ಸ್ವಂತ ಜಮೀನು ಇದ್ದರೂ ನೀವು ಸರಕಾರಿ ನೌಕರಿಗಾಗಿ ಅಲೆಯುತ್ತಿದ್ದೀರಾ? ನೌಕರಿಯಿಂದಲೇ ಆರ್ಥಿಕವಾಗಿ ಸದೃಢರಾಗಬೇಕೆಂಬ ಕೊರಗು ನಿಮ್ಮನ್ನು ಸದಾ ಕಾಡುತ್ತಿದೆಯೇ? ಬದುಕಿನಲ್ಲಿ ಆರ್ಥಿಕ ಸಬಲತೆ ಸಾಧಿಸಬೇಕೆಂದರೆ ಸರ್ಕಾರಿ ನೌಕರಿಯಾ ಬೇಕೆಂದಿಲ್ಲ. ತೋಟಗಾರಿಕೆ ಮಾಡುವುದರಿಂದಲೂ ಅದು ಸಾಧ್ಯವಿದೆ.
ತೋಟಗಾರಿಕೆಯಿಂದ ಲಕ್ಷ ಲಕ್ಷ ಸಂಪಾದಿಸಲು ಸಾಧ್ಯವಿದೆ ಎಂಬುದಕ್ಕೆ ಸಾಕ್ಷಿಯಾಗಿ ಇಲ್ಲೊಬ್ಬ ಯುವಕನ ಯಶೋಗಾಥೆಯಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಸಿದ್ದಾಪುರ(ಬಿ) ಗ್ರಾಮದ ನಂದಕುಮಾರ.ಎಸ್.ಪೂಜಾರಿ ಎನ್ನುವ ರೈತ ತನ್ನ 8 ಎಕರೆ ಜಮೀನಿನಲ್ಲಿ ಬಹು ಬೆಳೆಪದ್ಧತಿಯಿಂದಾಗಿ ಪ್ರತಿ ತಿಂಗಳು ಒಂದು ಲಕ್ಷ ರೂ.ಆದಾಯ ಗಳಿಸುತ್ತಿದ್ದಾರೆ. ಇದು ಒಬ್ಬ ಸಾಫ್ಟ್ವೇರ್ ಎಂಜನಿಯರ್‌ನ ಸಂಬಳಕ್ಕೆ ಸಮ.
2015 ರಲ್ಲಿ 8 ಎಕರೆ ಜಮೀನಿನಲ್ಲಿ ಬಹುಪದ್ಧತಿ ಬೆಳೆ ಇಟ್ಟರು. ಅಂದರೆ ಪಪ್ಪಾಯಿ(ರೆಡ್‌ಲೆಡಿ) ಐದು ಸಾವಿರ ಬೆಳೆ, ಮೂರು ಸಾವಿರ ದಾಳಿಂಬೆ ಸಸಿ ನಾಟಿ ಮಾಡಿ, ಪಾಲನೆ-ಪೋಷಣೆ ಶುರು ಮಾಡಿದರು. ಮುತುವರ್ಜಿಯ ಕೃಷಿಯಿಂದಾಗಿ ಪ್ರತಿ ವರ್ಷಕ್ಕೆ 350 ಟನ್ ಪಪ್ಪಾಯಿ ಇಳುವರಿ ಸಿಕ್ಕಿತು. ಹಣದ ಲೆಕ್ಕದಲ್ಲಿ ಹೇಳುವುದಾದರೆ ಒಟ್ಟು 12.50 ಲಕ್ಷ ರೂ. ನಿವ್ವಳ ಲಾಭ ಬಂತು.
ಅಲ್ಲದೆ ಲಿಂಬೆ ಗಿಡ, ಮಲ್ಲಿಗೆ, ರಕ್ತಚಂದನ, ತೆಂಗನ್ನು ಮಿಶ್ರ ಬೆಳೆಯನ್ನಾಗಿಸಿಕೊಂಡು ಇವುಗಳಿಂದಲೂ ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ. ಸಧ್ಯ ದಾಳಿಂಬೆ ಬೆಳೆ ಕೂಡ ಉತ್ತಮ ಫಸಲು ಬಂದಿದ್ದು, ಡಿಸೆಂಬರ್ ತಿಂಗಳಲ್ಲಿ ಕಾಯಿ ಬಿಡುವುದರಿಂದ ಮೊದಲನೇ ಮಾರಾಟ ಇದಾಗಿದೆ. ಇದೆಲ್ಲಾ ಕೇವಲ 8 ಎಕರೆಯಲ್ಲಿ ಸಾಧ್ಯ ಎನ್ನುತ್ತಾರೆ ನಂದಕುಮಾರ.
ದಾಳಿಂಬೆ ಮತ್ತು ಪಪ್ಪಾಯಿ ಈ ಎರಡೂ ಬೆಳೆಯಿಂದ 5 ಲಕ್ಷ ರೂ.ಖರ್ಚಾಗಿದೆ. ಎರಡು ಬೆಳೆಗೆ ಒಂದೇ ರೀತಿಯ ಔಷಧಿ ಬಳಸಿದ್ದೇನೆ. ಅಲ್ಲದೆ, ಸಾವಯವ ಗೊಬ್ಬರವನ್ನೇ ಜಾಸ್ತಿ ಬಳಕೆಯಾಗಿದೆ. ಹೀಗಾಗಿ ಖರ್ಚು ಕಡಿಮೆ, ಲಾಭ ಜಾಸ್ತಿ ಎನ್ನುತ್ತಾರೆ ನಂದಕುಮಾರ ಪೂಜಾರಿ.
ಕೃಷಿ ಹೇಗೆ?
ಸಸಿಗಳನ್ನು ತಂದು, ಜಮೀನು ಹದಗೊಳಿಸಿದ ನಂತರ, ಡ್ರಿಪ್ ಹಾಕಿಕೊಂಡು(ಹನಿ ನೀರಾವರಿ ಪದ್ಧತಿ) ಸಾಲಿನಿಂದ ಸಾಲಿಗೆ 10 ಅಡಿ ಹಾಗೂ ಗಿಡದಿಂದ ಗಿಡಕ್ಕೆ 12 ಅಡಿಯಂತೆ ಬಿಟ್ಟು ನಾಟಿ ಮಾಡಿದ್ದಾರೆ. ಇದರಿಂದ ಚಾಟ್ನಿ(ಟೊಂಗೆ ಕಟಿಂಗ್) ಮಾಡುವುದು ಸುಲಭವಾಗುತ್ತದಂತೆ. ನಾಟಿ ನಂತರ ಮೂರು-ನಾಲ್ಕು ತಿಂಗಳು ಬಿಟ್ಟು, ದಾಳಿಂಬೆ ಟೊಂಗೆ ಗಿಡ ಕಟ್ ಮಾಡಬೇಕು. ಪಪ್ಪಾಯಿಗೆ ಬೂದು ರೋಗ, ಎಲೆ ಚುಕ್ಕಿ ಮತ್ತು ದಾಳಿಂಬೆಗೆ ಆತ್ರಕೋಸ್, ಬ್ಯಾಕ್ಟೀರಿಯಾ ತಗಲುವ ಸಾಧ್ಯತೆಗಳು ಹೆಚ್ಚು. ಇವನ್ನು ಸಾಮಾನ್ಯವಾಗಿ ಹತೋಟಿಗೆ ತರಬಹುದು, ವೈರಸ್ ಮಾತ್ರ ಮಾರಕ ರೋಗ. ಇದು ಹರಡದಂತೆ ನೋಡಿಕೊಳ್ಳಬೇಕಷ್ಟೇ ಎನ್ನುತ್ತಾರೆ ನಂದಕುಮಾರ್.
– ಬಾಲಪ್ಪ.ಎಂ.ಕುಪ್ಪಿ