ಕೊಪ್ಪಳ: ತುಂಗಭದ್ರಾ ಹಿನ್ನೀರು ತಟದ ತಾಲೂಕಿನ ಹ್ಯಾಟಿ-ಮುಂಡರಗಿ ಗ್ರಾಮದ ಬಳಿಯ ನಂದಿಬಂಡಿ ಬಸವೇಶ್ವರ ಜಾತ್ರಾ ಮಹೋತ್ಸವ ಕೆಲವು ವರ್ಷಗಳಿಂದ ಪ್ರಸಿದ್ದಿ ಪಡೆಯುತ್ತಿದೆ. ಜಿಲ್ಲಾದ್ಯಂತ ಭಕ್ತ ಸಮೂಹ ಜಾತ್ರಾ ಮಹೋತ್ಸವಕ್ಕೆ ಆಗಮಿಸುತ್ತಿದ್ದು, ಈ ವರ್ಷದ ಶ್ರಾವಣ ಕೊನೆಯ ಸೋಮವಾರ ನೂತನ ರಥೋತ್ಸವ ಜರುಗಲಿದೆ.
ತಾಲೂಕಿನ ಹ್ಯಾಟಿ-ಮುಂಡರಗಿ ಬಳಿ ಇರುವ ನಂದಿಬಂಡಿ ಬಸವೇಶ್ವರ ದೇವಸ್ಥಾನ ಹಾಗೂ ಜಾತ್ರಾ ಮಹೋತ್ಸವ ವರ್ಷದಿಂದ ವರ್ಷಕ್ಕೆ ಪ್ರಖ್ಯಾತಿ ಪಡೆಯುತ್ತಿದೆ. ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತಿ ವರ್ಷ ಶ್ರಾವಣ ಮಾಸದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಮಕ್ಕಳು, ವೃದ್ಧರು ಮಹಿಳೆಯರು ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಿದ್ದಾರೆ. ತುಂಗಭದ್ರಾ ಹಿನ್ನೀರಿನ ತಟದಲ್ಲಿಯೇ ಈ ದೇವಸ್ಥಾನ ಇರುವುದರಿಂದ ಮತ್ತಷ್ಟು ಸೊಬಗು ಪಡೆದಿದೆ. ಅಮವಾಸ್ಯೆ, ಹುಣ್ಣಿಮೆ ಸಂದರ್ಭದಲ್ಲಿ ಭಕ್ತರು ಪಾದಯಾತ್ರೆ ಮೂಲಕವೇ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಹ್ಯಾಟಿ-ಮುಂಡರಗಿ ಗ್ರಾಮಸ್ಥರು ಮುತುವರ್ಜಿ ದೇವಸ್ಥಾನವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುತ್ತಿದ್ದಾರೆ.
ದೇವಸ್ಥಾನದ ವೈಶಿಷ್ಟ್ಯ: ನಂದಿಬಂಡಿ ಬಸವೇಶ್ವರ ದೇವಸ್ಥಾನದ ಇತಿಹಾಸ ವಿಶಿಷ್ಠವಾಗಿದೆ. ದೇವಸ್ಥಾನದಲ್ಲಿ ಬೃಹದಾಕಾರದ ಬಸವಣ್ಣ(ಎತ್ತು) ಇದೆ. ಈ ಎತ್ತು ಮೂಲತಃ ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಬಂಡಿ ಗ್ರಾಮದಲ್ಲಿ ಗೂಳಿಯಾಗಿತ್ತು, ನಿತ್ಯವೂ ಘಟ್ಟಿರಡ್ಡೆಪ್ಪ ಎನ್ನುವ ರೈತನ ಜಮೀನಿನಲ್ಲಿ ಮೇಯತ್ತಿತ್ತಂತೆ. ಇದರ ಕಾಟಕ್ಕೆ ಬೇಸತ್ತ ರೈತರು ಅದನ್ನು ದೂರ ಓಡಿಸಲು ಮುಂದಾಗಿದ್ದನಂತೆ. ಈ ಗೂಳಿ ಓಡುತ್ತಾ ಓಡುತ್ತಾ ನದಿಯ ಹಳೇಯ ಹ್ಯಾಟಿ-ಮುಂಡರಗಿ ಗ್ರಾಮದ ಗುಡ್ಡಕ್ಕೆ ಬಂದು ನಿಂತಿದೆ. ಅಲ್ಲಿಯವರೆಗೂ ಬಂದ ರೈತನು ಗೂಳಿಗೆ ಹೊಡೆಯಲು ಮುಂದಾದಾಗ ಅದು ಕಲ್ಲಿನ ಮೂರ್ತಿಯಾಗಿದೆ ಎನ್ನುವ ಐತಿಹ್ಯವಿದೆ. ಈಗಲೂ ನಂದಿ ಬಸವೇಶ್ವರ ಗುಡ್ಡದಲ್ಲಿ ನೀರು ಕುಡಿಯುವ ಮಡುವು, ಬಸವಣ್ಣನ ಹೆಜ್ಜೆಗುರುತು, ರೈತನ ಹೆಜ್ಜೆಗಳು ಇರುವುದನ್ನು ನೋಡಬಹುದಾಗಿದೆ. ಗುಡ್ಡದಲ್ಲಿದ್ದ ಮೂರ್ತಿಯನ್ನು ಕೆಲವು ವರ್ಷಗಳ ಹಿಂದೆ ಸುತ್ತಲಿನ ಗ್ರಾಮಸ್ಥರೆಲ್ಲ ಸೇರಿ ಬಯಲು ಪ್ರದೇಶದಲ್ಲಿ ಪ್ರತಿಷ್ಠಾಪಿಸಿ ದೇವಸ್ಥಾನ ನಿರ್ಮಿಸಿದ್ದಾರೆ. ದೇವಸ್ಥಾನಕ್ಕೆ ಪ್ರತಿ ಸೋಮವಾರ ಅಮವಾಸ್ಯೆ, ಹುಣ್ಣಿಮೆಯಂದು ಸಾವಿರಾರು ಭಕ್ತರು ಆಗಮಿಸುತ್ತಾರೆ.
23 ಲಕ್ಷ ರೂ. ವೆಚ್ಚದ ಮಹಾರಥ: ಹಿಂದಿನಿಂದಲೂ ಶ್ರಾವಣ ಮಾಸದಲ್ಲಿ ಉಚ್ಛಾಯ ಎಳೆದು ಭಕ್ತಿಯಿಂದ ಪೂಜೆ ಸಲ್ಲಿಸಲಾಗುತ್ತಿತ್ತು. ಆದರೆ ಸುತ್ತಲಿನ ಗ್ರಾಮಸ್ಥರೆಲ್ಲರೂ ಸೇರಿ 23 ಲಕ್ಷ ರೂ. ವೆಚ್ಚದಲ್ಲಿ ತೇರು ನಿರ್ಮಿಸಿದ್ದಾರೆ. ಪ್ರಸಕ್ತ ವರ್ಷ ರಥೋತ್ಸವ ನಡೆಯಲಿದೆ.
ನಂದಿಬಂಡಿ ಬಸವೇಶ್ವರ ದೇವಸ್ಥಾನ ಹಾಗೂ ಜಾತ್ರಾ ಮಹೋತ್ಸವವು ಸುತ್ತಲಿನ ಮುಂಡರಗಿ, ಹ್ಯಾಟಿ, ಮೆಳ್ಳಿಕೇರಿ ಹಾಗೂ ಲಾಚನಕೇರಿ ಗ್ರಾಮಸ್ಥರ ನೇತೃತ್ವದಲ್ಲಿ ನಡೆಯುತ್ತಿದೆ. ಇವರೊಟ್ಟಿಗೆ ಹಲವು ಗ್ರಾಮಗಳ ಭಕ್ತ ಸಮೂಹವೂ ಜಾತ್ರಾ ಮಹೋತ್ಸವಕ್ಕೆ ಕೈ ಜೋಡಿಸುತ್ತದೆ. ಒಟ್ಟಿನಲ್ಲಿ ತುಂಗಭದ್ರಾ ಹಿನ್ನೀರಿನ ತಟದಲ್ಲಿ ಇರುವ ಈ ದೇವಸ್ಥಾನದ ಜಾತ್ರಾ ಮಹೋತ್ಸವದ ಸೊಬಗು ನೋಡಲು ಎರಡು ಕಣ್ಣುಗಳೇ ಸಾಲದು. ಜಾತ್ರೆಗೆ ಬರುವ ಭಕ್ತ ಸಮೂಹಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಶ್ರಾವಣ ಮಾಸದ ಕೊನೆಯ ಸೋಮವಾರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಲಿದೆ.
•ದತ್ತು ಕಮ್ಮಾರ