Advertisement

ಶಾಲಾ ಮಕ್ಕಳ ಪಾಲಿಗೆ ಇನ್ನೂ ಆಗದ “ನಂದನವನ’

11:57 PM Jan 23, 2020 | Sriram |

ಉಪ್ಪುಂದ: ಹೆಸರಿಗೆ ಇದು ನಂದನವನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ. ಆದರೆ ಶಾಲಾ ಮಕ್ಕಳ ಪಾಲಿಗೆ ನಂದನವನ ಆಗಿಲ್ಲ. ಕಾರಣ 6 ತಿಂಗಳ ಹಿಂದೆ ಭಾರೀ ಮಳೆಗೆ ಶಾಲೆಯ ಕೊಠಡಿಗಳು ಧರಾಶಾಯಿಯಾಗಿದ್ದರೂ ಆಡಳಿತ ಮರುನಿರ್ಮಾಣಕ್ಕೆ ಮುಂದಾಗಿಲ್ಲ!

Advertisement

ಕುಸಿದ ಕಟ್ಟಡ
ಕೆರ್ಗಾಲು ಗ್ರಾ.ಪಂ. ವ್ಯಾಪ್ತಿಯ ಈ ಶಾಲೆ 1914ರಲ್ಲಿ ಸ್ಥಾಪನೆಯಾಗಿದ್ದು ಶತಮಾನ ಪೂರೈಸಿದೆ. ಇಲ್ಲಿ ಎಲ್‌ಕೆಜಿಯಿಂದ 5ನೇ ತರಗತಿಯ ವರೆಗೆ ಶಿಕ್ಷಣ ನೀಡಲಾಗುತ್ತಿದೆ. 25 ವಿದ್ಯಾರ್ಥಿಗಳೂ ಇದ್ದಾರೆ. ಕಳೆದ ಆ.10ರ ಮಳೆಗೆ ಶಾಲೆಯ ಮೂರು ಕೊಠಡಿ ಕುಸಿದಿದ್ದು ಸಮಸ್ಯೆಯಾಗಿತ್ತು. ಅಂದು ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಭರವಸೆ ದೊರೆತಿದ್ದರೂ ಈಡೇರಿಲ್ಲ.

ಒಂದೇ ಕೊಠಡಿ!
ಇದೀಗ ಒಂದೇ ಕೊಠಡಿ ಮಾತ್ರ ಇದು ಎಲ್ಲ ವಿದ್ಯಾರ್ಥಿಗಳು ಅದರಲ್ಲಿಯೇ ಕುಳಿತು ಕೊಳ್ಳಬೇಕು.ಅಲ್ಲದೇ ಶಿಕ್ಷಕರ ಕೊಠಡಿ, ಶಾಲಾ ದಾಖಲಾತಿ ಎಲ್ಲದಕ್ಕೂ ಇದೊಂದೇ ಕೊಠಡಿ ಇದೆ.

ಅಡುಗೆ ಕೋಣೆಯಲ್ಲೂ ಪಾಠ
4ಮತ್ತು 5ನೇ ತರಗತಿಯ ವಿದ್ಯಾರ್ಥಿಗಳಿಗೆ ಎಲ್ಲರೊಂದಿಗೆ ಪಾಠ ಹೇಳಲು ಸಾಧ್ಯವಾಗದ್ದರಿಂದ ಅಡುಗೆಕೋಣೆಯಲ್ಲಿ ಪಾಠ ಮಾಡಲಾಗುತ್ತಿದೆ. ಇದೂ ಮಳೆಗಾಲದಲ್ಲಿ ಸೋರುತ್ತದೆ. ಬದಿಯಲ್ಲಿ ಅಡುಗೆ ಕೂಡ ಮಾಡಲಾಗುತ್ತದೆ.

ಭರವಸೆ ಮಾತ್ರ
ಇಲ್ಲಿ ಕನಿಷ್ಠ ಮೂಲಸೌಕರ್ಯ ವಿಲ್ಲದೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ನಿತ್ಯ ಸಮಸ್ಯೆಯಾಗುತ್ತಿದೆ. ಶಾಲಾ ಅಭಿವೃದ್ಧಿಗೆ ಸಹಕರಿಸುವಂತೆ ಶಿಕ್ಷಣ ಸಚಿವರಿಗೆ, ಶಿಕ್ಷಣ ಇಲಾಖೆಗೆ ಇ-ಮೇಲ್‌ ಮೂಲಕ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರಕಿಲ್ಲ. ಜನಪ್ರತಿನಿಧಿಗಳಿಂದ ಭರವಸೆ ಮಾತ್ರ ಸಿಕ್ಕಿದ್ದು, ಕೆಲಸ ಯಾವಾಗ ಆಗುತ್ತದೆ ಎಂದು ಹೆತ್ತವರು ಪ್ರಶ್ನಿಸುತ್ತಿದ್ದಾರೆ.

Advertisement

ತುರ್ತು ಅಗತ್ಯ
ಇನ್ನು ಕೆಲವೇ ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಹೆತ್ತವರು ತಮ್ಮ ಮಕ್ಕಳ ಭವಿಷ್ಯದ ಕುರಿತು ಚಿಂತಿಸುತ್ತಿದ್ದಾರೆ. ಕನಿಷ್ಠ 2 ತರಗತಿ ಕೋಣೆ, 1 ಆಫೀಸ್‌ ರೂಮ್‌, 1 ಶೌಚಾಲಯ ಹಾಗೂ ಅಗತ್ಯ ಪೀಠೊಪಕರಣಗಳು ಶಾಲೆಗೆ ತುರ್ತು ಅಗತ್ಯವಿದೆ.

ನಮ್ಮ ನೋವು ಅರ್ಥ ಮಾಡಿಕೊಳ್ಳಿ
ಶಿಕ್ಷಣ ಸಚಿವರಿಗೆ, ಸಂಸದರಿಗೆ ಮತ್ತು ಸಂಬಂಧಪಟ್ಟ ಇಲಾಖೆ ಶಾಲೆಯ ಸಮಸ್ಯೆಗಳ ಬಗ್ಗೆ ಮೇಲ್‌ ಮೂಲಕ ತಿಳಿಸಲಾಗಿದೆ, ಆದರೆ ಸ್ಪಂದನೆ ಇಲ್ಲ. ಮಳೆಗಾಲ ಹತ್ತಿರವಾಗುತ್ತಿದೆ. ಇಲ್ಲಿ ಕಲಿಯುವ ಮಕ್ಕಳ ಹೆತ್ತವರು ಆರ್ಥಿಕವಾಗಿ ಹಿಂದುಳಿದವರು ನಮ್ಮ ನೋವನ್ನು ಶಿಕ್ಷಣ ಇಲಾಖೆಯವರು ಅರ್ಥಮಾಡಿಕೊಳ್ಳಲಿ.
– ಶಾರದಾ,ಎಸ್‌ಡಿಎಂಸಿ ಅಧ್ಯಕ್ಷೆ

ಬೇರೆ ಕೋಣೆ ಇಲ್ಲ
ನಾವು ಬಡವರು ಖಾಸಗಿ ಶಾಲೆಗೆ ಕಳಿಸುವಷ್ಟು ಸಾಮರ್ಥ್ಯ ಇಲ್ಲ. ಸುತ್ತಲೂ ಹೊಳೆ, ತೋಡುಗಳಿಂದ ಸುತ್ತುವರಿದ ಪ್ರದೇಶವಾಗಿದ್ದರಿಂದ ಬೇರೆ ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ. ಅಂದು ಎಲ್ಲ ಅಧಿಕಾರಿಗಳು ಜನಪ್ರತಿನಿಧಿಗಳು ಬಂದು ಹೋದರೂ, ಯಾರೂ ಶಾಲೆ ಪುನರ್‌ನಿರ್ಮಾಣ ಬಗ್ಗೆ ಚಿಂತಿಸಿಲ್ಲ.
-ಮಲ್ಲಿಕಾ,ಹೆತ್ತವರು

ಅನುದಾನ
ಕೊಠಡಿ ನಿರ್ಮಾಣಕ್ಕೆ 10 ಲಕ್ಷ ರೂ.ಅನುದಾನ ನೀಡಲಾಗಿದೆ. ಸದ್ಯದಲ್ಲೇ ಹಣ ಬಿಡುಗಡೆಯಾಗಲಿದೆ. ಹಾಗೇ ಜಿಲ್ಲಾಧಿಕಾರಿ ಅವರ ಬಳಿ ಮಾತನಾಡಿದ್ದು ಪ್ರಕೃತಿಕ ವಿಕೋಪದಡಿ ಅನುದಾನ ನೀಡಲು ತಿಳಿಸಿದ್ದೇನೆ. ಇದರಿಂದ ಮತ್ತೂಂದು ಅನುದಾನ ಸಿಗಲಿದೆ. ಶಾಲೆಯ ಎಲ್ಲ ಕೆಲಸಗಳನ್ನು ಮಾಡಿಕೊಡುತ್ತೇನೆ.
-ಬಿ.ಎಂ.ಸುಕುಮಾರ್‌ ಶೆಟ್ಟಿ,ಶಾಸಕರು

-ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next