Advertisement

Nandalike Siri Jatre; ಕ್ರಿಶ್ಚಿಯನ್‌ ಯುವಕನಿಂದ ದೇವರ ಸೇವೆಯ ನಂದಿ ಹಿಡಿಯುವ ಕಾಯಕ

03:20 PM Apr 06, 2023 | Team Udayavani |

ಕಾರ್ಕಳ: ಎಲ್ಲೆಡೆ ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ಜಾತಿ-ಧರ್ಮದ ಎಲ್ಲೆಗಳನ್ನು ಮೀರಿ ದೇವರನ್ನು ಕಾಣುತ್ತಿದ್ದಾರೆ ಎನ್ನುವುದಕ್ಕೆ ನಮ್ಮ ಹಲವು ದೇವಸ್ಥಾನಗಳ ಜಾತ್ರೆಗಳು  ಸಾಕ್ಷಿ ನುಡಿಯುತ್ತವೆ. ಕಾರ್ಕಳ ತಾಲೂಕಿನ ಕಾಂತಾವರ ಸಿರಿ ಜಾತ್ರೆಯಲ್ಲಿ ಕ್ರೈಸ್ತ ಸಮುದಾಯದ ಯುವಕ ವಿಕ್ಟರ್‌ ನೊರೋನ್ಹ ನಂದಿ ಹಿಡಿಯುವ ದೇವರ ಸೇವೆಗೆ ಭರ್ತಿ ಹದಿನೈದು ವರ್ಷ ಸಂದಿದೆ. ಈ ಮೂಲಕ ನಂದಳಿಕೆಯಿಂದ ನಾಡಿಗೆ ನಿರಂತರ ಧಾರ್ಮಿಕ ಸಾಮರಸ್ಯದ ಸಂದೇಶ ನೀಡುತ್ತಿದ್ದಾರೆ.

Advertisement

ನಂದಳಿಕೆ ಸಿರಿ ಜಾತ್ರೆ ಎಂದರೆ ಅಲ್ಲೊಂದು ವಿಶೇಷತೆ, ವಿನೂತನ ಯೋಚನೆ ಇದ್ದೆ ಇದೆ. ವಿಶೇಷ ಪ್ರಚಾರ ಫ‌ಲಕ ಹಾಗೂ ಅಚ್ಚುಕಟ್ಟಾದ ವ್ಯವಸ್ಥೆಯಿಂದ ನಂದಳಿಕೆ ಸಿರಿಜಾತ್ರೆ ನಾಡಿನ ಉದ್ದಗಲಕ್ಕೂ ಪ್ರಸಿದ್ಧಿ ಪಡೆದಿದ್ದರೆ, ಸರ್ವಧರ್ಮೀಯರೂ ಇಲ್ಲಿನ ದೇವರ ಸೇವೆಯಲ್ಲಿ ತೊಡಗಿಸಿಕೊಂಡಿರುವು ಮತ್ತೂಂದು ವಿಶೇಷತೆ.

ನಂದಳಿಕೆಯ ಜಾತ್ರೆ ಹಾಗೂ ದೇವರ ಬಲಿ ಪೂಜೆ ಸಂದರ್ಭ ದೇವರ ನಂದಿ ಹಿಡಿಯುವುದು ಇದೇ ನಂದಳಿಕೆ ಗ್ರಾಮದ ಕಂಪೊಟ್ಟು ಎಂಬಲ್ಲಿಯ ಕ್ರೈಸ್ತ
ಯುವಕ. 23ರ ವಯಸ್ಸು ಇದ್ದಾಗ ನಂದಿ ಹಿಡಿಯುವ ಸೇವೆ ಆರಂಭಿಸಿ ಇಂದಿನ ವರೆಗೆ ಸುಮಾರು 15 ವರ್ಷಗಳ ಕಾಲ ಈ ಸೇವೆಯನ್ನು ನಿಷ್ಠೆಯಿಂದ ಮಾಡುತ್ತ
ಬಂದಿದ್ದಾರೆ.

ನಂದಳಿಕೆ ಶ್ರೀಕಾಂತ್‌ ಭಟ್‌ ಅವರ ನಂದಿಯನ್ನು ತಂದು ತಾವೇ ಸ್ವತಃ ಸಾಕುತ್ತಿದ್ದು, ಇನ್ನೊಂದು ಕರುವಿನ ಜತೆಗೆ ಚಂದ್ರಶೇಖರ ರಾವ್‌ ಎಂಬವರಿಂದ ಪಡೆದ ನಂದಿಯನ್ನು ತಂದು ಸಾಕುತ್ತಿದ್ದಾರೆ. ಉತ್ಸವಗಳಿಗೆ ಈ ಮೂರರ ಪೈಕಿ ಒಂದೊಂದನ್ನು ಕರೆದೊಯ್ದು ದೇವರ ಸೇವೆ ನೀಡುವುದು ನೊರೋನ್ಹರ ವಿಶೇಷತೆ. ಕಂಬಳ ಪ್ರಿಯರೂ ಆಗಿರುವ ಇವರ ಮನೆಯಲ್ಲಿ 7 ಕೋಣ, 3 ನಂದಿಗಳಿವೆ. ಸಿರಿ ಜಾತ್ರೆಯಲ್ಲಿ ವಿಕ್ಟರ್‌ ನೊರೋನ್ಹ ದೇವಾಲಯದ ಶುಚಿತ್ವ, ಇನ್ನಿತರ ಕರ
ಸೇವೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ತಳಿರು ತೋರಣ ಕಟ್ಟುವ ಕೆಲಸದಲ್ಲೂ ಅವರು ಭಾಗಿಯಾಗುತ್ತಾರೆ.

ಬಲಿ, ಅಂಬೋಡಿ ಬಲಿ, ಹೀಗೆ ದೇವರ ಬಲಿ ಸೇವೆಯಲ್ಲಿ ಬಲಿ ಮೂರ್ತಿಯ ಎದುರು ನಂದಿ ಹಿಡಿಯುವ ಕಾಯಕ ಮಾಡುತ್ತಿದ್ದಾರೆ. ಧರ್ಮ ಬೇರೆಯಾದರೂ ದೇವರೊಬ್ಬನೇ ಎನ್ನುವಂತೆ ನಂದಳಿಕೆ ದೇವರ ಸೇವೆ ಮಾಡುವುದು ತುಂಬ ಖುಷಿ ತರುತ್ತದೆ ಎನ್ನುತ್ತಾರೆ ವಿಕ್ಟರ್‌ ನೊರೋನ್ಹ. ಸಿರಿ ಜಾತ್ರೆ ವೇಳೆಯಷ್ಟೆ ಅಲ್ಲದೆ ಪಲಿಮಾರುವಿಗೂ ಈ ಹಿಂದೆ ನಂದಿ ಕರೆದೊಯ್ದು ಸೇವೆ ನೀಡಿದ್ದಾರೆ. ಬೋಳ ದೇವಸ್ಥಾನದಿಂದಲೂ ಆಹ್ವಾನ ಬಂದಿದ್ದು ಮುಂದಿನ ಸಲ ಅಲ್ಲಿಗೂ ಹೋಗುವೆ ಎನ್ನುತ್ತಾರವರು.

Advertisement

ಸರ್ವಧರ್ಮ ಸಮನ್ವಯ ಕೇಂದ್ರ ನಂದಿ ಹಿಡಿಯುವ ಕಾಯಕದಲ್ಲಿ ವಿಕ್ಟರ್‌ ನೊರೋನ್ಹ ತೊಡಗಿಕೊಂಡರೆ, ದೇವಾಲಯದ ಇತರ ಕಾರ್ಯದಲ್ಲೂ ಅನೇಕ ಮಂದಿ ಕ್ರೈಸ್ತ ಸಮುದಾಯದ ಮಂದಿ ಸೇವೆ ನೀಡುತ್ತಾರೆ. ಮುಸ್ಲಿಂ ವ್ಯಾಪಾರಿಗಳು ಕೂಡ ಜಾತ್ರೆ ದಿನಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ಮೂಲಕ ನಂದಳಿಕೆ ಸರ್ವಧರ್ಮ ಸಮನ್ವಯತೆಯ ಕೇಂದ್ರವಾಗಿ ಗುರುತಿಸಿಕೊಂಡು ಮಾದರಿಯಾಗಿದೆ.

ದೇವರೆಲ್ಲ ಒಂದೇ ಧರ್ಮ- ಜಾತಿ
ಎನ್ನುವುದು ನನ್ನಲ್ಲಿ ಸಹಿತ ಇಲ್ಲಿ ಯಾರಲ್ಲೂ ಇಲ್ಲ. ಎಲ್ಲರೂ ಯಾವುದೇ ಬೇಧಭಾವವಿಲ್ಲದೆ ದೇವರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ. ನನಗೆ ಎಲ್ಲ ದೇವರು ಒಂದೇ. ದೇವರ ಸೇವೆ ಮಾಡುವುದು ಎಂದರೆ ನನಗೆ ಏನೋ ಒಂದು ಸಂತಸ. ಸಂತೃಪ್ತಿ. ಅದನ್ನು ಇಲ್ಲಿ ಮಾಡುತ್ತೇನೆ. ಮನೆಯವರು, ಸಮುದಾಯದವರು ಹೀಗೆ ಯಾರ ಆಕ್ಷೇಪವೂ ಇಲ್ಲ. ಇದುವರೆಗೆ ನನ್ನನ್ನು ಯಾವ ಸಮುದಾಯದವರು ಪ್ರಶ್ನೆ ಮಾಡಿಲ್ಲ. ಎಲ್ಲರೂ ಸಹಕಾರ ನೀಡಿ ಸೇವೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ.
-ವಿಕ್ಟರ್‌ ನೊರೋನ್ಹ

*ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next