ಬೆಂಗಳೂರು: ಚಿತ್ರದುರ್ಗದ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠವು ಬಸವಕೇಂದ್ರಗಳು, ಬಸವ ಸಂಘಟನೆಗಳು, ನಾನಾ ಧಾರ್ಮಿಕ ಕೇಂದ್ರ ಹಾಗೂ ಸರ್ವ ಜನಾಂಗದ ಮಠಾಧೀಶರ ಸಹಯೋಗದಲ್ಲಿ ಶಿವಯೋಗ ಸಂಭ್ರಮದಡಿ ನಗರದಲ್ಲಿ ಭಾನುವಾರ ಅಸಂಖ್ಯ ಪ್ರಮಥರ ಗಣಮೇಳ ಹಾಗೂ ಸರ್ವಶರಣರ ಸಮ್ಮೇಳನ ಆಯೋಜಿಸಿದೆ.
ತುಮಕೂರು ರಸ್ತೆಯ “ನೈಸ್’ ರಸ್ತೆ ಸಮೀಪದ ನಂದಿ ಗ್ರೌಂಡ್ಸ್ (ಬಿಐಇಸಿ)ನಲ್ಲಿ ಭಾನುವಾರ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ಗಣಮೇಳ ನಡೆಯಲಿದೆ. ಬೆಳಗ್ಗೆ 7.45ಕ್ಕೆ ಮೇಯರ್ ಎಂ.ಗೌತಮ್ ಕುಮಾರ್ ಅವರು ಧ್ವಜಾರೋಹಣ ನೆರವೇರಿಸುವರು. ಜತೆಗೆ ಶಿವ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 10.30ಕ್ಕೆ “ಜಾಗತಿಕ ಶಾಂತಿ ಮತ್ತು ಪ್ರಗತಿ’ ಕುರಿತು ಸಮ್ಮೇಳನ ನಡೆಯಲಿದೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಗದಗಿನ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ,
ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ ಗುರೂಜಿ, ಮಂತ್ರಾಲಯ ರಾಘವೇಂದ್ರಸ್ವಾಮಿ ಮಠದ ಸುಬುಧೇಂದ್ರ ತೀರ್ಥರು, ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಕೂಡಲ ಸಂಗಮದ ಬಸವಧರ್ಮ ಮಹಾಜಗದ್ಗುರು ಪೀಠದ ಮಾತೆ ಗಂಗಾದೇವಿ, ಧಾರವಾಡದ ಮುರುಘಾ ಮಠದ ಮಲ್ಲಿಕಾ ರ್ಜುನ ಸ್ವಾಮೀಜಿ, ಭಗೀರಥ ಪೀಠದ ಪುರುಷೋತ್ತ ಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಡಿ.ವಿ.ಸದಾನಂದಗೌಡ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಸಚಿವರಾದ ಬಸವರಾಜ ಬೊಮ್ಮಾಯಿ, ಬಿ.ಶ್ರೀರಾಮುಲು, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇತರರು ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ವಾಲ್ಮೀಕಿ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾ ಮೇಶ್ವರ ಸ್ವಾಮೀಜಿ, ಶ್ರೀಕೃಷ್ಣ ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಯೋಗಿ ವೇಮನ ಮಹಾಮಠದ ವೇಮಾನಂದ ಸ್ವಾಮೀಜಿ ಸೇರಿದಂತೆ ಇತರೆ ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಎಸ್.ಟಿ.ಸೋಮಶೇಖರ್, ಸಂಸದರಾದ ಶೋಭಾ ಕರಂದ್ಲಾಜೆ, ಎ.ನಾರಾಯಣ ಸ್ವಾಮಿ, ಅಖೀಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಎನ್. ತಿಪ್ಪಣ್ಣ ಇತರರು ಉಪಸ್ಥಿತರಿರಲಿದ್ದಾರೆ.