ನಾರಾವಿ, ಆಳದಂಗಡಿ, ಉಜಿರೆ, ಚಾರ್ಮಾಡಿ ರೋಡ್‌, ಮಿತ್ತಬಾಗಿಲು, ಎಲ್ಯಾರಕಂಡ, ಮೂಡಿಗೆರೆ ಸೇರಿದಂತೆ 13 ಕಡೆ ನಿಲ್ದಾಣ ಇರಲಿದೆ.

ಘಾಟಿ ಸಕಲೇಶಪುರ ಮಾರ್ಗಕ್ಕೆ ಪರ್ಯಾಯ
ಈ ಯೋಜನೆ ಕಾರ್ಯಗತಗೊಂಡಲ್ಲಿ ಬೆಂಗಳೂರಿಗೆ ಕರಾವಳಿಯಿಂದ ಹತ್ತಿರದ ಮಾರ್ಗ ವಾಗ ಲಿದೆ. ಮಳೆಗಾಲದಲ್ಲಿ ಭೂಕುಸಿತ ತೊಂದರೆ ಅನುಭವಿಸುವ ಸುಬ್ರಹ್ಮಣ್ಯ – ಸಕಲೇಶಪುರ ಘಾಟಿ ಮಾರ್ಗಕ್ಕೆ ಪರ್ಯಾಯವಾಗಿ ಕರಾವಳಿ ಜಿಲ್ಲೆಗಳ ಒಳನಾಡು ಸಂಪರ್ಕಕ್ಕೆ ಹಾಗೂ ಗೇರುಬೀಜ ಒಳಗೊಂಡಂತೆ ಇತರ ಉದ್ಯಮಗಳಿಗೆ ಅನುಕೂಲವಾಗಲಿದೆ.

ಯೋಜನೆಯ ಗಾತ್ರ
-ವ್ಯಾಪ್ತಿ-152 ಕಿ.ಮೀ.
- ವೆಚ್ಚ – 12 ಸಾವಿರ ಕೋ.ರೂ.
- ನಿಲ್ದಾಣ -13
- ದೊಡ್ಡ ಸೇತುವೆ-11
- ಸುರಂಗ ಮಾರ್ಗ 20 ಕಡೆ

ಸರ್ವೇಯ ವಿಸ್ಕೃತ ವರದಿಯನ್ನು 2022ರಲ್ಲಿ ಕೇಂದ್ರ ಸಚಿವಾಲಯಕ್ಕೆ ರೈಲ್ವೇ ಬೋರ್ಡ್‌ ಸಲ್ಲಿಸಿದೆ. ಅರ್ಥಿಕವಾಗಿ ಈ ಮಾರ್ಗ ಕಾರ್ಯಸಾಧುವಲ್ಲ ಎಂದು ಹೇಳಲಾಗಿತ್ತು. ಪ್ರಸ್ತಾವನೆಗೆ ಕೇಂದ್ರ ಸರಕಾರ ಅಂತಿಮ ಒಪ್ಪಿಗೆ ನೀಡಬೇಕಿದೆ.
– ಅನೀಶ ಹೆಗ್ಡೆ , ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ನೈಋತ್ಯ ರೈಲ್ವೇ

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next