ಕೆಲವು ಚಿತ್ರಗಳು ತನ್ನ ಕಥಾಹಂದರದ ಮೂಲಕ ಮೊದಲು ಸುದ್ದಿಯಾದರೆ, ಇನ್ನು ಕೆಲವು ಚಿತ್ರಗಳು ತನ್ನ ಟೈಟಲ್ ಮೂಲಕವೇ ಒಂದಷ್ಟು ಸುದ್ದಿಯಾಗಿಬಿಡುತ್ತವೆ. ಇಲ್ಲೊಂದು ಅಂಥದ್ದೇ ಹೊಸಬರ ಚಿತ್ರ ತನ್ನ ಕಥಾಹಂದರ ಮತ್ತು ಟೈಟಲ್ ಎರಡರ ಮೂಲಕವೂ ನಿಧಾನವಾಗಿ ಸುದ್ದಿಯಾಗುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರ “ನಂದನವನದೊಳ್’.
ಹಳೆಗನ್ನಡ ಪದವನ್ನೇ ತನ್ನ ಶೀರ್ಷಿಕೆಯನ್ನಾಗಿ ಮಾಡಿಕೊಂಡ “ನಂದನವನದೊಳ್’ ಚಿತ್ರ ಸದ್ಯ ತನ್ನ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸದ್ದು, ಶೀಘ್ರದಲ್ಲಿಯೇ ತೆರೆಗೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ “ಯು’ ಸರ್ಟಿಫಿಕೇಟ್ ಕೊಟ್ಟಿದೆ.
ಇನ್ನು ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿರುವ “ನಂದನವನದೊಳ್’ ಚಿತ್ರಕ್ಕೆ ನಿರ್ದೇಶಕ ಸಂದೀಪ್ ಶೆಟ್ಟಿ ವಿಟ್ಲ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಶರಣ್ ಪೂಣತ್ಛ ಅವರೇಮಾದಂಡ ಮತ್ತು ಉಮೇಶ್ ಹೆಬ್ರಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಸಂದೀಪ್ ಶೆಟ್ಟಿ ವಿಟ್ಲ, ಇದೊಂದು ಕೊಡಗಿನಲ್ಲಿ ನಡೆಯುವಂಥ ಕಥೆ. ಹಾಗಾಗಿ ಕೊಡಗಿನ ಪರಿಸರವನ್ನು ಹಿನ್ನೆಲೆಯಾಗಿಟ್ಟುಕೊಂಡು ಈ ಚಿತ್ರವನ್ನು ಚಿತ್ರೀಕರಿಸಿದ್ದೇವೆ. ಕೊಡಗಿನ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಕೊಡಗಿನ ಸೌಂದರ್ಯ ಮತ್ತು ಸಂಸ್ಕೃತಿ ಎರಡೂ ಸಿನಿಮಾದಲ್ಲಿ ಇದೆ ಎನ್ನುತ್ತಾರೆ.
ನಂದನವನದೊಳ್ ಚಿತ್ರದಲ್ಲಿ ನವನಟ ಭರತ್ ರೈ, ವಿಠಲ ನಾಣಯ್ಯ, ಸಂತೋಷ್ ಶೆಟ್ಟಿ, ಪ್ರಭಾ ನಾಣಯ್ಯ, ಆನಂದ ಯಾದವಾಡ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಶಿವಸತ್ಯ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ದೇವು ಛಾಯಾಗ್ರಹಣ, ಕಾರ್ತಿಕ್ ಕೆ.ಎಂ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ.