ಖಾನಾಪುರ: ಪ್ರತಿಷ್ಟಿತ ಬಿಡಿಸಿಸಿ ಬ್ಯಾಂಕ್ ಚುನಾವಣೆ ಮುಗಿದರೂ ತಮ್ಮ ಬೆಂಬಲಕ್ಕೆ ನಿಲ್ಲದವರ ಮೇಲೆ ಅಸಮಾಧಾನ ಮಾತ್ರ ಕಮ್ಮಿ ಆಗಿಲ್ಲ. ನಂದಗಡ ಎಪಿಎಂಸಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಮಾಜಿ ಶಾಸಕ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ
ಅರವಿಂದ ಪಾಟೀಲ ತೆರೆಮರೆಯಲ್ಲಿ ಮುಂದಾಗಿದ್ದಾರೆ ಎನ್ನಲಾಗಿದೆ.
ಮಾಜಿ ಶಾಸಕರು ಎಪಿಎಂಸಿ ಅಧ್ಯಕ್ಷರನ್ನು ಬದಲಾಯಿಸಲು ಟೊಂಕ ಕಟ್ಟಿ ನಿಂತಿದ್ದು, ಬಿಜೆಪಿ ನಾಯಕರಿಗೆ ನುಂಗಲಾದ ತುತ್ತಾಗಿದೆ. ಅವಿಶ್ವಾಸ ಮಂಡನೆಯಾದರೆ ಬಿಜೆಪಿ ಮುಖಭಂಗ ಅನುಭವಿಸುವುದರಲ್ಲಿ ಯಾವ ಅನುಮಾನವಿಲ್ಲ. 12 ಜನ ಸದಸ್ಯರಲ್ಲಿ 9 ಜನ ಸದಸ್ಯರು ಮಾಜಿ ಶಾಸಕರ ಸಮರ್ಥಕರಿದ್ದು, ಈಗಾಗಲೆ ಅವರಿಂದ ಸಹಿ ಸಂಗ್ರಹಿಸಲಾಗಿದೆ. ಬಿಜೆಪಿ ಪರವಾಗಿ ಕೇವಲ 3 ಜನ ಸದಸ್ಯರು ಮಾತ್ರ ಇರುವುದರಿಂದ ಅವಿಶ್ವಾಸ ಮಂಡನೆಯಲ್ಲಿ ಸೋಲು ಕಟ್ಟಿಟ್ಟ ಬುತ್ತಿ. ಸಂಖ್ಯಾಬಲದಲ್ಲಿ ಎಂಇಎಸ್ ಮುಂದಿದ್ದು, ಅಧ್ಯಕ್ಷ ಸ್ಥಾನ ಮತ್ತೆ ಮರಳಿ ಪಡೆಯುವುದರಲ್ಲಿ ಅನುಮಾನವಿಲ್ಲ. ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಜಿಲ್ಲಾ ನಾಯಕರ ದ್ವಂದ್ವ ನೀತಿಗಳು ಸ್ಥಳೀಯ ರಾಜಕೀಯದ ಮೇಲೆ ಪರಿಣಾಮ ಬೀರಲಿದೆ.
ಇದನ್ನೂ ಓದಿ:ಮುಚ್ಚಿದ ಸಕ್ಕರೆ ಕಾರ್ಖಾನೆ ಆರಂಭಿಸಿ :ಕಾರ್ಖಾನೆ ಬಂದ್‌ನಿಂದ ಸಾವಿರಾರು ಕಾರ್ಮಿಕರು ಬೀದಿಪಾಲು
ನಿದ್ದೆಗೆಡಿಸಿದ ನಾಯಕರ ನಡೆ: ಮಾಜಿ ಶಾಸಕ ಅರವಿಂದ ಪಾಟೀಲರ ಬೆನ್ನಿಗೆ ಜಿಲ್ಲೆಯ ಬಿಜೆಪಿ ಹಲವು ಘಟಾನುಘಟಿ ನಾಯಕರು ನಿಂತಿರುವುದು ಬಿಜೆಪಿ ಸ್ಥಳೀಯ ನಾಯಕರಿಗೆ ಬಿಸಿತುಪ್ಪದಂತಾಗಿದೆ. ಮಾಜಿ ಶಾಸಕ ಅರವಿಂದ ಪಾಟೀಲರ ಬೆನ್ನಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನಿಂತಿದ್ದು, ಪಕ್ಷದ ನಾಯಕರಿಗೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಪಕ್ಷ ಕಟ್ಟಿ ಬೆಳೆಸಿದ
ನಿಷ್ಟಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಎಂಇಎಸ್ ಮಾಜಿ ಶಾಸಕರಿಗೆ ಜಿಲ್ಲಾ ನಾಯಕರು ಮನ್ನಣೆ ನೀಡುತ್ತಿರುವುದು ಸ್ಥಳೀಯ ನಾಯಕರ ನಿದ್ದೆಗೆಡಿಸಿದೆ.
ಮಾಜಿ ಶಾಸಕರು ಅಧಿಕಾರದಲ್ಲಿರುವ ಬಿಜೆಪಿಯಿಂದ ಲಾಭ ಪಡೆದುಕೊಳ್ಳುತ್ತ ಅದೇ ಪಕ್ಷದ ಎಪಿಎಂಸಿ ಅಧ್ಯಕ್ಷರನ್ನು ಕೆಳಗಿಳಿಸಲು ಮುಂದಾಗಿರುವುದರ ಔಚಿತ್ಯವೇನು ಎಂದು ಬಿಜೆಪಿ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಇನ್ನೊಂದೆಡೆ ಜಿಲ್ಲಾ ಬಿಜೆಪಿ ನಾಯಕರು ಯಾವುದೇ ಕೆಲಸಗಳಿಗೆ ಸ್ಥಳೀಯ ನಾಯಕರನ್ನು ಗಣನೆಗೆ ತೆಗೆದುಕೊಳ್ಳದೆ ಮಾಜಿ ಎಂಇಎಸ್ ಶಾಸಕರನ್ನು ಓಲೈಸುವಲ್ಲಿ ಮಾತ್ರ ಮುಂದಾಗಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ಇದೀಗ ಸಚಿವರಾಗಿರುವ ಉಮೇಶ ಕತ್ತಿಯವರು ಮುಂದೆ ಬಂದು ಬಿಜೆಪಿಯ ಎಪಿಎಂಸಿ ಅಧ್ಯಕ್ಷರನ್ನು ರಕ್ಷಿಸುತ್ತಾರೊ ಇಲ್ಲವೊ ಎನ್ನುವುದನ್ನು ಕಾಯ್ದು ನೋಡಬೇಕಿದೆ. ಒಟ್ಟಿನಲ್ಲಿ ಕೋಣ ಕೆರೆಗೆ ಎಳೆದರೆ ಎತ್ತು ಏರಿಗೆ ಎಳೆಯಿತು ಎನ್ನುವ ಸ್ಥಿತಿ ಬಿಜೆಪಿಯಲ್ಲಾಗಿದೆ.