ಗಲಗಲಿ: ಕಳೆದ ಹತ್ತು ವಾರಗಳ ಹಿಂದೆ ಅಂದರೆ ಎಪ್ಪತ್ತೆçದು ದಿನಗಳ ಹಿಂದೆ ಮನೆಯೊಂದರ ಜಗುಲಿಯ ಮೇಲೆ ದೇವರಮುಂದೆ ಹಚ್ಚಿಟ್ಟ ಪುಟ್ಟದೀಪವೊಂದು ನಿರಂತರ ಬೆಳಗುತ್ತಲಿದ್ದು, ಸ್ಥಳೀಯ ನಾಗರಿಕರಿಗೆ ಆಶ್ಚರ್ಯ ಉಂಟುಮಾಡಿದೆ.
ಹೌದು! ಜಿಲ್ಲೆಯ ಗಲಗಲಿ ಧಾರ್ಮಿಕ ಕ್ಷೇತ್ರ ವೆನಿಸಿದೆ ಆಗಾಗ ಇಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಯಶಸ್ವಿಯಾಗಿ ನಡೆಯತ್ತಲೇ ಇರುತ್ತವೆ. ಈಗ ವಿಶೇಷವೆಂದರೆ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರದ ಕತ್ತಿನವರ ಓಣಿಯ ಬೋರವ್ವಾ ಶ್ರೀಶೈಲಪ್ಪ ಕತ್ತಿಯವರ ಮನೆಯಲ್ಲಿ ದೇವರಮುಂದೆ 75 ದಿನಗಳಹಿಂದೆ ಎಣ್ಣಿಹಾಕಿ ಹಚ್ಚಿದ ಪುಟ್ಟದೀಪವೊಂದು ಮತ್ತೂಮ್ಮೆ ಎಣ್ಣಿಯನ್ನು ಹಾಕದೇ ಇಂದಿನವರೆಗೆ ನಿರಂತರವಾಗಿ ಬೆಳಗುತ್ತಿದೆ.
ದೀಪ ನೋಡಲು ದೌಡು!: ಇಂಥ ಕೌತುಕವೊಂದು ನಡೆದಿರುವ ಕಾರಣಕ್ಕಾಗಿಯೋ ಈ ವಿಷಯ ಜನರಿಂದ ಜನರಿಗೆ ತಲುಪಿದ್ದು ಬೋರವ್ವ ಕತ್ತಿ ಅವರ ಮನೆಗೆ ಗ್ರಾಮಸ್ಥರು ದೌಡಾಯಿಸುತ್ತಿದ್ದಾರೆ. ಆಸ್ತಿಕರೇನಕರು ಅವರಮನೆಗೆ ತೆರಳಿ ದೀಪವನ್ನು ನೋಡಿ ಆಶ್ವರ್ಯ ಹಾಗೂ ಭಕ್ತಿಯಿಂದ ಗಮನಿಸಿ ಕೈಮುಗಿದು ಬರುತ್ತಿದ್ದಾರೆ.
ನಡೆದದ್ದೇನು?: ಮಲ್ಲಿಕಾರ್ಜುನ ಕಂಬಿ ಐದೇಶಿ ನಡೆಯುವ 29 ದಿನಗಳ ಹಿಂದೆ ಅಂದರೆ ಹೋಳಿ ಹುಣ್ಣಿಮೆಯ ಮರುದಿನ ಗಲಗಲಿಯಿಂದ ಶ್ರೀಶೈಲ ಕ್ಷೇತ್ರಕ್ಕೆ ಕಂಬಿಗಳನ್ನು ಕಳಿಸುವ ಕಾರ್ಯಕ್ರಮದಂದು ಪೂಜೆಮಾಡಿ ದೇವರಮುಂದೆ ದೀಪಹಚ್ಚಿ ಒಂದು ತಿಂಗಳು ಮನೆಗೆ ಬೀಗಹಾಕಿ ಕತ್ತಿಯವರ ಮನೆಯವರೆಲ್ಲ ಊರಿಗೆ ತೆರಳಿದ್ದಾರೆ, ತಿಂಗಳ ನಂತರ ಐದೇಶಿ ನಿಮಿತ್ತ ಊರಿಗೆ ಬಂದಾಗ ಆಶ್ವರ್ಯ ಕಾದಿತ್ತು ದೀಪ ಹಾಗೇ ಬೆಳಗುತ್ತಿತ್ತಂತೆ. ಈ ವಿಷಯ ಪಕ್ಕದ ಮನೆಯವರಿಗೆ ತಿಳಿಸಿದ್ದಾರೆ. ಈ ದೀಪ ಇವತ್ತಿಗೆ 75 ದಿನಗಳಿಂದ ಬೆಳಗುತ್ತಿರುವದನ್ನು ನೋಡಿ ಕೆಲವರು ಭಕ್ತಿ ಪರವಶರಾಗಿದ್ದು ಗ್ರಾಮದ ಧಾರ್ಮಿಕ ಗುರುಗಳು ಇದನ್ನು ಕಂಡು ಮೂಕ ವಿಸ್ಮಿತರಾಗಿದ್ದು, ಇದೊಂದು ಕೌತುಕ ಎನ್ನುತ್ತಿದ್ದಾರೆ.
ಕೃಷ್ಣಾ ನದಿಯ ತಟಾಕ, ಧಾರ್ಮಿಕಸ್ಥಾನ, ಗಾಲವಕ್ಷೇತ್ರದಲ್ಲಿ ಇಂಥ ಪವಾಡಗಳು ನಡೆದದ್ದು ಭಕ್ತಿ ಹೆಚ್ಚುವಂತೆ ಮಾಡುತ್ತಿದ್ದು ಇಂತಹ ಘಟನೆಗಳು ನಮ್ಮೂರಿಗೆ ನೆಮ್ಮದಿ ತರಲಿವೆ ಎಂದು ಗ್ರಾಮದ ಸಾಮಾಜಿಕ ಕಾರ್ಯಕರ್ತ ರಮೇಶ ಇಂಗಳಗಾವಿ ಹೇಳಿದರು.